ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.
ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ
ಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ ಭಕ್ಷಿಸುವುದು 1
ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿ
ಕಡು ಸ್ವರಗಳಿಂದ ಗಾನ ಮಾಡ್ವದು
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು 2
ಕಂಜ ವದನೆಯರ ಕರದಲ್ಲಿ ನಲಿದಾಡುವುದು
ಎಂಜಲನುಣಿಸುವುದು ಮೂರ್ಜಗಕೆ
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿಪ್ಪ
ಸಂಜೀವ ಪಿತ ಪುರಂದರವಿಠಲನೇ ಬಲ್ಲ * 3
No comments:
Post a Comment