Labels

Monday, 30 December 2019

ಮರವನು ನುಂಗುವ ಪಕ್ಷಿ maravanu nunguva pakshi

ಮರವನು ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಪ.
ಒಂಟಿ ಕೊಂಬಿನ ಪಕ್ಷಿ ಒಳಗೆ ಕರುಳಿಲ್ಲ
ಗಂಟಲು ಮೂರುಂಟು ಮೂಗು ಇಲ್ಲ
ಕುಂಟು ಮನುಜನಂತೆ ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ ಭಕ್ಷಿಸುವುದು 1
ನಡುವೆ ತಲಿಯೆಂಬುವದು ನಡು ನೆತ್ತಿಯಲಿ ಬಾಯಿ
ಕಡು ಸ್ವರಗಳಿಂದ ಗಾನ ಮಾಡ್ವದು
ಅಡವಿಯಲಿ ಹುಟ್ಟುವುದು ಅಂಗವೆರಡಾಗುವುದು
ಬಡತನ ಬಂದರೆ ಬಹಳ ರಕ್ಷಿಪುದು 2
ಕಂಜ ವದನೆಯರ ಕರದಲ್ಲಿ ನಲಿದಾಡುವುದು
ಎಂಜಲನುಣಿಸುವುದು ಮೂರ್ಜಗಕೆ
ರಂಜಿಪ ಶಿಖಾಮಣಿ ಸಿಂಹಾಸನದ ಮೇಲಿಪ್ಪ
ಸಂಜೀವ ಪಿತ ಪುರಂದರವಿಠಲನೇ ಬಲ್ಲ * 3

ಮನೆಯೊಳಗಾಡೊ ಗೋವಿಂದ maneyolagado govinda

ಮನೆಯೊಳಗಾಡೊ ಗೋವಿಂದ-ನೆರೆ-|
ಮನೆಗಳಿಗೇಕೆ ಪೋಗುವೆಯೊ ಮುಕುಂದ ಪ
ನೊಸಲಿಗೆ ತಿಲಕವನಿಡುವೆ-ಅಚ್ಚ-|
ಹೊಸಬೆಣೆಯಿಕ್ಕಿ ಕಜ್ಜಾಯವ ಕೊಡುವೆ ||
ಹಸನಾಧಾಭರಣಗಳಿಡುವೆ-ಚಿಕ್ಕ-|
ಹಸುಳೆ ನಿನ್ನನು ನೋಡಿ ಸಂತೋಷಪಡುವೆ 1
ಅಣ್ಣಯ್ಯ ಬಲರಾಮಸಹಿತ-ನೀ-|
ನಿನ್ನೆಲ್ಲಿಯಾದರೂ ಆಡುವುದು ವಿಹಿತ ||
ಹೆಣ್ಣುಗಳೇಕೋ ಸಂಗಾತ-ರಂಗ |
ಬಿನ್ನಪ ಪರಿಪಾಲಿಸೊ ಜಗನ್ನಾಥ 2
ಜಾರನೆನಿಸಿಕೊಳಲೇಕೆ-ರಂಗ-|
ಚೋರನೆನಿಸಿಕೊಂಬ ದೂರು ನಿನಗೇಕೆ ||
ವಾರಿಜಾಕ್ಷಿಯರ ಕೂಡಲೇಕೆ-ನಮ್ಮ-|
ಪುರಂದರವಿಠಲರಾಯ ಎಚ್ಚರಿಕೆ 3

ಮನುಜ ಶರೀರವಿದೇನು manuja shareervedenu

ಮನುಜ ಶರೀರವಿದೇನು ಸುಖ - ಇದ
ನೆನೆದರೆ ಘೋರವಿದೇನು ಸುಖ ? ಪ.
ಜನನ - ಮರಣ ಮಲಕೂಪದಲ್ಲಿದ್ದು
ಅನುಭವಿಸುವುದು ಇದೇನು ಸುಖ ?
ತನುವಿದ್ದಾಗಲೇ ಹೃದಯದ ಶೌಚದ
ಸ್ತನಗಳನುಂಬುವುದೇನು ಸುಖ ? 1
ದಿನವು ಹಸಿವು ತೃಷೆ ಘನ ರೋಗಂಗಳ
ಅನುಭವಿಸುವುದು ಇದೇನು ಸುಖ
ನೆನೆಯಲು ನಿತ್ಯ ನೀರ್ಗುಳ್ಳೆಯಂತಿಪ್ಪ
ತನುಮಲಭಾಂಡವಿದೇನು ಸುಖ ? 2
ಪರಿಪರಿ ವಿಧದಲಿ ಪಾಪವ ಗಳಿಸುತ
ನರಕಕೆ ಬೀಳುವುದೇನು ಸುಖ ?
ಪುರಂದರವಿಠಲನ ಮನದಿ ನೆನೆದು ಸ ದ್ಧರುಮದೊಳ್ ನಡೆದರೆ ಆಗ ಸುಖ 3

ಮನಸು ನಿನ್ನ ಮೇಲೆ manasu ninna mele

ಮನಸು ನಿನ್ನ ಮೇಲೆ ಬಹಳ-ಕಾಲ |
ಅನುಕೂಲಿಸದೊ ಗೋಪಾಲ ಪ
ನಿನ ಕೂಡೆ ಈಗ ಕೂಡುವೆನೆಂದರೆ ಮನೆ-|
ಜನರೆಲ್ಲರು ಕೂಡಲೀಸರೊ ಕೃಷ್ಣ ಅ.ಪ
ಗಂಡನೆಂಬವನು ಉದ್ದಂಡ-ಎನ್ನ |
ಕಂಡರೆ ಸೇರನು ಭಾವ ಪ್ರಚಂಡ ||
ಭಂಡೆ ಅತ್ತೆಯು ಲಂಡೆ ಅತ್ತಿಗೆ ಕೇಳೊ |
ಕಂಡರಿಬ್ಬರನು ದಂಡಿಸುವರೊ ರಂಗ 1
ನೆರೆಹೊರೆಯವರೆನ್ನನೆಲ್ಲ-ಮೈಯ |
ನೆರಳ ಕಂಡರೆ ಸೇರರಲ್ಲ ||
ಸರಿಸಖಿಯರು ಎಲ್ಲ ಸುಮ್ಮನಿರುವರಲ್ಲ |
ಮರೆಮಾತನಾಡಲು ವೇಳೆ ಕೂಡದೊ ರಂಗ 2
ಮದುವೆ ಮಾಡುವರೊ ಮನೆಯೊಳು-ನಾಳೆ |
ಅದರ ಸಂದಣಿಯ ಹೊಂಚಿನೊಳು ||
ಮುದದಿಂದ ಕೂಡುವೆನಾವ ಪರಿಯೊಳು |
ಮದನ ತಂತ್ರದಿಂದ ಪುರಂದರವಿಠಲ 3

ಮನಸಿಟ್ಟು ಭ್ರಮಿಸುವರೇನೆ manasittu bhramisuvarenu

ಮನಸಿಟ್ಟು ಭ್ರಮಿಸುವರೇನೆ - ಘನ - |
ಗುಣವಂತನೇನವ ಜಾಣೆ ? ಪ
ಅನುದಿನ ಗೊಲ್ಲಪಳ್ಳಿಗೆ ಕಳ್ಳನೆನಿಸಿದ |
ದನಗಾಹಿ ನಿನಗೇನ ಮರುಳು ಮಾಡಿದನೆ ? ಅ.ಪ
ಜಲವಾಸಿ ಮುಖವೊಳಸೆಳೆವ - ಇವ |
ನೆಲವ ಕೆದರಿ ಕಂಬದಿ ಬಾಯ್ ತೆಗೆವ ||
ಇಳೆಯನಳೆದ ಕೊರಳಗೊಯ್ಕ ವನವಾಸಿಯ |
ಕೊಳಲಪಿಡಿದ ಕುರುಬಲವನಳಿದಾತಗೆ 1
ಅಂದು ಮಧುರೆಯಲಿ ಪುಟ್ಟಿದನ - ಆ |
ನಂದಗೋಪ - ಯಶೋದೆ ಕೋಮಲನ ||
ಕಂದನಾಗಿ ಮೊಲೆಯುಂಡು ಪೂತನಿಯನು |
ಕೊಂದು ಕಂಸರ ಪುರ ತಂದೆಗಿತ್ತವಗೆ 2
ಬತ್ತಲಿರುವ ಶ್ರೀನಿರ್ವಾಣಿ - ತೇಜಿ - |
ಹತ್ತಿ ಪಿಡಿದ ಖಡ್ಗ ಪಾಣಿ ||
ಮತ್ತರನೆಲ್ಲರ ಮರ್ದಿಸಿ ಬಲವಂತ |
ಪಾರ್ಥಗೊಲಿದ ಶ್ರೀ ಪುರಂದರವಿಠಲಗೆ 3

ಮನವೆನ್ನ ಮಾತ ಕೇಳದು manavenna maatu keladu

ಮನವೆನ್ನ ಮಾತ ಕೇಳದು - ಮಂದe್ಞÁನದಿ |
ತನುವಿನಾಸೆಯ ಬಿಡಲೊಲ್ಲದು ಪ
ವನಜನಾಭನೆ ನಿನ್ನ ನಾಮ ಸಾಸಿರವ |
ನೆನೆಯದೆ ಕಂಡಕಡೆಗೆ ಎರಗುತಲಿದೆ ಅ.ಪ
ದೇಹ ಸಂಬಂಧಿಗಳಾದವರೈವರು |
ಮೋಹಪಾಶದಿ ಕಟ್ಟಿ ಬಿಗಿದಿಹರೈ ||
ಕಾಯ ಅನಿತ್ಯವೆಂಬುದನರಿಯದೆ |
ಮಾಯಾ ಪ್ರಪಂಚದಿಂದಲಿ ಬದ್ಧನಾಗಿಹೆ 1
ಸಾಧುಸಜ್ಜನರ ಸಂಗವ ಮಾಡಿ ಪರಗತಿ-|
ಗಾಧಾರವನು ಮಾಡಲೊಲ್ಲದಯ್ಯ ||
ಕ್ರೋಧ ಕುಹಕ ದುಷ್ಟರೊಡನಾಡಿ ಕಾಲನ |
ಬಾಧೆಗೆ ಒಳಗಾಗುವಂತೆ ಮಾಡುತಲಿದೆ 2
ಮದಗಜ ಮೈಯ ಮರೆತು ಮುಂದುಗಾಣದೆ |
ಕದುವಿನೊಳಗೆ ಬಿದ್ದಂತಾದೆನಯ್ಯ ||
ಹೃದಯ ಕಮಲದಲಿ ನಿಂತ ರಕ್ಷಿಸೋ ಎನ್ನ |
ಪದುಮಾಕ್ಷ ವರದ ಶ್ರೀ ಪುರಂದರ ವಿಠಲ 3

ಮನವೆ ಚಂಚಲ ಮತಿಯ ಬಿಡು manava chanchala matiya

ಮನವೆ ಚಂಚಲ ಮತಿಯ ಬಿಡು - ನಮ್ಮ |
ವನಜನಾಭನ ಪಾದಭಜನೆಯ ಮಾಡು ಪ.
ಬಡಮನುಜಗೆ ಬಾಯಬಿಡುವ ದೈನ್ಯದಲವನ |
ಅಡಿಗಳಿಗೆರಗಲು ಕೊಡುವನೇನೊ ||
ಕಡಲಶಯನ ಜಗದೊಡೆಯನ ನೆನೆಯಕ್ಕೆ - |
ಪಿಡಿದು ತಾ ಸಲಹುವ ಬಿಡದಲೆ ಅನುಗಾಲ 1
ಬಲ್ಲಿದ ಭಕುತರ ಬಲ್ಲವ ಬಹುಸಿರಿ |
ಯುಳ್ಳ ಕರುಣಿ ಲಕ್ಷ್ಮೀನಲ್ಲನಿರೆ ||
ಕ್ಷುಲ್ಲಕರನು ಕಾಯಸಲ್ಲದೆಂದೆಂದಿಗು
ನಿಲ್ಲು ಹರಿಯ ಪಾದದಲ್ಲಿ ತಲ್ಲಣಿಸದೆ 2
ಮುಗಿಲು ಮೇಲದೆಗಡೆ ಅಗಣಿತವಾದಾಪ - |
ತ್ತುಗಳು ಬಂದಡರಲು ನಗುತಲಿರು ||
ಜಗದಧೀಶನ ಮಹಿಮೆಗೆ ನಮೋ ನಮೋ ಎಂದು |
ಪೊಗಳುತ ಬಾಳು ನೀ ಅಘಗಳ ಗಣಿಸದೆ 3
ಆವಾವ ಕಾಲಕೆ ದೇವನಿಚ್ಛೆಯಿಂದ |
ಆವಾವುದು ಬರೆ ನಿಜಸುಖವೆನ್ನು ||
ಶ್ರೀವರ ಅನಾದಿಜೀವರ ಕ್ಲಪ್ತದಂತೆ |
ಈವನು ನಿಜಸ್ವಭಾವ ಬಿಡದೆ ನಿತ್ಯ 4
ಕೇಶವಾಚ್ಯುತ ಶ್ರೀನಿವಾಸ ಮುರಾರೇ |
ದೋಷರಹಿತ ದೀನ ಪೋಷಕನೆನ್ನು ||
ಮೋಸಗೊಳಿಪ ಭವಪಾಶವ ಖಂಡಿಪ |
ಶ್ರೀಶ ಪುರಂದರವಿಠಲನು ಜಗಕಿರೆ 5