ದಾಸ ಶೇಷಾದ್ರಿಯ ವಾಸ ತಿಮ್ಮಪ್ಪನ | ದಾಸನನು ಕರೆದೊಯ್ದು ||
ಸಾಸಿರನಾಮ ವಿಲಾಸನ ಮೂರ್ತಿಯ | ಲೇಸಾಗಿ ತೋರೆನಗೆ ಪ
ಬೆರಳು ಇಲ್ಲದ ಕೈಯೊಳುಂಡು ಜೀವಿಸುವನ | ಶಿರದ ಅಂದದ ದೇವನ ||
ಉರುವ ಶಾಪಕೆ ತಾನು ಕಿರಿದಾಗಿ ಇರುವನ | ಶಿರದೊಳು ಧರಿಸಿದನ ||
ಕೊರಳ ಮಾಲೆಯ ಪೆಸರೊಪ್ಪಿದ ಗಿರಿಯೊಳು | ಸ್ಥಿರವಾಗಿ ನೆಲಸಿಪ್ಪನ ||
ಕರುಣವಾರಿಧಿ ವೆಂಕಟೇಶನ ಚರಣವ | ಕರೆದೊಯ್ದು ತೋರೆನಗೆ 1
ವಾರಿಯೊಳುದಿಸಿದ ನಾರಿಯ ಮಧ್ಯದಿ | ಏರಿಯೆ ಕುಳಿತವನ ||
ವಾರಿಜ ವದನದಿ ತೋರಿದ ಸಾರದಿ | ಮೂರೊಂದು ಪೆಸರವನ ||
ಮೇರುವಿನಗ್ರದಿ ಊರಿದ ಚರಣವ | ಸಾರಿದವರ ಜೀವನ ||
ಊರಿಗೆ ಕರೆದೊಯ್ದು ಶ್ರೀ ವೆಂಕಟೇಶ ಪದಾರವಿಂದವ ತೋರೆನಗೆ 2
ಸೋತ ಮಾನಿನಿಯೊಳು ಜಾತವಾಗಿಯೆ ಮೇಲೆ | ಮಾತೆಯ ಸಲಹಿದನ ||
ನೀತಿ ತಪ್ಪಿಯೆ ನಡೆವ ವಾತಭಕ್ಷಕರನ್ನು | ಘಾತಿಸಿ ತರಿದವನ ||
ನೂತನವಾಗಿಹ ನಾಮ ಶೈಲದ ಮೇಲೆ | ಕಾತರದೊಳು ನಿಂದನ ||
ಪಾತಕನಾಶನ ಶ್ರೀವೆಂಕಟೇಶನ | ರೀತಿಯ ತೋರೆನಗೆ 3
ಋಷಿಯ ಮಕ್ಕಳನೆಲ್ಲ ಹಸಿವಿಗೆ ಗುರಿಮಾಡಿ | ವಶತಪ್ಪಿ ನಡೆವವನ ||
ಬಸಿರೊಳಗುದಿಸಿಯೆ ಬಿಸಿಯನೆಲ್ಲವ ಅಂದು | ಎಸೆವ ಮಹಾವೀರನ ||
ಪೆಸರೊಳಗೊಪ್ಪಿದ ಹಸನಾದ ಗಿರಿಯೊಳು | ಕುಶಲದಿ ನಿಂದವನ ||
ನಸುಮುದ್ದು ಶ್ರೀ ವೆಂಕಟೇಶನ ಚರಣದ | ಬಿಸರುಹ ತೋರೆನಗೆ 4
ಪಾದ ನಾಲ್ಕನು ಮೋದಿನಿಯೊಳಗೂರಿಯೆ | ಆದರಿಸುತ ಬಪ್ಪನ ಮೇ ||
ಲಾದ ಪಾದವ ನಾಲ್ಕು ಅಂತರಿಕ್ಷದ ಮೇಲೆ | ಕಾದು ಕೊಳ್ಳುತಲಿಪ್ಪನ ||
ಆದಿಯ ನಾಮಕ್ಕೆ ಅದ್ರಿಯನೊಡಗೊಂಡು | ಹಾದಿಯನಿತ್ತವನ ||
ಸಾಧಿಸಿ ಇಂತಹ ಶ್ರೀ ವೆಂಕಟೇಶನ | ಪಾದವ ತೋರೆನಗೆ 5
ಆದಿನಾರಾಯಣನೆಂಬ ಪರ್ವತನು | ಭೇದಿಸಿ ನಿಂತವನ ||
ಸಾಧಿಸಿ ಮುಂದಣ ವೆಂಕಟಾದ್ರಿಯ ಮೇಲೆ |
ಪಾದವನೂರಿದನ || ಮೇದಿನಿಯೊಳಗುಳ್ಳ ಸಾಧುಭಕ್ತರನೆಲ್ಲ |
ಕಾದುಕೊಳ್ಳುತಲಿಪ್ಪನ - ವಿನೋದ ಮೂರುತಿಯಾದ ಶ್ರೀ ವೆಂಕಟೇಶನ |
ಪಾದವ ತೋರೆನಗೆ 6
ಅತ್ತೆಯ ವರಿಸೆಯೆ ಮೆತ್ತ ಅಳಿಯಗಾದ | ಪುತ್ರಿಯ ತಂದವನ ||
ಉತ್ತಮವಾಗಿಹ ಮಗಳ ಸನ್ನಿಧಿಯಲ್ಲಿ | ನಿತ್ಯದೊಳಿರುತಿಪ್ಪನ ||
ಬತ್ತಲೆಯಾಗಿಹ ಸತಿಯಳ ಸತ್ಯಕ್ಕೆ | ಪುತ್ರನೆಂದೆನಿಸಿದನ ||
ಹತ್ತಿರ ಕರೆದೊಯ್ದು ಪುರಂದರವಿಠಲನ | ನಿತ್ಯದಿ ತೋರೆನಗೆ 7
No comments:
Post a Comment