Labels

Wednesday, 20 May 2020

ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ |ನಂಬಲಾರದೆ ಕೆಟ್ಟರು ಪ. nambi kettavarunte


ನಂಬಿ ಕೆಟ್ಟವರುಂಟೆ ಕೃಷ್ಣಯ್ಯನ ನಂಬಲಾರದೆ ಕೆಟ್ಟರು \\ಪ.\\
ಅಂಬುಜನಾಭನ ಪಾದವ ನೆನೆದರೆ ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ\\ ಅಪ\\
ಬಲಿಯ ಪಾತಾಳಕಿಳುಹಿ - ಭಕ್ತನ ಬಾಗಿಲವ ಕಾಲುವೆ ನಾನೆಂದ ||
ಛಲದೊಳು ಅಸುರರ ಶಿರಗಳ ತರಿದು ತಾನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ \\1\\
ತರಳ ಪ್ರಹ್ಮಾದಗೊಲಿದು - ಹಿರಣ್ಯಕನ ಉಗುರಿನಿಂದಲೆ ಸೀಳಿದ |
ಕರಿರಾಜಗೊಲಿದು ನೆಗಳು ನುಂಗುತಿರಲಾಗ ಪರಿಹರಿಸಿದ ಜಲದೊಳು ಪೊಕ್ಕು ಶ್ರೀ ಕೃಷ್ಣ \\2\\
ಪಾಂಡವರಿಗೆ ಒಲಿದು  ಕೌರವರನು ತುಂಡು ಛಿದ್ರಮಾಡಿದೆ ||

ಗಂಡರೈವರ ಮುಂದೆ ದ್ರೌಪದಿ ಕೂಗಲು ಕಂಡು ಕರುಣದಿ ಕಾಯ್ದ ಪುರಂದರವಿಠಲನ 3

ನಂಬಬೇಡ ನಾರಿಯರನು nambabeda naariyaranu


ನಂಬಬೇಡ ನಾರಿಯರನು ಹಂಬಲಿಸಿ ಹಾರಯಿಸಬೇಡ
ಅಂಬುಜಾಕ್ಷಿಯರೊಲುಮೆ ಬಯಲು ಡಂಬಕವೆಂದು ತಿಳಿಯಿರೊ \\ಪ.\\
ನೋಟವೆಲ್ಲ ಪುಸಿಯು ಸತಿಯ ರಾಟವೆಲ್ಲ ಸಂಚು ಸನ್ನೆ ಕೂಟವೆಲ್ಲ ಗನ್ನ  ಘಾತುಕ
ನೋಟವೆಲ್ಲ ವಂಚನೆ ವಾತಬದ್ಧ ಹೆಂಗಳಲ್ಲಿ ಕೋಟಲೆಗೊಂಡು ತಿರುಗಬೇಡ
ಮಾಟಗಾತಿಯರೊಲುಮೆ ಬಯಲು ಬೂಟಕವೆಂದು ತಿಳಿಯಿರೊ \\1\\
ಸೋತನೆಂದು ವಿಟಗೆ ದೈನ್ಯ ಮಾತನಾಡಿ ಮರುಳಗೊಳಸಿ
ಕಾತರವ ಹುಟ್ಟಿಸಿ ಆವನ ಮಾತೆ ಪಿತರ ತೊಲಗಿಸಿ
ಪ್ರೀತಿ ಬಡಿಸಿ ಹಣವ ಸೆಳೆದು ರೀತಿಗೆಡಿಸಿ ಕಡೆಯಲವನ
ಕೋತಿಯಂತೆ ಮಾಡಿ ಬಿಡುವ ಚಾತಿಕಾರ್ತಿ ಹೆಂಗಳೆಯರ \\2\\
ಧರೆಯ ಜನರ ಮೋಹಕೆಳಸಿ ಭರದಿ ನೆಟ್ಟು ಕೆಡಲುಬೇಡ
ಎರೆಳೆಂಗಳ ಹೆಂಗಳೊಲುಮೆ ಗುರುಳೆ ನೀರ ಮೇಲಿನ
ಮರೆಯಬೇಡ ಗುರುಮಂತ್ರವ ಸ್ಥಿರವಿಲ್ಲದ ಜನ್ಮದಲ್ಲಿ

ಕರುಣನಿಧಿ ಪುರಂದರವಿಠಲನ ಚರಣ ಸ್ಮರಣೆ ಮಾಡಿರೊ \\3\\

ನಂಬದಿರು ಈ ದೇಹ ನಿತ್ಯವಲ್ಲ


ನಂಬದಿರು ಈ ದೇಹ ನಿತ್ಯವಲ್ಲ ಅಂಬುಜಾಕ್ಷನ ಭಜಿಸಿ ಸುಖಿಯಾಗು ಮನವೇ \\ಪ.\\
ಎಲು ರಕ್ತ ಮಾಂಸಗಳ ಮೇಲೆ ಚರ್ಮದ ಹೊದಿಕೆ ಮಲಮೂತ್ರ ಒಳಗೆ ಕ್ರಿಮಿರಾಶಿಯಿಹವು ||
ಹಲವು ವ್ಯಾಧಿಯ ಬೀಡು ಪಂಚಭೂತದನಾಡು ಹುಲುದೇಹವನು ನೆಚ್ಚಿ ಕೆಡಬೇಡ ಮನವೆ \\1\\
ಸತಿಸುತರು ಹಿತರೆಂದು ಮತಿಮರೆತು ಮಮತೆಯಲಿ ಅತಿಕಾಂಕ್ಷಿಯಿಂದ ದುರ್ವಿಷಯ ಬಲಿದು ||
ಸತತ ಲಕ್ಷ್ಮೀಪತಿಯ ಶರಣೆನದೆ ಇಹಪರದ ಗತಿಶೂನ್ಯನಾಗಿ ಕೆಡಬೇಡ ಮನವೆ \\2\\
ಪರರ ನಿಂದಿಸದೆ ಪರವಧಗಳನು ಬಯಸದೆ ಗುರು - ವಿಪ್ರಸೇವೆಯನು ಮಾಡು ಬಿಡದೆ ||

ಹರಿಸ್ತುತಿಯ ನೀ ಕೇಳು ಹರಿಕೀರ್ತನೆಯ ಪಾಡು ಪರಮ ಪುರಂದರವಿಠಲನೊಲಿದು ಪಾಲಿಸುವ \\3\\

ಧ್ವಜದ ತಿಮ್ಮಪ್ಪ dhwajada timmappa


ಧ್ವಜದ ತಿಮ್ಮಪ್ಪ ಪಲ್ಲಕಿಯೇರಿ ತನ್ನಯ ನಿಜಗಿರಿಯಾತ್ರೆಗೈದಿದ ಹರುಷವ ಕೇಳಿ \\ಪ.\\
ಬಲದಲಬುಜಭವ ಭವಾದಿಗಳೆಡದಲಿ ಉಲಿವ ವೇದ - ಉಪನಿಷದುಗಳು ||
ಸಲುಗೆಯಲಿ ಸನಕಾದಿಗಳು ಸೇವಿಸೆ ಮುನ್ನ ಹಲವು ಋಷಿಮುನಿನಿಕರ ಹಿಂದೆ ಬರುತಿರಲು\ 1\\
ಛತ್ರವ ಶಚಿ ಚಾಮರವ ಢಾಳಿಸೆ ಇಂದ್ರ ಚಿತ್ತಜಾತನು ವ್ಯಜನವ ಬೀಸಲು ||
ಹೊತ್ತು ಮಾರುತಿ ಹಡಪ ಹೊಳೆವೆಲೆಗಳ ಕೊಡಲು ಹಸ್ತದ ಕಾಳಂಜಿ ಹರಿಣಾಂಕನು ಬರೆ \\2\\
ವರುಣನು ಸ್ವಾದುಜಲವ ಪಿಡಿದು ಬರೆ ತರುಣಿ ತನಗೆ ಆಧಾರದಂತಿರಲು ||
ಸುರರು ಸುಮನಗಳಿಂದ ಸರ್ವರು ತಮತಮ್ಮ ಪರಿಪರಿ ಆಯುಧಗೊಂಡು ಬಳಸಿಬರೆ \\3\\
ಮಂದರ ಮಧ್ಯಮ ತಾರಕ ಮೋಹನ ದಿಂದ ಗಂಧರ್ವರು ಗಾನಮಾಡೆ ||
ತೋಂಧಿಮಿಧಿಮಿಕೆಂದು ತಾಳಮೇಳದೆ ನಾರಂದ ಪಾಡಲು ಆಡುತಾಡುತ ಬರುತಿರೆ \\4\\
ಲೋಕನಾಯಕ ಲೋಕೈಕ ರಕ್ಷಾಮಣಿ ಸಾಕಾರರೂಪ ಸದ್ಗುಣಭರಿತ ||

ವೆಂಕಟೇಶ ವ್ಯಾಸಮುನಿವರದನಾದ ಕರುಣಾಕರ ಪುರಂದರವಿಠಲನು ಗರುಡ \\5\\


ಧೂಪಾರತಿಯ ನೋಡುವ ಬನ್ನಿ dhooparatiya noduva banni


ಧೂಪಾರತಿಯ ನೋಡುವ ಬನ್ನಿ ನಮ್ಮ ಗೋಪಾಲಕೃಷ್ಣನ ಪೂಜೆಯ ಸಮಯದಿ \\ಪ.\\
ಅಗುರು ಚಂದನ ಧೂಪ ಗುಗ್ಗುಳ ಸಾಮ್ರಾಣಿ ಮಘಮಘಿಸುವ ಧೂಪದಾರತಿಯು ||
ಮಿಗಿಲಾದ ಏಕಾಂತ ಭಕ್ತಿಯಲಿ ನಮ್ಮ ಜಗನ್ನಾಥ ಕೃಷ್ಣನ ದೇವರ ಪೂಜೆಯ \\1\\
ಮದ್ದಳೆ ಜಾಂಗಟಿ ತಾಳ ತಮ್ಮಟೆ ಭೇರಿ ತದ್ಧಿಮಿ ಧಿಮಿಕೆಂಬ ನಾದಗಳು ||
ಹೊದ್ದಿದ ಧವಳ ಶಂಖದ ಘೋಷಣಂಗಳ ಪದ್ಮನಾಭನ ದಿವ್ಯ ದೇವರ ಪೂಜೆಯ \\2\\
ಢಣ ಢಣ ಢಣರೆಂಬ ತಾಳ ದಂಡಿಗೆ ವೇಣು ಢಣಕು ಧಿಮಿಕು ಎಂಬ ಮದ್ದಳೆಯು ||
ಝಣಿಝಣಿಸುವ ವೀಣೆ ಕಿನ್ನರಿ ಸ್ವರಗಳ ಘನರಾಗದಿಂದಲಿ ಹಾಡುತ ಪಾಡುತ \\3\\
ಮುತ್ತು ಛತ್ರ ಚಾಮರ ಪತಾಕ ಧ್ವಜ ರತ್ನ ಕೆಚ್ಚಿದ ಪದಕ ಹಾರಗಳು ||
ಮತ್ತೆ ಕೋಟಿ ಸೂರ್ಯ ಪ್ರಭೆಯ ಧಿಕ್ಕರಿಸುವ ಸತ್ಯಭಾಮೆ ರುಕ್ಮಿಣಿಯರರಸನ \\4\\
ಹರ ಬ್ರಹ್ಮ ಸುರಪತಿ ದೇವತೆ ಮೊದಲಾದ ಪರಮ ಪಾವನ ಮೂರ್ತಿ ಪುರುಷೋತ್ತಮನ ||

ಪರದೈವತವೆಂದು ಬಿರುದು ಪೊಗಳಿಸಿಕೊಂಬ ಪುರಂದರವಿಠಲನ ಪೂಜೆಯ ಕಾಲದ \\5\\

ಧಾನ್ಯ ದೊರಕಿತು ಎನಗೆ dhanya dorakito enage


ಧಾನ್ಯ ದೊರಕಿತು ಎನಗೆ ಧನವು ದೊರಕಿತು\\ ಪ\\
ಓಣಿಯೊಳಗೆ ಹೋದ ಮಾಣಿಕ್ಯದ ಹರಳು ದೊರಕಿತೋ \\ಅ.ಪ\\
ಕಟ್ಟಿ ಹಗೆಯ ಹಾಕುವುದಲ್ಲ ಒಟ್ಟಿ ಕೆಸರ ಬಡಿಯುವುದಲ್ಲ ||
ಮುಟ್ಟಿ ಹಿರಿದು ಮೇಯಿಸಿದರೊಂದಿಷ್ಟು ಸೂಡು ಸವಿಯಲಿಲ್ಲ \\1\\
ಹರಿದು ಗೊಣಸು ಹಚ್ಚುವುದಲ್ಲ ಮುರಿದು ಸಣ್ಣಗೆ ಮಾಡುವುದಲ್ಲ ||
ಅರಿದು ಇದನು ಪೇಟೆಗೆ ಒಯ್ದರೆ ಕರೆದು ಬೆಲೆಯನು ಕಟ್ಟುವುದಲ್ಲ\\2\\
ಪಾಲು ಪಸುಗೆ ಹಂಚುವುದಲ್ಲ ಮೇಲೆ ಚಾರರು ಒಯ್ಯುವುದಲ್ಲ ||
ಶ್ರೀಲೋಲ ಪುರಂದರ ವಿಠಲನ ಮೂಲನಾಮ ದೊರಕಿತಲ್ಲ\\3\\


ಧರ್ಮವೇ ಜಯವೆಂಬ ದಿವ್ಯ ಮಂತ್ರ dharmave jayawemba divya mantra


ಧರ್ಮವೇ ಜಯವೆಂಬ ದಿವ್ಯ ಮಂತ್ರ ಮರ್ಮಗಳನೆತ್ತಿದರೆ ಒಳಿತಲಾ ಕೇಳಿ\\ ಪ.\\
ವಿಷವನುಣಿಸಿದಗೆ ಷಡುರಸವನುಣಿಸಲುಬೇಕು ದ್ವೇಷಮಾಡುವನ ಪೋಷಿಸಲು ಬೇಕು ||
ಹಸಿದು ಮನೆ ಕೊಂಬವನ ಹಾಡಿಹರಸಲುಬೇಕು |ಸು ಹೀರಿದನ ಹೆಸರ ಮಗನಿಗಿಡಬೇಕು \\1\\
ಹಿಂದೆ ನಿಂದಿಸುವರನು ವಂದಿಸುತಲಿರಬೇಕು ಬಂಧಿಸಿದವನ ಕೂಡ ಬೆರೆಯಬೇಕು ||
ನಿಂದ ನಿಲುವಿಗೆ ಸೇರದವನ ಪೊಗಳಲುಬೇಕು |ಕೊಂದವನ ಗೆಳತನವ ಮಾಡಬೇಕಯ್ಯ \\2\\
ಕೊಂಡೊಯ್ದು ಕೆಡಿಸುವನ ಕೊಂಡಾಡುತಿರಬೇಕು ಕಂಡರಾಗದವರ ತಾ ಕರಿಯಬೇಕು ||

ಪುಂಡರೀಕಾಕ್ಷ ಶ್ರೀ ಪುರಂದರವಿಠಲನ ಅ ಖಂಡ ಮಹಿಮೆಯನರಿತು ನೆನೆಯಬೇಕಯ್ಯ\\3\\