Labels

Tuesday, 17 December 2019

ರಂಗನಾಯಕಸ್ವಾಮಿ ರಾಜೀವಲೋಚನ ranganaayaka raajeevlochana

ರಂಗನಾಯಕಸ್ವಾಮಿ ರಾಜೀವಲೋಚನ ಬೆಳಗಾಯಿತೇಳೆನ್ನುತ
ಅಂಗನೆ ಲಕುಮಿ ತಾ ಪತಿಯನೆಬ್ಬಿಸಿದಳು ಶೃಂಗಾರದ ನಿದ್ರೆ ಸಾಕೆನ್ನುತ ಪ.

ಪಕ್ಷಿರಾಜನು ಬಂದು ಬಾಗಿಲೊಳಗೆ ನಿಂದು
ಅಕ್ಷಿ ತೆರೆದು ಬೇಗ ಈಕ್ಷಿಸೆಂಬ ||
ಪಕ್ಷಿಜಾತಿಗಳೆಲ್ಲ ಚಿಲಿಪಿಲಿಗುಟ್ಟುತ
ಸೂಕ್ಷ್ಮದಲಿ ನಿನ್ನನು ಸ್ಮರಿಸುವುವೊ ಕೃಷ್ಣ 1
ಸನಕ - ಸನಂದನ - ಸನತ್ಸುಜಾತರು ಬಂದು
ವಿನಯದಿ ಕೈಮುಗಿದು ಓಲೈಪರು ||
ಘನ ಶುಕ - ಶೌನಕ - ವ್ಯಾಸ ವಾಲ್ಮೀಕರು
ನೆನೆದು ಕೊಂಡಾಡುವರೊ ಹರಿಯೇ 2
ಸುರರು ಕಿನ್ನರರು ಕಿಂಪುರುಷರು ಉರಗರು
ಪರಿಪರಿಯಲಿ ನಿನ್ನ ಸ್ಮರಿಸುವರು ||
ಅರುಣನು ಬಂದುದಯಾಚಲದಲ್ಲಿ ನಿಂದ
ಕಿರಣ ತೋರುವ ಭಾಸ್ಕರನು ಶ್ರೀ ಹರಿಯೇ 3
ಪದುಮನಾಭನೆ ನಿನ್ನ ನಾಮಾಮೃತವನು
ಪದುಮಾಕ್ಷಿಯರು ತಮ್ಮ ಮನೆಯೊಳಗೆ ||
ಉದಯದೊಳೆದ್ದು ಸವಿದಾಡುತ ಪಾಡುತ
ದಧಿಯ ಕಡೆವರೇಳು ಮಧುಸೂದನ ಕೃಷ್ಣ 4
ಮುರುಮಢನನೆ ನಿನ್ನ ಚರಣದ ಸೇವೆಯ
ಕರುಣಿಸಬೇಕೆಂದು ತರುಣಿಯರು ||
ಪರಿಪರಿಯಿಂದಲಿ ಸ್ಮರಿಸಿ ಹಾರೈಪರು
ಪುರಂದರವಿಠಲ ನೀನೇಳೊ ಹರಿಯೇ 5

No comments:

Post a Comment