Labels

Monday, 30 December 2019

ಮನವ ಶೋಧಿಸಬೇಕು ನಿಚ್ಚ manav shodhisabeku niccha

ಮನವ ಶೋಧಿಸಬೇಕು ನಿಚ್ಚ - ದಿನ - |
ದಿನದಿ ಮಾಡುವ ಪಾಪ ಪುಣ್ಯದ ವೆಚ್ಚ ಪ
ಧರ್ಮ ಅಧರ್ಮ ವಿಂಗಡಿಸಿ - ದು - |
ಷ್ಕರ್ಮಕೆ ಏರಿದ ಬೇರ ಕತ್ತರಿಸಿ ||
ನಿರ್ಮಲಾಚಾರದಿ ಚರಿಸಿ - ಪರ - |
ಬೊಮ್ಮ ಮೂರುತಿ ಪಾದಕಮಲವ ಭಜಿಸಿ 1
ತನುವ ದಂಡಿಸಿ ಒಮ್ಮೆ ಮಾಣೊ - ನಿನ್ನ - |
ಮನವ ಶೋಧಿಸಿ ಪರಮಾತ್ಮನ ಕಾಣೊ ||
ನೀನು ನಿನ್ನೊಳಗೆ ಜಾಣನೊ - ಮುಕುತಿ - |
ಯೇನೂ ದೂರಿಲ್ಲವೊ ಒಂದೇ ಗೇಣೊ 2
ಆತನ ಭಕ್ತರಿಗೆ ಕೇಡಿಲ್ಲ - ಅವ - |
ಪಾತಕ - ಪತಿತಸಂಗವ ಮಾಡ ಸಲ್ಲ ||
ನೀತಿವಂತರು ಕೇಳಿರೆಲ್ಲ - ನಮ -|
ಗೀತನೆ ಗತಿಯೀವ ಪುರಂದರವಿಠಲ 3

ಮಧ್ವರಾಯಾ-ಗುರು-ಮಧ್ವರಾಯಾ maadwaraya guru madhwaraya

ಮಧ್ವರಾಯಾ-ಗುರು-ಮಧ್ವರಾಯಾ
ಮಧ್ವರಾಯಾ-ಗುರು-ಮಧ್ವರಾಯಾ ಪ
ರಾಮಾವತಾರದೊಳೊಮ್ಮೆ ಮಧ್ವರಾಯಾ
ಆ ಮಹಾ ಹನುಮನಾದೆ ಮಧ್ವರಾಯಾ ||
ವಾಮಮುಷ್ಟಿಲಿ ರಾವಣನ ಗೆಲಿದೆ ಮಧ್ವರಾಯಾ ||
ಕಾಮಿತಾರ್ಥ ಸುರರಿಗಿತ್ತೆ ಮಧ್ವರಾಯಾ 1
ಕೃಷ್ಣಾವತಾರದೊಳೊಮ್ಮೆ ಮಧ್ವರಾಯಾ
ದುಷ್ಟಕುಲಕೆ ಭೀಮನಾದೆ ಮಧ್ವರಾಯಾ ||
ಕುಟ್ಟಿದೆ ಕೌರವರನೆಲ್ಲ ಮಧ್ವರಾಯಾ - ಶ್ರೀ -
ಕೃಷ್ಣನ ಪ್ರೀತಿಯ ಪಡೆದೆಯೊ ಮಧ್ವರಾಯಾ 2
ಧರೆಯೊಳು ಯತಿಯಾಗಿ ಜನಿಸಿದೆ ಮಧ್ವರಾಯಾ
ಗುರುವ್ಯಾಸರ ಹಿತವ ಪಡೆದೆ ಮಧ್ವರಾಯಾ
ದುರುಳಮಾಯಿಮತವ ಮುರಿದೆ ಮಧ್ವರಾಯಾ
ಪುರಂದರ ವಿಠಲನ ದಾಸನಾದೆ ಮಧ್ವರಾಯಾ 3

ಮಧ್ವರಾಯರ ನೆನೆದು madhwaraayara nenedu

ಮಧ್ವರಾಯರ ನೆನೆದು ಶುದ್ಧರಾಗಿರೊ |
ಹೊದ್ದಿ ವೈಷ್ಣವ ಮತ ಭವಾಬ್ಧಿ ದಾಟಿರೋ ಪ

ಉದಯದಲಿ ಏಳುವಾಗ ನದಿಯ ಸ್ನಾನ ಮಾಡುವಾಗ
ಒದಗಿ ನಿತ್ಯ ಕರ್ಮಗಳನು ನಡೆಸುವಾಗ ||
ಹೃದಯದಲಿ ಬೀಜಾಕ್ಷರ ಮಂತ್ರಗಳನು ಜಪಿಸುವಾಗ
ಸದಮಲಾನಂದ ಹನುಮನನ್ನು ನೆನೆಯಿರೊ 1
ಕಾಮವಿಲ್ಲದ ಹರಿಯ ಪೂಜೆ ವೈಶ್ವದೇವ ಮಾಡುವಾಗ
ಪ್ರೇಮದಿಂದ ವೈಷ್ಣವರು ಅರ್ಚಿಸುವಾಗ ||
ಆ ಮಹಾ ಭಕ್ಷ್ಯಭೋಜ್ಯ ಆರೋಗಣೆ ಮಾಡುವಾಗ
ನೇಮದಿಂದ ಕೌರವಾಂತಕ ಭೀಮಸೇನನ ನೆನೆಯಿರೊ 2
ಕರಗಳನ್ನು ತೊಳೆದು ತೀರ್ಥ ತುಳಸೀದಳವ ಮೆಲ್ಲುವಾಗ
ಪರಿಪರಿಯ ಪುಷ್ಪವೀಳ್ಯ ಅರ್ಪಿಸುವಾಗ
ಸರುವಾಂತರ್ಯಾಮಿ ಗುರುಮಧ್ವರಂತರಾತ್ಮಕ
ಪುರಂದರ ವಿಠಲಗೆ ಸಮರ್ಪಣೆ ಮಾಡಿರೊ 3

ಮಧ್ವಮುನಿಯೆ - ಗುರು madhwamuniye guru

ಮಧ್ವಮುನಿಯೆ - ಗುರು - ಮಧ್ವಮುನಿಯೆ ಪ
ಮಧ್ವಮುನಿ ನಮ್ಮೆಲ್ಲರ | ಉದ್ಧರಿಸುವ ಕಾಣಿರೊ ಅ.ಪ
ಅಂದು ಹನುಮಂತನಾಗಿ | ಬಂದ ರಾಮಪದಾರ-
ವಿಂದದಿ ನೆರೆದು ತುಂಬಿಯಂದದಿ ಶೋಭಿಸಿದ 1
ಏಣಾಂಕವಂಶದಿ ಪುಟ್ಟಿ | ಕ್ಷೋಣಿಪಾಲಕ ಶಿರೋ
ಮಾಣಿಕ್ಯವಾಗಿ ಹರಿಗೆ | ಪ್ರಾಣನೆಂದೆನಿಸಿಕೊಂಬ 2
ಕಟ್ಟಕಡೆಯಲ್ಲಿ ಯೋಗ | ದಿಟ್ಟನಾಗಿ ಪುರಂದರ |
ವಿಠಲಗಾವಾಸವಾದ | ಪೆಟ್ಟಿಗೆಯೊಲೊಪ್ಪುವಂಥ 3

ಮಧ್ವಮತದ ಸಿದ್ದಾಂತದ ಪದ್ಧತಿ madhwamatada siddantada

ಮಧ್ವಮತದ ಸಿದ್ದಾಂತದ ಪದ್ಧತಿ |
ಬಿಡಬೇಡಿ ಬಿಡಬೇಡಿ ಪ.
ಹರಿ ಸರ್ವೊತ್ತಮನಹುದೆಂಬ ಙÁ್ಞನವ |
ತಾರತಮ್ಯದಲಿ ತಿಳಿವ ಮಾರ್ಗವಿದು 1
ಘೋರ ಯಮನ ಬಾಧೆ ದೂರಕೆ ಮಾಡಿ ಮು -
ರಾರಿಯ ಚರಣವ ಸೇರುವ ಮಾರ್ಗವು 2
ಭಾರತೀಶ ಮುಖ್ಯ ಪ್ರಾಣಾಂತರ್ಗತ |
ನೀರಜಾಕ್ಷ ನಮ್ಮ ಪುರಂದರವಿಠಲನ 3

ಮಧ್ವಮತಕಿನ್ನು ಸರಿಯುಂಟೆ madhwamatakinnu sariyunte

ಮಧ್ವಮತಕಿನ್ನು ಸರಿಯುಂಟೆ - ಪ್ರ - |
ಸಿದ್ಧ ವೈಕುಂಠಕಿಂತಧಿಕ ಮತ್ತುಂಟೆ ? ಪ.
ವೃಕ್ಷದೊಳಗೆ ತುಳಸಿ ವೃಕ್ಷಕಧಿಕವಿಲ್ಲ |
ಪಕ್ಷಿಯೊಳಗೆ ಗರುಡ ಪಕ್ಷಿಗಿಂತ ಮಿಗಿಲಿಲ್ಲ ||
ದಕ್ಷ ಹನುಮಂತನಂತೆ ಲೋಕದೊಳು ಬಂಟರಿಲ್ಲ |
ಲಕ್ಷ್ಮಿಗೆ ಸರಿಯಾದ ಸ್ತ್ರೀಯರಿಲ್ಲ - ನೀ ಕೇಳೊ |
ಪಕ್ಷಿವಾಹನನೆನಿಪ ದೇವ ತಾ ಬಲ್ಲ 1
ಸಕಲ ಮಣಿಗಳಲಿ ಚಿಂತಾಮಣಿಗೆ ಸರಿಯಿಲ್ಲ |
ಮಿಕ್ಕ ರತ್ನಮೊಳಗೆ ಮಾಣಿಕತೆ ಮಿಗಿಲಿಲ್ಲ ||
ಭಕುತರೊಳಗೆಲ್ಲ ಚಂದ್ರಶೇಖರಗೆ ಸರಿಯಿಲ್ಲ |
ಮುಕುತಿ ಸುಖಗಳಿಗೆಣೆಯಿಲ್ಲ - ನೀ ಕೇಳೊ |
ಅಖಿಳ ಬ್ರಹ್ಮಾಂಡನಾಯಕ ತಾ ಬಲ್ಲ 2
ಪ್ರಥಮಯುಗದಲಿ ಹನುಮ , ದ್ವಿತಿಯ ಯುಗದಲಿ ಭೀಮ |
ತೃತಿಯ ಯುಗದಲಿ ಮಧ್ವಾಚಾರ್ಯರೆಂದೆನಿಸಿ ||
ಸತುಶಾಸ್ತ್ರ ಕಿದಿರಿಲ್ಲಅಮೃತಕಿಂತಧಿಕವಿಲ್ಲ |
ರತಿಪತಿಗಿಂತ ಚೆಲುವರಿಲ್ಲ - ನೀ ಕೇಳೊ |
ಕಥೆಯನು ಪುರಂದರವಿಠಲ ತಾ ಬಲ್ಲ 3

ಮದ್ದು ಮಾಡಲರಿಯಾ ಮುದ್ದು maddu maadalariya maddu

ಮದ್ದು ಮಾಡಲರಿಯಾ ಮುದ್ದು ರಮಾದೇವೀ ಪ.
ಮುದ್ದು ಕೃಷ್ಣನಲ್ಲಿ ಮನ ಸಿದ್ಧವಾಗಿ ನಿಲ್ಲುವಂತೆ ಅಪ
ವಚನಗಳೆಲ್ಲ ವಾಸುದೇವನ ಕಥೆಯೆಂದು
ರಚನೆ ಮಾಡುವರಲ್ಲಿ ರಕ್ತಿ ನಿಲ್ಲುವ ಹಾಗೆ 1
ಸಂತೆ ನೆರಹಿ ಸತಿ ಸುತರು ತನ್ನವರೆಂಬ
ಭ್ರಾಂತಿ ಬಿಟ್ಟು ನಿಶ್ಚಿಂತನಾಗುವ ಹಾಗೆ 2
ಎನ್ನೊಡೆಯ ಸಿರಿ ಪುರಂದರವಿಠಲನ
ಸನ್ಮತಿಯಿಂದೆ ಹಾಡಿ ಪಾಡುವ ಹಾಗೆ 3