ಸಾಮಾನ್ಯವಲ್ಲ ಶ್ರೀ ಹರಿಸೇವೆ ಪ.
ಪಾಮರಜನರಿಗೆ
ಸಾಮಜವರದನ ಪ್ರೇಮದಿ ನೆನೆವುದು
ತಾಮಸ ಬುದ್ಧಿಯ ತಾ ತಗ್ಗಿಸದೆ ಅಪ
ಅಂತರ ಮಲಿನವಳಿಯಲು ಬೇಕು ಸಂತತ ಶ್ರವಣದಿ ಶ್ರೀ
ಕಾಂತನ ಚರಿತವ ಕೇಳಲು ಬೇಕು ಸಂತಸದಿರಬೇಕು
ಸಂತ ಜನರ ಗುಣ ಸಂತತ ಮನದಿ ನಿ
ರಂತರದಲಿ ತಾ ಚಿಂತಿಸಬೇಕು 1
ಜ್ಞಾನ ಕರ್ಮೇಂದ್ರಿಯಗಳ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ
ಹಾನಿ ವೃದ್ಧಿಗಳೆರಡನು ತಾ ಸಹಿಸಿ ದೀನತೆಯನು ವಹಿಸಿ ||
ಮಾನಾಪಮಾನ ಸಮಾನವೆಂದರಿದು ನಿ
ಧಾನದಿ ಹರಿಗುಣ ಧ್ಯಾನವ ಮಾಳ್ಪುದು2
ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು
ಸರ್ವರ ಧಣಿ ಸ್ವರಮಣನೆಂದು ಸರ್ವಾನುರಾಗನೆಂದು
ಸರ್ವ ಮೂರುತಿ ಶ್ರೀ ಪುರಂದರವಿಠಲನ
ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು3
No comments:
Post a Comment