Labels

Sunday 9 February 2020

ಕಂಡೆನಾ ಕನಸಿನಲಿ ಗೋವಿಂದನಪ kandena kanasali govindana


ಕಂಡೆನಾ ಕನಸಿನಲಿ ಗೋವಿಂದನಪ
ಕಂಡೆನಾ ಕನಸಿನಲಿ ಕನಕರತ್ನದ ಮಣಿಯ |
ನಂದನ ಕಂದ ಮುಕುಂದನ ಚರಣವ ಅ.ಪ
ಅಂದುಗೆ ಕಿರುಗೆಜ್ಜೆ ಘಲಿರೆಂಬ ನಾದದಿ
ಬಂದು ಕಾಳಿಂಗನ ಹೆಡೆಯನೇರಿ ||
ಧಿಂಧಿಮಿ ಧಿಮಿಕೆಂದು ತಾಳಗಳಿಂದಾ
ನಂದದಿ ಕುಣಿವ ಮುಕುಂದನ ಚರಣವ 1
ಉಟ್ಟ ಪೀತಾಂಬರ ಉಡಿಯ ಕಾಂಚಿಯ ದಾಮ
ತೊಟ್ಟ ಮುತ್ತಿನ ಹಾರ ಕೌಸ್ತುಭವು ||
ಕಟ್ಟಿದ ವೈಜಯಂತಿ ತುಲಸಿಯ ವನಮಾಲೆ
ಇಟ್ಟ ದ್ವಾದಶನಾಮ ನಿಗಮಗೋಚರನ 2
ಕಿರುಬೆರಳಿನ ಮುದ್ರೆಯುಂಗುರ ಮುಂಗಡೆ
ಕರದಲಿ ಕಂಕಣ ನಳಿತೋಳುಗಳ ||
ವರಚತುರ್ಭುಜ ಶಂಖಚಕ್ರದಿ ಮೆರೆವನ
ನಿರುತದಿ ಒಪ್ಪುವ ಕರುಣಾ ಮೂರುತಿಯ3
ಬಣ್ಣದ ತುಟಿ ಭಾವರಚನೆಯ ಸುಲಿಪಲ್ಲ
ಸಣ್ಣ ನಗೆಯ ನುಡಿ ಸವಿಮಾತಿನ ||
ಪುಣ್ಯ ಚರಿತ್ರನ ಪೊಳೆವ ಕಿರೀಟನ
ಕಣ್ಣು ಮನ ತಣಿಯದ ಕಂಸಾರಿ ಕೃಷ್ಣನ 4
ಮಂಗಳ ವರತುಂಗಭದ್ರದಿ ಮೆರೆವನ
ಅಂಗಜಪಿತ ಶ್ರೀ ಲಕ್ಷ್ಮೀಪತಿಯ ||
ಶೃಂಗಾರ ಮೂರುತಿ ಪುರಂದರ ವಿಠಲನ
ಕಂಗಳಿಂದಲಿ ಕಂಡೆ ಹಿಂಗಿತು ಭವಭಯ 5


No comments:

Post a Comment