Labels

Tuesday, 7 April 2020

ಚಿತ್ತಶುದ್ಧಿಯಿಲ್ಲದವನವ chittashuddi illadavana


ಚಿತ್ತಶುದ್ಧಿಯಿಲ್ಲದವನವ e್ಞÁನಿಯೆ - ಪುಣ್ಯ
ಪಾತಕಗಳನರಿಯದವ ಮನುಜನೆ ಕೃಷ್ಣ ಪ.
ಮಾರಿ ಮನೆಯೊಳಗಿರಲು ಸಹಕಾರಿಯೆನಬಹುದೆ ?
ಊರೊಳಗಿನಾ ಕಳ್ಳ ಅವ ಸುಜನನೆ ?
ಜಾರತನವೆಸಗುವಳು ಕುಲವನಿತೆಯಹುದೆ - ಸಂ
ಸಾರದೆಚ್ಚವಿಲ್ಲದವ ಸುಗಣನೆ ? 1
ಶ್ವಾನ ಬೂದಿಯಲಿರಲು ಶಿವಭಕ್ತನನೆಬಹುದೆ ?
ಕಾನನದೊಳಿಹ ಕಾಗೆ ವನವಾಸಿಯೇ ?
ಗಾಣ ತಿರುಗುವ ಎತ್ತಿಗದು ಪ್ರದಕ್ಷಣೆಯೆ ಬಕ
ಧ್ಯಾನವನು ಮಾಡಲದು ಮೌನವೇ ಕೃಷ್ಣಾ ?2
ತೋಳ ಅಡವಿಯಲಿರಲು ಅದು ದಿಗಂಬರನಹುದೆ ?
ಗಾಳಿಯಂಬುವ ಉರುಗ ಉಪವಾಸಿಯೇ ?
ಆಲವದು ಜಡೆಬಿಡಲು ಪರಮ ಋಷಿಯಹುದೆ - ಬಲು
ಕಾಲ ಉಳಿದ ಹದ್ದು ತಾ ಹಿರಿಯದೆ ? 3
ಬಂಧನದೊಳಿಹ ವ್ಯಾಘ್ರವನು ತಪಸಿಯೆನಬಹುದೆ ?
ಸಿಂಧುಜವು ಎನೆ ವಿಷಯ ಶೀತಕರನೆ ?
ಅಂಧಕನು ಕಣ್ಮಚ್ಚಲದು ಧ್ಯಾನವೇ, ಗಜವು
ಮಂದಗತಿಯಾದರದು ಸ್ಮರಣೆಯೆ ಕೃಷ್ಣಾ ? 4
ಮರಣಕ ಗಂಟಲನು ಮಾಡಲದು ಮಂತ್ರವೆ ?
ಗಂಡು ನೀರಲಿ ಮುಳುಗಲದು ಸ್ನಾನವೇ ?
ಪುಂಡರೀಕಾಕ್ಷ ಶ್ರೀ ಪುರಂದರವಿಠಲನ
ತೊಂಡನಾಗದ ನರನ ಬಾಳು ಬಾಳುವೆಯೆ ? 5


ಚಿಂತೆ ಏತಕೊ - ಬಯಲ ಭ್ರಾಂತಿ chinte yaatako bayala branti


ಚಿಂತೆ ಏತಕೊ - ಬಯಲ ಭ್ರಾಂತಿ ಏತಕೊ |
ಕಂತುಪಿತನ ದಿವ್ಯನಾಮ ಮಂತ್ರವಿರಲು ಜಪಿಸದೆ ಪ.
ಏಳುತುದಯ ಕಾಲದಲ್ಲಿ |
ವೇಳೆಯರಿತು ಕೂಗುವಂಥ ||
ಕೋಳಿ ತನ್ನ ಮರಿಗೆ ಮೊಲೆಯ |
ಹಾಲಕೊಟ್ಟು ಸಲಹಿತೆ ? 1
ಸಡಗರದಲಿ ನಾರಿಜನರು |
ಹಡೆಯುವಾಗ ಸೂಲಗಿತ್ತಿ ||
ಅಡವಿಯೊಳಗೆ ಹೆರುವ ಮೃಗವ |
ಪಿಡಿದು ರಕ್ಷಣೆ ಮಾಳ್ಪರಾರು 2
ಹೆತ್ತ ತಾಯಿ ಸತ್ತ ಶಿಶುವು |
ಮತ್ತೆ ಕೆಟ್ಟಿತೆಂಬರು ಜನರು ||
ಹುತ್ತಿನ ಹಾವಿಗೆ ಗುಬ್ಬಿಗೆ ಮೊಲೆಯ - |
ನಿತ್ತು ರಕ್ಷಣ ಮಾಡುವರಾರು 3
ಗಟ್ಟಿಮಣ್ಣಿನ ಶಿಶುವ ಮಾಡಿ |
ಹೊಟ್ಟೆಯೊಳಗೆ ಇರಿಸುವಂಥ ||
ಕೊಟ್ಟ ದೈವ ಕೊಂಡೊಯ್ದರೆ |
ಕುಟ್ಟಿಕೊಂಡು ಅಳುವುದೇಕೆ 4
ನಂಬಿಗೆಗಿವು ಸಾಲವೆಂದು |
ಹಂಬಲಿಪುದು ಲೋಕವೆಲ್ಲ ||
ನಂಬಿ ಪುರಂದರವಿಠಲ - |
ನೆಂಬ ನಾಮ ನುಡಿದ ಮೇಲೆ 5


ಚಂದ್ರಗಾವಿಯನುಟ್ಟು ದುಂಡು chandragaviyunuttu dandu


ಚಂದ್ರಗಾವಿಯನುಟ್ಟು ದುಂಡು ಮುತ್ತನೆ ಕಟ್ಟಿ  ಪೆಂಡೆಯರುಳಿಯನಿಟ್ಟು ||
ಕೆಂದಾವಿನ ಹಾಲ ಹರವಿಯ ಹೊತ್ತುಕೊಂಡು |ಬಂದಾಳು ಬೀದಿಗಾಕೆ \\ ಪ\\
ಹಾಲು ಮಾರುವ ಧ್ವನಿ ಲಾಲಿಸಿ ರಂಗಯ್ಯ ಮೇಲಿನ ಕೇರಿಯಲಿ ||
ನಾಳೆ ನಮ್ಮನೆಯಲಿ ವೀಳೆ-ಪ್ರಸ್ತಗಳುಂಟು ಹಾಲು ನಿಲ್ಲಿಸೆಂದನು   \\1\\
ಕೊಂಡವನು ನೀನಲ್ಲ ಡಂಭಕರ ಮಾತೇಕೊ  ಗಂಡನುಳ್ಳವಳ ಕೂಡ ||
ಮಂಡಲವಾಳುವ ಅರಸಿನ ಮುಂದೆ ಹೇಳಿ  ದಂಡವ ತೆರಸುವೆನೊ   \\2\\
ಅಡವಿಹಂಬುಗಳಿಗೆ ಹೆಡಿಗೆ ಸುಂಕವು ಇಲ್ಲ  ತಡೆದವ ನೀನಾರೊ? ||
ನಡೆ ಊರ ಮುಂದಕೆ ತಳವಾರರೈದಾರೆ  ಗಡನೆ ಪೇಳುವೆನೆಂದಳು \\ 3 \\
ಬಲ್ಲೆ ಬಲ್ಲೆನೆ ನಿನ್ನ ಬಗೆಯ ಮಾತುಗಳೆಲ್ಲ  ಎಲ್ಲಿಹ ತಳವಾರನೆ ||
ಅಲ್ಲದಿದ್ದರೆ ಬಂದು ವೀಳ್ಯವ ತಕ್ಕೊಂಡು  ಅಲ್ಲಲ್ಲಿ ದೊರದಿರೆ \\4\\
ಕೋಲು ಕೈಯಲಿ ಪಣೆಯಲಿ ಸಿರಿನಾಮವು  ಆಲದ ಮರದಡಿಯೆ ||
ಕಾಲ ಮೊದಲು ಹಾಲ ಮಾರಿದ ಸುಂಕರೆ ನಿಲ್ಲೆಂದು ಸೆರಗ ಪಿಡಿದ   \\5\\
ಅಪ್ಪ ಸೆರಗ ಬಿಡೊ, ಅಣ್ಣ ಸೆರಗ ಬಿಡೊ  ಅಪ್ಪಯ್ಯ ಸೆರಗ ಬಿಡೊ ||
ಅಪ್ಪನು ನಾನಲ್ಲ, ಅಣ್ನನು ಅಲ್ಲ ನಿಮ್ಮಪ್ಪನ ಅಳಿಯ ಕಾಣೆ  \\6\\
ಮಾವ ಸೆರಗ ಬಿಡೊ, ಭಾವ ಸೆರಗ ಬಿಡೊ ಭಾವಯ್ಯ ಸೆರಗ ಬಿಡೊ ||
ಮಾವನು ನಾನಲ್ಲ, ಭಾವನು ನಾನಲ್ಲ  ಮಾವನ ಮಗನು ಕಾಣೆ   \\7\\
ಅಣ್ಣ ಸೆರಗ ಬಿಡೊ, ತಮ್ಮ ಸೆರಗ ಬಿಡೊ  ಅಣ್ಣಯ್ಯ ಸೆರಗ ಬಿಡೊ ||
ಅಣ್ಣಯ್ಯ ನಾನಲ್ಲ, ತಮ್ಮನು ಅಲ್ಲ ನಿಮ್ಮಣ್ಣನ ಭಾವ ಕಾಣೆ   \\8\\
ಕಂದ ಸೆರಗ ಬಿಡೊ, ತಂದೆ ಸೆರಗ ಬಿಡೊ  ಕಂದಯ್ಯ ಸೆರಗ ಬಿಡೊ ||
ಕಂದನು ನಾನಲ್ಲ, ತಂದೆಯು ನಾನಲ್ಲ  ಕಂದನ ತಂದೆ ಕಾಣೆ   \\9\\
ನೆತ್ತಿ ಮೇಲಿನ ಕೊಡ ಎತ್ತಿ ಈಡಾಡುತ ಎತ್ತಿಕೊಂಡಳು ಕೃಷ್ಣನ ||
ಭಕ್ತರ ಸಲಹುವ ಪುರಂದರವಿಠಲ  ವತ್ಸ ವೆಂಕಟರಾಯನ\\10\\


Tuesday, 31 March 2020

ಘಾತಕರಿನ್ನೇಕೆ ಪರಮಾರ್ಥ ಶ್ರವಣ



ಘಾತಕರಿನ್ನೇಕೆ ಪರಮಾರ್ಥ ಶ್ರವಣ ನೀತಿವಂತರೆ ನಿಮಗೆ ಪರನಿಂದೆ ಏಕೆ ? \\ಪ.\\
ಕೋತಿಗಂದಣವೇಕನಾಥನಿಗೆ ಮುನಿಸೇಕೆ ? ಹೋತು ಕಾಳಗವಾಡೆ ಖ್ಯಾತಿಯೇಕೆ ?
ಸೋತ ಮನುಜಗೆ ಮುನ್ನ ಸೊಗಸು ವೆಗ್ಗಳವೇಕೆ ? ಪ್ರೀತಿಯಿಲ್ಲದ ಮನೆಯೊಳಿರುವುದೇಕೆ ?   \\1\\
ದಯವಂತನಲ್ಲದಾ ದೊರೆಯ ಸೇವೆಯು ಏಕೆ ? ಭಯವು ಉಳ್ಳವಗೆ ರಣರಂಗವೇಕೆ ?
ನಯವಾಕ್ಯವಿಲ್ಲದ - ಪುರುಷ ನಾರಿಯರೇಕೆ ವ್ಯಯವಾದ ಧನಕಿನ್ನು ಚಿಂತೆಯೇಕೆ ?   \\2\\
ಬಲ್ಲಿದನ ಹಗೆಗೊಂಡು ತಲ್ಲಣಿಸುತಿರಲೇಕೆ ಬಲ್ಲಧಿಕ e್ಞÁನಿಗೆ ದ್ವೇಷವೇಕೆ ?
ಚೆಲ್ವ ಶ್ರೀ ಪುರಂದರ ವಿಠಲನ ದಯವಿರಲು ಕ್ಷಲ್ಲಿಸುವ ಯಮಗಿನ್ನು ಅಂಜಬೇಕೆ ?   \\3\\


ಗೋವಿಂದ ನಮೋ ಗೋವಿಂದ ನಮೋ Govinda namo Govinda


ಗೋವಿಂದ ನಮೋ ಗೋವಿಂದ ನಮೋ ಗೋವಿಂದ ನಾರಾಯಣ ಗೋವರ್ಧನ ಗಿರಿಯೆತ್ತಿದ ಗೋವಿಂದ ನಮ್ಮ ರಕ್ಷಿಸೊ \\ಪ.\\
ಅರ್ಥವಾರಿಗೆ ಪುತ್ರರಾರಿಗೆ ಮಿತ್ರಬಾಂಧವರಾರಿಗೆ ಕರ್ತು ಯಮನವರೆಳೆದು ಒಯ್ಯಲು ಅರ್ಥ ಪುತ್ರರು ಕಾಯ್ವರೆ  \\1\\
ಮಂಚ ಬಾರದು ಮಡದಿ ಬಾರಳು ಕಂಚುಗನ್ನಡಿ ಬಾರದು ಸಂಚಿತಾರ್ಥವ ದ್ರವ್ಯಬಾರದು ಮುಂಚೆ ಮಾಡಿರಿ ಧರ್ಮವ \\2\\
ಒಡವೆಯಾಸೆಗೆ ಒಡಲ ಕಿಚ್ಚಿಗೆ ಮಡದಿ ಬೆನ್ನಲ್ಲಿ ಬಾಹಳು  ಬಿಡದೆ ಯಮನವರೆಳದು ಒಯ್ಯಲು ಎಡವಿ ಬಿದ್ದಿತು ನಾಲಗೆ \\3\\
ಪ್ರಾಣವಲ್ಲಭೆ ತನ್ನ ಪುರುಷನ ಕಾಣದೆಯೆ ನಿಲಲಾರಳು ಪ್ರಾಣ ಹೋಗಲು ಮುಟ್ಟಲಂಜುವಳು ಜಾಣೆ ಕರೆದರೆ ಬಾರಳು \\4\\
ತಂದು ಬಂದರೆ ತನ್ನ ಪುರುಷಗೆ ಬನ್ನಿ ಬಳಲಿದಿರೆಂಬಳು  ಒಂದು ದಿನದಲಿ ತಾರದಿದ್ದರೆ ಹಂದಿನಾಯಂತೆ ಕೆಲೆವಳು \\5\\
ಉಂಟುಕಾಲಕೆ ನಂಟರಿಷ್ಟರು ಬಂಟರಾಗಿಯೆ ಕಾಯ್ವರು ಕಂಟಕರು ಯಮನವರು ಎಳೆವಾಗ ನಂಟರಿಷ್ಟರು ಬಾರರು \\6\\
ದಿಟ್ಟತನದಲಿ ಪಟ್ಟವಾಳಿದ ಮೆಟ್ಟಿ ದಿತಿಜರಸೀಳಿದ ಮುಟ್ಟಿ ಭಜಿಸಿರೊ ಶ್ರೀ ಪುರಂದರವಿಠಲೇಶನ ಚರಣವ \\7\\


ಗೋವಿಂದ ಎನ್ನಿರೊ ಹರಿ ಗೋವಿಂದ ಎನ್ನಿರೊ govinda enniro hari govinda enniro


ಗೋವಿಂದ ಎನ್ನಿರೊ - ಹರಿ ಗೋವಿಂದ ಎನ್ನಿರೊ  ಗೋವಿಂದನ ನಾಮವ ಮರೆಯೆದಿರಿರೊ   \\ಪ. \\
ತುಂಬಿರುವ ಪಟ್ಟಣಕೆ ಒಂಬತ್ತು ಬಾಗಿಲು  ಸಂಭ್ರಮದರಸುಗಳೈದು ಮಂದಿ ||
ಡಂಭಕತನದಿಂದ ಕಾಯುವ ಜೀವವ  ನಂಬಿ ನಚ್ಚಿ ಕೆಡಬೇಡಿ ಕಾಣಿರೊ   \\1 \\
ನೆಲೆಯು ಇಲ್ಲದ ಕಾಯ ಎಲವಿನ ಹಂದರವು  ಬಲಿದು ಸುತ್ತಿದ ಚರ್ಮದ ಹೊದಿಕೆ ||
ಮಲಮೂತ್ರಂಗಳು ಕೀವುಗಳು ಕ್ರಿಮಿಗಳು ಚೆಲುವ ತೊಗಲನು ಮೆಚ್ಚಿ ಕೆಡಬೇಡಿರಯ್ಯ  \\2 \\
ಹರ ಬ್ರಹ್ಮ ಸುರರಿಂದೆ ವಂದಿತನಾಗಿಪ್ಪ  ಹರಿಯೇ ಸರ್ವೋತ್ತಮನೆಂದೆನ್ನಿರೊ ||
ಪುರಂದವಿಠಲನ ಸ್ಮರಣೆಯ ಮಾಡಲು  ದುರಿತ ಭಯಂಗಳ ಪರಿಹರಿಸುವುದು \\3 \\


ಗೋವರ್ಧನಗಿರಿಯ ನೆಗಹಿಬಂದು


ಗೋವರ್ಧನಗಿರಿಯ ನೆಗಹಿಬಂದು - ನೀನಿಲ್ಲಿಹಾವಿನ ಮಂಚದ ಮೇಲೆ ಮಲಗಿದೆಯೊ ರಂಗ?   \\ಪ\\
ಮಧುರೆಯೊಳಗೆ ಜನಿಸಿ ಗೋಕುಲಕ್ಕೆ ತೆರಳಿ |ಹಾದಿಹೋಗಿ ಕಾಲು ನೊಂದು ಮಲಗಿದೆಯೊ ರಂಗ?\\ 1\\
ಅಸುರೆ ಪೂತಣಿಯ ಮೊಲೆಯುಂಡು ಶಕಟನ ಒದೆದು | ಅಸುಗುಂದಿ ಮಲಗಿದೆಯೊ- ಶ್ರೀರಂಗ \\2\\
ಕಡಹದ ಮರದಿಂದ ಧುಮುಕಿ ಕಾಳಿಂಗನ |ಹೆಡೆಯ ತುಳಿದು ಕಾಲ್ನೊಂದು ಮಲಗಿದೆಯೊ? \\3\\
ಬಾಲ ಬ್ರಹ್ಮಣನಾಗಿ ಬಲಿಯ ದಾನವ ಬೇಡಿ |ನೆಲನನಳೆದು ಕಾಲುನೊಂದು ಮಲಗಿದೆಯೊ? \\4\\
ಶ್ರೀಶ ಶ್ರೀರಂಗರಾಜ ಪರಮ ಪಾವನ |ಶೇಷಶಯನ ಶ್ರೀಪುರಂದರ ವಿಠಲ \\5\\