ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||
No comments:
Post a Comment