ಮನುಜ ಶರೀರವಿದೇನು ಸುಖ - ಇದ
ನೆನೆದರೆ ಘೋರವಿದೇನು ಸುಖ ? ಪ.
ಜನನ - ಮರಣ ಮಲಕೂಪದಲ್ಲಿದ್ದು
ಅನುಭವಿಸುವುದು ಇದೇನು ಸುಖ ?
ತನುವಿದ್ದಾಗಲೇ ಹೃದಯದ ಶೌಚದ
ಸ್ತನಗಳನುಂಬುವುದೇನು ಸುಖ ? 1
ದಿನವು ಹಸಿವು ತೃಷೆ ಘನ ರೋಗಂಗಳ
ಅನುಭವಿಸುವುದು ಇದೇನು ಸುಖ
ನೆನೆಯಲು ನಿತ್ಯ ನೀರ್ಗುಳ್ಳೆಯಂತಿಪ್ಪ
ತನುಮಲಭಾಂಡವಿದೇನು ಸುಖ ? 2
ಪರಿಪರಿ ವಿಧದಲಿ ಪಾಪವ ಗಳಿಸುತ
ನರಕಕೆ ಬೀಳುವುದೇನು ಸುಖ ?
ಪುರಂದರವಿಠಲನ ಮನದಿ ನೆನೆದು ಸ ದ್ಧರುಮದೊಳ್ ನಡೆದರೆ ಆಗ ಸುಖ 3
No comments:
Post a Comment