ಹನುಮಂತ ದೇವ ನಮೋ ಪ
ವನಧಿಯನು ದಾಟಿ ರಾವಣನ ದಂಡಿಸಿದೆ ಅ.ಪ
ಅಂಜನೆಯ ಆತ್ಮದಿಂದುದಿಸಿ ನೀ ಮೆರೆದೆಯೋ
ಕಂಜ ಸಖ ಮಂಡಲಕೆ ಕೈ ದುಡುಕಿದೆ ||
ಭುಂಜಿಸೀರೇಳು ಜಗಂಗಳನು ಉಳುಹಿದೆ ಪ್ರ-
ಭಂಜನಾತ್ಮಜ ಗುರುವೆ ಸರಿಗಾಣೆ ನಿನಗೆ 1
ಹೇಮ ಕುಂಡಲ ಹೇಮ ಯಜ್ಞೋಪವೀತಖಿಳ
ಹೇಮಕಟಿ ಸೂತ್ರ ಕೌಪೀನಧಾರೀ ||
ರೋಮ ಕೋಟಿ ಲಿಂಗ ಸರ್ವಶ್ಯಾಮಲ ವರ್ಣ
ರಾಮಭೃತ್ಯನೆ ನಿನಗೆ ಸರಿಗಾಣೆ ಗುರುವೆ 2
ರಾಮ-ಲಕ್ಷನರ ಕಂಡಾಳಾಗಿ ನೀ ಮೆರೆದೆ |
ಭೂಮಿಜೆಗೆ ಮುದ್ರೆಯುಂಗುರವನಿತ್ತೆ ||
ಆ ಮಹಾ ಲಂಕಾ ನಗರವೆಲ್ಲವನು ಸುಟ್ಟು
ಧೂಮ ಧಾಮವ ಮಾಡಿ ಆಳಿದೆಯೊ ಮಹಾತ್ಮ3
ಆಕ್ಷಯ ಕುಮಾರಕನ ನಿಟ್ಟೊರಸಿ ಬಿಸುಟು ನೀ
ರಾಕ್ಷಸಾಧಿಪ ರಾವಣನು ರಣದಲಿ ||
ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಛೆಯ ಬಗೆಯ
ರಕ್ಷಿಸಿದೆ, ರಕ್ಷಿಸಿದೆ ರಾಯ ಬಲವಂತ 4
ಶ್ರೀಮದಾಚಾರ್ಯ ಕುಲದವನೆಂದೆನಿಸಿದೆಯೈ
ಶ್ರೀ ಮಹಾಲಕುಮಿ ನಾರಾಯಣಾಖ್ಯ ||
ಶ್ರೀ ಮನೋಹರ ಪುರಂದರ ವಿಠಲ ರಾಯನ
ಸೌಮ್ಯಮನದಾಳು ಹನುಮಂತ ಬಲವಂತ 5
No comments:
Post a Comment