ರಂಗ ಕೊಳಲನೂದಲಾಗ |
ಮಂಗಳಮಯವಾಯ್ತು ಧರೆ -ಜ - ಪ
ನಂಗಳು ಚೈತನ್ಯ ಮರೆದು |
ರಂಗಧ್ಯಾನಪರರಾದರು ಅ.ಪ
ಬಾಡಿದ ಮಾಮರಗಳು ಗೊನೆಯೊಡೆದವು |
ತೀಡುತ ಮಾರುತ ಮಂದಗತಿಗೊಯ್ಯೆ ||
ಬಾಡಿದ ಬರಲು ಫಲದ ಗೊಂಚಲು |
ಪಾಡಲೊಲ್ಲವಳಿಕುಲಗಳು ||
ಹೇಡಿಗೊಂಡವು ಜಕ್ಕವಕ್ಕಿ ಗಿಳಿ ಮಾ-|
ತಾಡದೆ ಕಳೆಗುಂದಿದವು ಕೋಗಿಲೆ ||
ಓಡಾಟ ವೈರಾಟ ಬಿಟ್ಟು ಖಗಮೃಗ |
ಗಾಢ ನಿದ್ರಾವಶವಾದವು 1
ಕೆಳಗಿನುದಕ ಉಬ್ಬೇರಿ ಬಂದುವು |
ತುಳುಕಿ ಚೆಲ್ಲಾಡಿ ನಿಂದಳು ಯಮುನೆ ||
ಮಳೆಯ ಮೋಡೊಡ್ಡಿ ಮೇಘಾಳಿ ಧಾರಿಟ್ಟುವು |
ಕಲುಕರಗಿ ಕರಗಿ ನೀರಾದುವು ||
ನಳಿನ ಚಂಪಕ ನಾಗ ಪುನ್ನಾಗ ಪಾ-|
ಟಲ ಸೇವಂತಿಗೆ ಕುಂದ-ಮೊಲ್ಲೆ ಮಲ್ಲಿಗೆ ಬ-||
ಕುಲ ಮಾಲತಿ ಜಾಜಿ ಪರಿಮಳಗೂಡಿ |
ನೀಲಾಂಗನಂಘ್ರಿಗೆ ನೆರೆದುವು 2
ಕೆಚ್ಚಲು ಬಿಗಿದು ತೊರೆದ ಮೊಲೆಯೊಳು |
ವತ್ಸದೊಡಲಾಸೆ ಜರಿದು ಎಳೆಹಲ್ಲ||
ಕಚ್ಚದಲ್ಲಿಗಲ್ಲಿ ನಿಂದುವು ತಮ್ಮಯ |
ಪುಚ್ಚವ ನೆಗಹಿ ನೀಂಟಿಸಿ ||
ಅಚ್ಯುತನಾಕೃತಿ ನೋಡಲು ಸುರರಿಗೆ |
ಅಚ್ಚರಿಯಾಯಿತು ಆವು ಕಂಡಾನಂದ ||
ಪೆಚ್ಚಿ ಮುಕುಂದನ ಲೀಲಾವಿನೋದಕೆ |
ಮೆಚ್ಚಿ ಕುಸುಮವ ಸುರಿದರು 3
ಮುದ್ದು ಮೋಹನನ ಮಂಜುಳ ಸಂಗೀತ |
ಸದ್ದನಾಲಿಸಿ ಗೋಪಾಂಗನೆಯರೆಲ್ಲ ||
ಬುದ್ಧಿ ಸೂರಾಡಿ ತಮ್ಮಾಲಯವನೆ ಬಿಟ್ಟು |
ಎದ್ದು ಪರವಶರಾದರು ||
ಸಿದ್ದ ಮುನಿಜನರಿದ್ದ ಸಮಾಧಿಯಿಂ-|
ದೆದ್ದೆದ್ದು ಕುಣಿದೆದ್ದರು ಎದುರಾಗಿ ||
ಗದ್ದುಗೆಯರಸನ ಒಲಿಸಿಕೊಂಡರು |
ಗೆದ್ದರು ಭವದ ಸಮುದ್ರವನು 4
ಶ್ರೀಮನೋಹರ ಗೋಪಾಲ ಮೂರುತಿ |
ಆ ಮಧು ಕುಂಜ ವನದಿ ತ್ರಿಭಂಗಿಯಲಿ ||
ಹೇಮಾಂಬರವುಟ್ಟು ಗೀರುಗಂಧ ಕಸ್ತೂರಿ |
ನಾಮ ಮುಕುಟದ ಬೆಳಕಿನಲಿ ||
ದಾಮ ವನಮಾಲೆ ಶ್ರೀವತ್ಸ ಕೌಸ್ತುಭ |
ಸ್ವಾಮಿ ಪುರಂದರವಿಠಲರಾಯನ |
ರಾಮಶ್ರಿ-ಗುಂಡಶ್ರಿ ಮೇಘರಂಜನೆ ಪಾಡಿ |ಸಾಮಗಾನಪ್ರಿಯ ನಮೊ ಎಂದರು 5
No comments:
Post a Comment