Labels

Monday, 7 October 2019

ಲಾಲಿ ಗೋವಿಂದ ಲಾಲಿ ಕೌಸಲ್ಯ laali govinda laali

ಲಾಲಿ ಗೋವಿಂದ ಲಾಲಿ ಕೌಸಲ್ಯ
ಬಾಲ ಶ್ರೀರಾಮ ಲಾಲಿ  ||ಪ||

ಲಾಲಿ ಮುನಿವಂದ್ಯ  ಲಾಲಿ  ಜಾನಕಿ
ರಮಣ  ಶ್ರೀ ರಾಮ  ಲಾಲಿ            ||ಅ. ಪ||

ಕನಕರತ್ನಗಳಲ್ಲಿ  ಕಾಲ್ಗಳನೆ ಹೂಡಿ
ನಾಲ್ಕು ವೇದಗಳನ್ನು ಸರಪಣಿಯ ಮಾಡಿ
ಅನೇಕ ಭೂಮಂಡಲವ ಹಲಗೆಯ ಮಾಡಿ
ಶ್ರೀಕಾಂತನ ಉಯ್ಯಾಲೆಯನು ವಿರಚಿಸಿದರು ||೧||

ಆಶ್ಚರ್ಯಜನಕವಾಗಿ  ನಿರ್ಮಿಸಿದ
ಪಚ್ಚೆಯ ತೊಟ್ಟಿಲಲ್ಲಿ
ಅಚ್ಯುತಾನಂತನಿರಲು  ತೂಗಿದರು
ಮತ್ಸ್ಯಾವತಾರ ಹರಿಯ                           ||೨||

ಧರ್ಮಸ್ಥಾಪಕನು ಎಂದು ನಿರವಧಿಕ
ನಿರ್ಮಲ ಚರಿತ್ರನೆಂದು
ಮರ್ಮ ಕರ್ಮಗಳ ಪಾಡಿ ತೂಗಿದರು
ಕೂರ್ಮಾವತಾರ  ಹರಿಯ                    ||೩||

ಸರಸಿಜಾಕ್ಷಿಯರೆಲ್ಲರು ಜನವಶೀ
ಕರ ದಿವ್ಯರೂಪನೆಂದು
ಪರಮ ಹರುಷದಲಿ ಪಾಡಿ ತೂಗಿದರು
ವರಾಹವತಾರ  ಹರಿಯ                   ||೪||

ಕರಿ ಕುಂಭಗಳ  ಪೋಲುವ ಕುಚದಲ್ಲಿ
ಹಾರ  ಪದಕವು ಹೊಳೆಯಲು
ವರವರ್ಣಿನಿಯರು ಪಾಡಿ ತೂಗಿದರು
ನರಸಿಂಹಾವತಾರ ಹರಿಯ           ||೫||

ಭಾಮಾಮಣಿಯರೆಲ್ಲರು ಯದುವಂಶ
ಸೋಮನಿವನೆಂದು ಪೊಗಳಿ
ನೇಮದಿಂದಲಿ ಪಾಡಿ ತೂಗಿದರು
ವಾಮನವತಾರ ಹರಿಯ              ||೬||

ಸಾಮಜವರದನೆಂದು ಅತುಳ ಭೃಗು
ರಾಮವತಾರನೆಂದು
ಶ್ರೀಮದಾನಂದ ಹರಿಯ ತೂಗಿದರು
ಪ್ರೇಮಾತಿರೇಕದಿಂದ         ||೭||

ಕಾಮನಿಗೆ ಕಾಮನೆಂದು ಸುರಸಾರ್ವ
ಭೌಮ ಗುಣಧಾಮನೆಂದು
ವಾಮನೇತ್ರೆಯರು ಪಾಡಿ ತೂಗಿದರು
ರಾಮಾವತಾರಿಯ ಹರಿಯ   ||೮||

ಸೃಷ್ಟಿಯ ಕರ್ತನೆಂದು ಜಗದೊಳಗೆ
ಶಿಷ್ಟ ಸಂತುಷ್ಟನೆಂದು
ದೃಷ್ಟಾಂತರಹಿತನೆಂದು ತೂಗಿದರು
ಕೃಷ್ಣಾವತಾರ  ಹರಿಯ           ||೯||

ವೃದ್ಧ  ನಾರಿಯರೆಲ್ಲರು ಜಗದೊಳಗೆ ಪ್ರ
ಸಿದ್ಧನಿವನೆಂದು ಪೊಗಳಿ
ಬದ್ಧಾನುರಾಗದಿಂದ ತೂಗಿದರು
ಬೌದ್ಧಾವಾತಾರಿಯ ಹರಿಯ           ||೧೦||

ತಲತಲಾಂತರದಿಂದ ರಂಜಿಸುವ
ಮಲಯಜಲೇಪದಿಂದ
ಜಲಜಗಂಧಿಯರು ಪಾಡಿ ತೂಗಿದರು
ಕಲ್ಕ್ಯಾವತಾರಿಯ ಹರಿಯ           ||೧೧||

ಕನಕಮಯ ಖಚಿತವಾದ ತಲ್ಪದಲಿ
ವನಜಭವ ಜನಕನಿರಲು
ವನಜನಾಭನ್ನ ಪಾಡಿ ತೂಗಿದರು
ವನಿತಮಣಿಯರೆಲ್ಲರು          ||೧೨||

ಪದ್ಮರಾಗವ ಪೋಲುವ ಹರಿಪಾದ
ಪದ್ಮವನುತ್ತಮ ಹೃದಯ
ಪದ್ಮದಲಿ ನಿಲ್ಲಿಸಿ ಪಾಡಿ ತೂಗಿದರು
ಪದ್ಮಿನೀ ಭಾಮಿನಿಯರು         ||೧೩||

ಹಸ್ತಭೂಷಣವ ಮೆರೆಯಲು ದಿವ್ಯತಾರ
ಹಸ್ತಳಗವಗಳಿಂದ
ಹಸ್ತಗಳ ಪಿಡಿದುಕೊಂಡು ತೂಗಿದರು
ಹಸ್ತಿನೀ ಭಾಮಿನಿಯರು         ||೧೪||

ಮತ್ತಗಜಗಾಮಿನಿಯರು ದಿವ್ಯತರ
ಚಿತ್ರ ವಸ್ತ್ರಗಳನುಟ್ಟು
ಚಿತ್ತ ಸಂತೋಷದಿಂದ ತೂಗಿದರು
ಚಿತ್ತಿನಿ ಭಾಮಿನಿಯರು     ||೧೫||

ಕಂಕಣ ಧ್ವನಿಗಳಿಂದ ರಂಜಿಸುವ
ಕಿಂಕಿಣೀಸ್ವರಗಳಿಂದ
ಪಂಕಜಾಕ್ಷಿಯರು ಪಾಡಿ ತೂಗಿದರು
ಶಂಕಿಣಿ ಭಾಮಿನಿಯರು     ||೧೬||

ಚೊಕ್ಕ ಕಸ್ತೂರಿ ಪಂಕದಿಂ ರಂಜಿಸುವ
ಮಾಕರಿಕಾ ಪತ್ರ ಬರೆದು
ಲಿಕುಚಸ್ತನಿಯರು ಪಾಡಿ ತೂಗಿದರು
ಅಕಳಂಕಚರಿತ ಹರಿಯ      ||೧೭||

ಪಲ್ಲವಧಾರೆಯರೆಲ್ಲ ಈ ಶಿಶುವು
ತುಲ್ಯವರ್ಜಿತವೆನುತಲಿ
ಸಲ್ಲಲಿತಗಾನದಿಂದ ತೂಗಿದರು
ಕಲ್ಯಾಣಿರಾಗದಿಂದ           ||೧೮||

ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದಭೈರವಿಯಿಂದ        ||೧೯||

ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವಗಂಧರ್ವರು ಪಾಡಿ ತೂಗಿದರು
ದೇವಗಾಂಧಾರದಿಂದ            ||೨೦||

ನೀಲಘನಲೀಲ ಜೋ ಜೋ ಕರುಣಲ
ವಾಲ ಶ್ರೀಕೃಷ್ಣ ಜೋ ಜೋ
ಲೀಲಾವತಾರ  ಜೋ ಜೋ ಪರಮಾತ್ಮ
ಬಾಲಗೋಪಾಲ  ಜೋ ಜೋ      ||೨೧||

ಇಂಧುಧರಮಿತ್ರ ಜೋ ಜೋ ಶ್ರೀಕೃಷ್ಣ
ಇಂಧು ರವಿನೇತ್ರ ಜೋ ಜೋ
ಇಂಧು  ಕುಲಪುತ್ರ ಜೋ ಜೋ  ಪರಮಾತ್ಮ
ಇಂದಿರಾರಮಣ  ಜೋ ಜೋ         ||೨೨||

ತುಂಗ ಭವಭಂಗ  ಜೋ ಜೋ ಪರಮಾತ್ಮ
ರಂಗ  ಕೃಪಾಂಗ ಜೋ ಜೋ
ಮಂಗಳಾಪಾಂಗ ಜೋ ಜೋ ಮೋಹನಾಂಗ
ರಂಗವಿಠಲನೆ  ಜೋ ಜೋ         ||೨೩||

No comments:

Post a Comment