Labels

Tuesday, 15 October 2019

ಎದುರಾರೊ ಗುರುವೆ ಸಮರಾರೊ edurarai

ಎದುರಾರೊ ಗುರುವೆ ಸಮರಾರೊ ||pa||
ಮದನ ಗೋಪಾಲನ ಪ್ರಿಯ ಜಯರಾಯ ||a.pa||
ಕಡು ಗರ್ಜಿಸುವ ಕೇಸರಿಯಂತೆ ನಿಮ್ಮ ವಾದ
ಗಡಣೆಯ ಕೇಳುತ ನುಡಿ ಮುಂದೋಡದೆ
ಗಡ ಗಡ ನಡಗುತ ಮಾಯ್ಗೋಮಾಯ್ಗಳು
ಅಡವಿಯೊಳಡಗೋರು ನಿಮ್ಮ ಭೀತಿಯಲಿ||1||
ಕುಟಿಲ ಮತಗಳೆಂಬೋ ಚಟುಲಂಧಕಾರಕ್ಕೆ
ಪಟುತರ ತತ್ತ್ವಪ್ರಕಾಶಿಕೆಯೆಂತೆಂಬ
ಚಟುಲಾತಪದಿಂದ ಖಂಡಿಸಿ ತೇಜೋ
ತ್ಕಟದಿ ಮೆರೆದೆ ಬುಧಕಟಕಾಬ್ಜ ಮಿತ್ರ ||2||
ಅಮಿತ ದ್ವಿಜಾವಳಿ ಕುಮುದಗಳರಳಿಸಿ
ವಿಮತರ ಮುಖ ಕಮಲಂಗಳ ಬಾಡಿಸಿ
ಸ್ವಮತರ ಹೃತ್ಸಂತಾಪಗಳೋಡಿಸಿ
ವಿಮಲ ಸುಕೀರ್ತಿಯ ಪಡೆದೆಯೋ ಚಂದ್ರ ||3||
ವೇದಶಾಸ್ತ್ರಗಳೆಂಬೊ ಶೃಂಗಗಳಿಂದ ಸು
ಧಾದಿ ಗ್ರಂಥಗಳೆಂಬೊ ಸ್ತನದಿಂದೊಪ್ಪುತ ತತ್ತ್ವ
ಬೋಧನೆಯೆಂಬ ದುಗ್ದ ಶಿಷ್ಯವತ್ಸಂಗಳಿಗೆ
ಆದರದಲಿ ಕೊಟ್ಟ ಯತಿಸುರಧೇನು ||4||
ವ್ಯಾಸಸೂತ್ರಗಳೆಂಬ ಮಂದರವನು ವೇದ
ರಾಶಿಯೆಂಬ ವಾರಾಶಿಯೊಳಿಟ್ಟು
ಶ್ರೀ ಸರ್ವಜ್ನರ ವಾಕ್ಯಪಾಶದಿ ಸುತ್ತಿ
ಭಾಸುರ ನ್ಯಾ ಸುಧಾ ಪಡೆದೆ ಯತೀಂದ್ರ||5||
ವನಜನಾಭನ ಗುಣಮಣಿಗಳ ಸರ್ವಜ್ನ-
ಮುನಿಕೃತ ಗ್ರಂಥಗಳವನಿಯೊಳಡಗೆ ಸ-
ಜ್ಜನರಿಗೆ ಟೀಕಾಂಜನದಿಂದ ತೋರಿಸಿ
ಘನ ಸುಖಸಾಧನ ಮಾಡಿದ್ಯೋ ಧೀರ||6||
ಅರ್ಥಿಮಂದಾರ ವೇದಾರ್ಥವಿಚಾರ ಸ-
ಮರ್ಥ ಶ್ರೀ ಕೃಷ್ಣ ಪಾದಾಂಬುಜಲೋಲ ಪ್ರ-
ತ್ಯರ್ಥಿ ಮತ್ತೇಭಕಂಠೀರವ ಕ್ಷೋಭ್ಯ-
ತೀರ್ಥ ಕರಜ ಜಯತೀರ್ಥ ಯತೀಂದ್ರ ||7||

4 comments: