ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.
ಏಳುತುದಯ ಕಾಲದಲ್ಲಿ |
ವೇಳೆಯರಿತು ಕೂಗುವಂಥ ||
ಕೋಳಿ ತನ್ನ ಮರಿಗೆ ಮೊಲೆಯ |
ಹಾಲಕೊಟ್ಟು ಸಲಹಿತೆ ? 1
ಸಡಗರದಲಿ ನಾರಿಜನರು |
ಹಡೆಯುವಾಗ ಸೂಲಗಿತ್ತಿ ||
ಅಡವಿಯೊಳಗೆ ಹೆರುವ ಮೃಗವ |
ಪಿಡಿದು ರಕ್ಷಣೆ ಮಾಳ್ಪರಾರು 2
ಹೆತ್ತ ತಾಯಿ ಸತ್ತ ಶಿಶುವು |
ಮತ್ತೆ ಕೆಟ್ಟಿತೆಂಬರು ಜನರು ||
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |
ನಿತ್ತು ರಕ್ಷಣ ಮಾಡುವರಾರು 3
ಗಟ್ಟಿಮಣ್ಣಿನ ಶಿಶುವ ಮಾಡಿ |
ಹೊಟ್ಟೆಯೊಳಗೆ ಇರಿಸುವಂಥ ||
ಕೊಟ್ಟ ದೈವ ಕೊಂಡೊಯ್ದರೆ |
ಕುಟ್ಟಿಕೊಂಡು ಅಳುವುದೇಕೆ 4
ನಂಬಿಗೆಗಿವು ಸಾಲವೆಂದು |
ಹಂಬಲಿಪುದು ಲೋಕವೆಲ್ಲ ||
ನಂಬಿ ಪುರಂದರವಿಠಲ - |
ನೆಂಬ ನಾಮ ನುಡಿದ ಮೇಲೆ 5
No comments:
Post a Comment