ಮುಸುಕು ತೆಗೆದರೆ ಬೆನ್ನಲ ನಾಲಗೆ ಇದರ
ಹೆಸರು ಬಲ್ಲವರುಂಟೆ ಪೇಳಿರಿ ಜನರೆ ಪ.
ಸತ್ತಿಗೆ ತಲೆಯವಳು ನೆತ್ತಿಲಿ ಬಾಲದವಳು
ಕತ್ತಿನ ಕೆಳಗೆ ಕಪ್ಪಿನ ಕೊಪ್ಪಿನವಳು
ಸುತ್ತೇಳು ಮೈಗೆರಡು ಜೋಡು ಬಂಗಾರ
ಸೃಷ್ಟಿಯೊಳಗೆ ಇದರ ಹೆಸರ ಬಲ್ಲವರುಂಟೆ 1
ಜಡೆ ಮೆರಗುವ ಬಾಲೆ ಒಡಲೊಳಗೆ ಕರುಳಿಲ್ಲ
ಬಿಡದೆ ಪಟ್ಟಾವಳಿಯುಟ್ಟು ಬಲ್ಲವಳು
ಅಡವಿಯೊಳಗೆ ಪುಟ್ಟಿ ಪಡೆದಳು ದೇಹವ
ಪೊಡವಿಯೊಳಗೆ ಇದರ ಹೆಸರು ಬಲ್ಲವರುಂಟೆ 2
ಬೇರಾಗಿ ಬೆರಳೈದು ಮೂರು ತಾನೊಂದಾಗಿ
ಯಾರು ಕಂಡರು ಎಂದು ನಸುನಗುತ
ಸೇರಿದ ಭಕುತರ ಪೊರೆವ ರಂಗಯ್ಯನ
ಸೇರಿ ಮೆಚ್ಚಿಸಿಕೊಳ್ಳೊ ಪುರಂದರವಿಠಲ 3
No comments:
Post a Comment