ನಗೆಯು ಬರುತಿದೆ - ಎನಗೆ
ನಗೆಯು ಬರುತಿದೆ ಪ.
ಜಗದೊಳಿದ್ದ ಮನುಜರೆಲ್ಲ
ಹಗರಣ ಮಾಡುವುದ ನೋಡಿ ಅಪ
ಪರಸತಿಯರ ಒಲುಮೆಗೊಲಿದು
ಹರುಷದಿಂದ ಅವರ ಬೆರೆದು
ಹರಿವ ನೀರಿನೊಳಗೆ ಮುಳುಗಿ
ಬೆರೆಳನೆಣಿಸುವರ ಕಂಡು 1
ಪತಿಯ ಸೇವೆ ಬಿಟ್ಟು, ಪರ
ಸತಿಯ ಕೂಡೆ ಸರಸವಾಡಿ
ಸತತ ಮೈಯ ತೊಳೆದು ಹಲವು
ವ್ರತವ ಮಾಡುವರ ಕಂಡು 2
ಹೀನಗುಣವ ಮನದೊಳಿಟ್ಟು
ತಾನು ವಿಷದ ಪುಂಜನಾಗಿ
ಮಾನಿ ಪುರಂದರವಿಠಲನ
ಧ್ಯಾನ ಮಾಡುವವರ ಕಂಡು 3
No comments:
Post a Comment