ವೃಂದಾವನೀ ದೇವಿ ವಂದಿಸುವೆ ಶ್ರೀ ತುಳಸಿ
ಮಂದಿರಳೆ ನಿನ್ನಪದಕೆ
ವಂದಾರು ಜನತತಿಗೆ ಮಂದಾರಳೆನಿಸಿರುವಿ
ಸಂದೇಹವಿಲ್ಲವಿದಕೆ ||
ಅಂದು ಧನ್ವಂತರಿಯು ತಂದಿರುವ ಪೀಯೂಷ
ದಿಂದ ಪೂರಿತ ಕಲಶದಿ
ಇಂದಿರಾಪತಿಯ ಆನಂದ ಬಾಷ್ಪೋದಕದ
ಬಿಂದು ಬೀಳಲು ಜನಿಸಿದಿ||
ಶ್ರೀ ತುಳಸಿ ನಿನ್ನನು ನಿಕೇತನದಿ ಪೂಜಿಪರ
ಪಾತಕವ ಪರಿಹರಿಸುವಿ
ಶ್ರೀ ತರುಣಿಪತಿಗೆ ಬಲುಪ್ರೀತಿ ವಿಷಯಳೆನಿನ್ನ
ನಾ ಸ್ತುತಿಸಲೆಂತು ಜನನಿ ||
ಸರ್ವ ತೀರ್ಥಗಳೆಲ್ಲ ತರುಮೂಲದಲ್ಲಿಹವು
ಸರ್ವ ವಿಬುಧರು ಮಧ್ಯದಿ
ಸರ್ವ ವೇದಗಳೆಲ್ಲ ತರುಅಗ್ರಭಾಗದಲಿ
ಇರುತಿಹರು ಬಿಡದೆ ನಿರುತ ||
ತುಳಸಿ ನಿಮ್ಮಯ ಲಕ್ಷದಳಗಳಿಂದಲಿ
ಲಕ್ಷ್ಮಿನಿಲಯನಂಘ್ರಿಗಳರ್ಚಿಸಿ
ಕಲುಷ ವರ್ಜಿತನಾಗಿ ಬಲುಬೇಗ ಶ್ರೀಹರಿಯ
ಒಲುಮೆ ಪಡೆವನು ಜಗದೊಳು ||
ತುಳಸಿ ದೇವಿಯೆ ನಿನಗೆ ಜಲವೆರೆದು ಕುಂಕುಮದ
ತಿಲಕವಿಡುತಲಿ ನಿತ್ಯದಿ
ಲಲನೆಯರು ಪೂಜಿಸಲು ಒಲಿದಿತ್ತು ಸೌಭಾಗ್ಯ
ಸಲಹುವಿಯೆ ಕರುಣದಿಂದ ||
ಮಾಧವ ಪ್ರಿಯ ತುಳಸಿ ಸಾದರದಿ ನಿನ್ನೊಳಗೆ
ಶ್ರೀದೇವಿ ನಿಂದಿರುವಳು
ಮೋದಮುನಿ ಶಾಸ್ತ್ರವನು ಬೋಧಿಸುವ ಬುಧಜನರ
ಪಾದಸೇವೆಯ ಕರುಣಿಸು ||
ಮಿತ್ರನುದಯದಲೆದ್ದು ಚಿತ್ತನಿರ್ಮಲರಾಗಿ
ಭಕ್ತಿಯಲಿ ಶ್ರೀ ತುಳಸಿಯ
ಮೃತ್ತಿಕೆಯ ಧರಿಸಿದ ಮಹಾತ್ಮರನು ಕಂಡು ಯಮ
ಭೃತ್ಯರಂಜುವರು ಭಯದಿ ||
ಇಂತು ಶ್ರೀತುಳಸಿ ಸೀಮಂತಿನಿಯ ಸ್ತೋತ್ರವ ನಿ-
ರಂತರದಿ ಪಠಿಸುವವರ
ಚಿಂತಿತ ಪ್ರದನಾಗಿ ನಿಂತು ಕಾರ್ಪರದಿ ಸಿರಿ
ಕಾಂತ ನರಹರಿ ಪೊರೆವನು 9||
No comments:
Post a Comment