ಛೀ ಛೀ ಛೀ ಛೀ ಕಂಡೆಯ ಮನವೇ ಇಂಥ
ನೀಚ ವೃತ್ತಿಗಳನು ಬಿಡು ಕಂಡೆಯ ಮನವೆ ಪ.
ಕಿವಿಗೊಟ್ಟು ಮಧುರನಾದಕೆ ಹುಲ್ಲೆಯು
ರವದ ಬಲೆಗೆ ಸಿಕ್ಕಿಬಿದ್ದುದನರಿಯ
ನವಮೋಹನಾಂಗಿಯರ ಕೋಕಿಲಾಪದ
ಸವಿ ಕೇಳದಾತನ ಕಥೆ ಕೇಳು ಮನವೇ 1
ನಲಿದೆದ್ದು ಕರಿ ಎಳೆಯ ತೃಣ ಸ್ಪರುಷನಕಾಗಿ
ಕುಳಿಗೆ ಬಿದ್ದಿರುವುದ ಕಂಡು ಕಂಡರಿಯ
ನಳಿನಾಕ್ಷಿಯರಂಗಸಂಗವ ಮೆಟ್ಟಿ ಕೆಡದೆ ಶ್ರೀ
ಲಲನೇಶನಂಘ್ರಿಯಾನಪಿವೇಕೋ ಮನವೇ 2
ಗಾಣದ ತುದಿಯ ಮಾಂಸವ ಮೆಲುವ ಮತ್ಸ್ಯವು
ಪ್ರಾಣವ ಬಿಡುವುದ ಕಂಡು ಕಂಡರಿಯ ?
ಮಾನಿನಿಯ ಬಯಸದೆ ಶ್ರೀ ನಾರಾಯಣನ
ಧ್ಯಾನಾಮೃತವನು ಸವಿದುಣ್ಣೋ ಮನವೆ3
ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದು
ಕಣ್ಣುಗೆಡುವುದನು ಕಂಡು ಕಂಡರಿಯ ?
ಬಣ್ಣರ ಬಾಲೆಯರ ರೂಪಕೆ ಮರುಳಾಗಿ
ಮಣ್ಣು ತಿನ್ನದೆ ಮಾರನಯ್ಯನ ನೆನೆ ಮನವೆ 4
ಅಳಿ ಪರಿಮಳನಾಗಿ ಕಮಲದೊಳಗೆ ಸಿಲುಕಿ
ಅಳಿದು ಹೋಹುದನು ಕಂಡ ಕಂಡರಿಯ ?
ಬಳಲದೆ ವರಪುರಂದರ ವಿಠಲನಂಘ್ರಿಯ
ತುಳಸಿ ನಿರ್ಮಾಲ್ಯವಾಫ್ರಾಣಿಸು ಮನವೆ5
No comments:
Post a Comment