Labels

Thursday, 16 January 2020

ಆಡಿದನೋ ರಂಗ ಅದ್ಭುತದಿಂದಲಿ aadidano ranga adbhutadindali

ಆಡಿದನೋ ರಂಗ ಅದ್ಭುತದಿಂದಲಿ
ಕಾಳಿಂಗನ ಫಣೆಯಲಿ                                      ||ಪ||
ಪಾಡಿದವರಿಗೆ ಬೇಡಿದ ವರಗಳ
ನೀಡುತಲಿ ದಯ ಮಾಡುತಲಿ
ನಲಿದಾಡುತಲಿ ಬೆಣ್ಣೆ ಬೇಡುತಲಿ ಕೃಷ್ಣ                 ||ಅ.ಪ||
ಅಂಬುರುಹೋದ್ಭವ ಅಖಿಳ ಸುರರು ಕೂಡಿ
ಅಂಬರದಲಿ ನಿಂತು ಅವರ ಸ್ತುತಿಸೆ
ರಂಭೆ ಊರ್ವಶಿ ರಮಣಿಯರೆಲ್ಲರು
ಚಂದದಿಂ ಭರತನಾಟ್ಯವ ನಟಿಸೆ
ಝಂತಟ ತಕಧಿಮಿ ತಧಿಗಿಣಿ ತೋಂ ಎಂದು
ಝಂಪೆ ತಾಳದಿ ತುಂಬುರುನೊಪ್ಪಿಸೆ
ಧಾ ಮ ಪ ಧ ಸ ರೀ ಎಂದು ಧ್ವನಿಯಿಂದ ನಾರದ
ತುಂಬುರು ಗಾನವ ಮಾಡಲು ನಂದಿಯು ಮದ್ದಲೆ
ಚೆಂದದಿ ಹಾಕಲು                                              ||೧||
ಫಣವ ಮೆಟ್ಟಿ ಬಾಲವ ಕೈಯಲಿ ಪಿಡಿದು
ಫಳಫಳಿಸುತ್ತ ನಾಟ್ಯವನಾಡೆ
ಚಂದ್ರಮಂಡಲದಂತೆ ಪೊಳೆಯುವ
ಮುಖದೊಳು ಚಲಿಸುವ ನೀಲಕೇಶಗಳಾಡೆ
ಕಾಲಲಂದುಗೆ ಗೆಜ್ಜೆ ಘಲು ಘಲು ಘಲುರೆನುತ
ಉಡಿಗೆಜ್ಜೆ ಘಂಟೆಗಳಾಡೆ
ದುಷ್ಟ ಕಾಳಿಂಗನ ಮೆಟ್ಟಿ ಭರದಿಂದ
ಪುಟ್ಟ ಪಾದವ ಇಟ್ಟು ಶ್ರೀ ಕೃಷ್ಣನು
ಮೆಟ್ಟಿದನು ತಕ ಧಿಮಿ ತಧಿಕೆನುತ                         ||೨||
ಸುರರು ಪುಷ್ಪದ ವೃಷ್ಟಿಯ ಕರೆಯಲು
ಸುದತಿಯರೆಲ್ಲರು ಪಾಡಲು
ನಾಗಕನ್ನಿಕೆಯರು ನಾಥನ ಬೇಡಲು
ನಾನಾ ವಿಧದಿ ಸ್ತುತಿ ಮಾಡಲು
ರಕ್ಕಸರೆಲ್ಲರು ಕಕ್ಕಸವನೆ ಕಂಡು
ದಿಕ್ಕು ದಿಕ್ಕುಗಳಿಗೆ ಓಡಲು
ಚಿಕ್ಕವನಿವನಲ್ಲ ಪುರಂದರವಿಠ್ಠಲ
ವೆಂಕಟರಮಣ ಬೇಗ ಯಶೋದೆ
ಬಿಂಕದೊಳೆತ್ತಿ ಮುದ್ದಾಡೆ ಶ್ರೀ ಕೃಷ್ಣನ                   ||೩||

No comments:

Post a Comment