Labels

Thursday, 16 January 2020

ನಾನೇನು ಮಾಡಿದೆನೋ ವೆಂಕಟರಾಯ naanenu maadidenu venkataraya

ನಾನೇನು ಮಾಡಿದೆನೋ ವೆಂಕಟರಾಯ
ನೀನೆನ್ನ ಕಾಯಬೇಕೋ || ಪಲ್ಲವಿ ||
ಮಾನಾಪಮಾನವು ನಿನ್ನದು ಎನಗೇನು
ದೀನರಕ್ಷಕ ತಿರುಪತಿಯ ವೆಂಕಟರಾಯ || ಅನು ಪಲ್ಲವಿ ||
ರಕ್ಕಸನಲ್ಲವೇನೋ ಪ್ರಹ್ಲಾದನು
ಚಿಕ್ಕವ ಧ್ರುವನಲ್ಲವೆ
ಉಕ್ಕಿ ಬರುವ ಕರ್ಮ ಮಾಡಿದಜಮಿಳ ನಿಮ್ಮ
ಅಕ್ಕನ ಮಗನೇನೋ ವೆಂಕಟರಾಯ || ೧ ||
ಕರಿರಾಯ ಕರೆಸಿದನೆ ದ್ರೌಪದಾದೇವಿ
ಬರೆದೋಲೆ ಕಳುಹಿದಳೆ
ವರಋಷಿ ಪತ್ನಿ ಕಲ್ಲಾಗಿ ಸ್ತ್ರೀಯಾದದ್ದು
ಧರೆಯೆಲ್ಲ ಅರಿಯದೇನೋ ವೆಂಕಟರಾಯ || ೨ ||
ಒಪ್ಪಿಡಿಯವಲಕ್ಕಿಯ ತಂದವನಿಗೆ
ಒಪ್ಪಿ ಕೊಟ್ಟೆಯೊ ಭಾಗ್ಯವ
ಸರ್ಪಶಯನ ಶ್ರೀ ಪುರಂದರವಿಠಲ
ಅಪ್ರಮೇಯನೆ ಸಲಹೋ ವೆಂಕಟರಾಯ || ೩ ||

ಗೋವಿಂದಾ ನಿನ್ನಾನಂದ ಸಕಲ ಸಾಧನವೋ govinda ninnanada sakala sadhanave

ಗೋವಿಂದಾ ನಿನ್ನಾನಂದ ಸಕಲ ಸಾಧನವೋ||pa||
ಅಣುರೇಣು ತೃಣಕಾಷ್ಠ ಪರಿಪೂರ್ಣ ಗೋವಿಂದ
ನಿರ್ಮಲಾತ್ಮಕನಾಗಿ ಇರುವುದೆ ಆನಂದ||1||
ಸೃಷ್ಟಿ ಸ್ಥಿತಿ ಲಯ ಕಾರಣ ಗೋವಿಂದ
ಈ ಪರಿ ಮಹಿಮೆಯ ತಿಳಿಯೋದೆ ಆನಂದ||2||
ಮಂಗಳಮಹಿಮ ಪುರಂದರವಿಟ್ಠಲ
ಹಿಂಗದೆ ದಾಸರ ಸಲಹೋದೆ ಆನಂದ||3||

ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ indu ninna moreya hokke

ಇಂದು ನಿನ್ನ ಮರೆಯ ಹೊಕ್ಕೆ ವೆಂಕಟೇಶನೆ
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ||pa||
ಶೇಷಗಿರಿಯವಾಸ ಶ್ರೀಶ ದೋಷರಹಿತನೆ
ಏಸು ದಿನಕು ನಿನ್ನ ಪಾದದಾಸನು ನಾನೆ
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ||1||
ಕಮಲನಯನ ಕಾಮಜನಕ ಕರುಣವಾರಿಧೇ
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ||2||
ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ
ಶರಣಪಾಲ ಬಿರುದು ತೋರಿ ಪೊರೆವ ದೇವನೆ
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ||3||

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ kande knade swamiya bedikonde

ಕಂಡೆ ಕಂಡೆ ಸ್ವಾಮಿಯ ಬೇಡಿಕೊಂಡೆ                                             ||ಪ||
ಕಂಡೆ ತಿರುಪತಿ ವೆಂಕಟೇಶನ ಕಾರಣಾತ್ಮಕ ಸಾರ್ವಭೌಮನ
ಕಾಮಿತಾರ್ಥಗಳೀವ ದೇವನ ಕರುಣಾನಿಧಿ ಎಂದೆನಿಸಿ ಮೆರೆವನ            ||ಅ.ಪ||
ಕೋಟಿಸೂರ್ಯ ಪ್ರಕಾಶವೆನಿಪ ಕಿರೀಟವನು ಮಸ್ತಕದಿ ಕಂಡೆನು
ನೋಟಕಾಶ್ಚರ್ಯವಾದ ನಗೆಮುಖನೊಸಲಿನಲಿ ತಿರುಮಣಿಯ ಕಂಡೆನು
ಸಾಟಿಯಿಲ್ಲದೆ ಚತುರ ಹಸ್ತದಿ ಶಂಖಚಕ್ರಗದಾಬ್ಜ ಕಂಡೆನು
ಬೂಟಕದ ಮಾತಲ್ಲ ಕೇಳಿರೋ ಭೂರಿದೈವರ ಗಂಡನಂಘ್ರಿಯ              ||೧||
ತಪ್ಪುಕಾಣಿಕೆ ಕಪ್ಪವನು ಸಮಸ್ತದ್ವೀಪಗಳಿಂದಲಿ ತರಿಸುವ
ಉಪ್ಪು ಓಗರಗಳನೆ ಮಾರಿಸಿ ಉಚಿತದಿಂದಲಿ ಹಣವ ಗಳಿಸುವ
ಇಪ್ಪತ್ತು ದುಡ್ಡಿಗೆ ಸೇರು ತೀರ್ಥ ಒಪ್ಪದಲಿ ಕ್ರಯ ಮಾಡಿ ಕೊಡಿಸುವ
ಸರ್ಪಶಯನ ಸಾರ್ವಭೌಮನ ಅಪ್ಪ ವೆಂಕಟರಮಣನಂಘ್ರಿಯ             ||೨||
ಉರದಿ ಶ್ರೀ ದೇವಿಯಳ ಕಂಡೆನು ಉನ್ನತದ ಕೌಸ್ತುಭವ ಕಂಡೆನು
ಗರುಡ ಕಿನ್ನರನಾರದಾದಿ ಗಂಧರ್ವರ ಎಡಬಲದಲಿ ಕಂಡೆನು
ತರತರದಿ ಭಕ್ತರಿಗೆ ವರಗಳ ಕರೆದು ಕೊಡುವುದ ನಿರತ ಕಂಡೆನು
ಶರಧಿಶಯನನ ಶೇಷಗಿರಿಯ ವರದ ಪುರಂದರವಿಠಲನಂಘ್ರಿಯ           ||೩||

ಶ್ರೀನಿವಾಸ ನೀನೆ ಪಾಲಿಸೊ shrinivasa neene Paaliso

ಶ್ರೀನಿವಾಸ ನೀನೆ ಪಾಲಿಸೊ ಶ್ರಿತಜನಪಾಲ
ಗಾನಲೋಲ ಶ್ರೀ ಮುಕುಂದನೆ

ಧ್ಯಾನಮಾಳ್ಪ ಸಜ್ಜನರ ಮಾನದಿಂದ ಪರಿಪಾಲಿಸುವ
ವೇಣುಗೋಪಾಲ ಗೋವಿಂದ ವೇದವೇದ್ಯ ನಿತ್ಯಾನಂದ

ಎಷ್ಟು ದಿನ ಕಷ್ಟಪಡುವುದೋ ಯಶೋದೆ ಕಂದ
ದೃಷ್ಟಿಯಿಂದ ನೋಡಲಾಗದೆ
ಮುಟ್ಟಿ ನಿನ್ನ ಭಸಿಸಲಾರೆ, ಕೆಟ್ಟ ನರಜನ್ಮದವ
ದುಷ್ಟ ಕಾರ್ಯ ಮಾಡಿದಾಗ್ಯೂ ಇಷ್ಟನಾಗಿ ಕೈಯ ಪಿಡಿಯೋ

ಎಂದಿಗೆ ನಿನ್ನ ಪಾದಾಬ್ಜವ ಪೊಂದುವ ಸುಖ
ಎಂದಿಗೆ ಲಭ್ಯವೊ ಮಾಧವ
ಅಂಧಕಾರಣ್ಯದಲಿ ನಿಂದು ತತ್ತರಿಸುತಿಹೆನೊ
ಅಂದದಿಂ ಭವಾಬ್ದಿಯೊಳು ನಿಂದು ನೊಂದೆನೊ ಗೋವಿಂದ

ಅನುದಿನ ಅನೇಕ ರೋಗಗಳ ಅನುಭವಿಸಿದೆನು
ಘನ ಮಹಿಮನೆ ಕೇಳಯ್ಯ
ತನುವಿನಲಿ ಬಲವಿಲ್ಲ ನೆನೆದ ಮಾತ್ರದಿ ಸಲಹೊ ಯೆನ್ನ
ಹನುಮದೀಶ ಪುರಂದರವಿಟ್ಠಲನೆ ಕೈಯ ಪಿಡಿದು

Wednesday, 15 January 2020

ನಂಬಿದೆ ನಿನ್ನ ಪಾದವ - ವೆಂಕಟರಮಣ nambide ninna paadava


ನಂಬಿದೆ ನಿನ್ನ ಪಾದವ - ವೆಂಕಟರಮಣ
ನಂಬಿದೆ ನಿನ್ನ ಪಾದವ || ಪ
ನಂಬಿದೆ ನಿನ್ನ ಪದಾಂಬುಜಯುಗಳವ
ಇಂಬಿತ್ತು ಸಲಹಯ್ಯ ಶಂಖ-ಚಕ್ರಧರನೆ . ಪ
ತಂದೆಯು ನೀನೆ ತಾಯಿಯು ನೀನೆ
ಬಂಧು ಬಳಗವು ನೀನೆ ||
ಬಂದ ದುರಿತವೆನ್ನ ಹೊಂದಿಕೊಳ್ಳದಂತೆ
ತಂದೆ ಸಲಹೊ ಮುಕುಂದ ಮುರಾರಿ 1
ಚಿಕ್ಕಂದು ಮೊದಲು ನಾನು ನಿನ್ನಯ ಪಾದ
ಹೊಕ್ಕು ಜೀವಿಸುತಿಹೆನು ||
ಗಕ್ಕನೆ e್ಞÁನವನಕ್ಕರೆಯಲಿ ಕೊಡು
ಮಕ್ಕಳ ಮಾಣಿಕ್ಯ ರುಕ್ಮಿಣಿಯರಸಾ 2
ಮರೆತು ನಾ ಮಾಯೆಯೊಳು ಮುಳುಗಿದೆ ಅದ
ನರಿತು ಅರಿಯದಾದೆ ||
ಮರೆಯದೆ ಎನ್ನನು ಪೊರೆಯೆ ಕೃಪಾನಿಧಿ
ವರದ ಶ್ರೀವೆಂಕಟ ಪುರಂದರ ವಿಠಲ 3


ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ nambi kettavarunte


ನಂಬಿ ಕೆಟ್ಟವರುಂಟೆ - ಕೃಷ್ಣಯ್ಯನ |
ನಂಬಲಾರದೆ ಕೆಟ್ಟರು ಪ.
ಅಂಬುಜನಾಭನ ಪಾದವ ನೆನೆದರೆ |
ಇಂಬುಗೊಡದ ದುಃಖ ಹರಿಸುವ ಶ್ರೀ ಕೃಷ್ಣ ಅಪ
ಬಲಿಯ ಪಾತಾಳಕಿಳುಹಿ - ಭಕ್ತನ ಬಾ - |
ಗಿಲವ ಕಾಲುವೆ ನಾನೆಂದ ||
ಛಲದೊಳು ಅಸುರರ ಶಿರಗಳ ತರಿದು ತಾ |
ನೊಲಿದು ವಿಭೀಷಣಗೆ ಪಟ್ಟಗಟ್ಟಿದ ಈ ಕೃಷ್ಣ 1
ತರಳ ಪ್ರಹ್ಮಾದಗೊಲಿದು - ಹಿರಣ್ಯಕನ ಉ - |
ಗುರಿನಿಂದಲೆ ಸೀಳಿದ |
ಕರಿರಾಜಗೊಲಿದು ನೆಗಳು ನುಂಗುತಿರಲಾಗ ||
ಪರಿಹರಿಸಿದ ಜಲದೊಳು ಪೊಕ್ಕು ಶ್ರೀ ಕೃಷ್ಣ 2
ಪಾಂಡವರಿಗೆ ಒಲಿದು - ಕೌರವರನು |
ತುಂಡು ಛಿದ್ರಮಾಡಿದೆ ||
ಗಂಡರೈವರ ಮುಂದೆ ದ್ರೌಪದಿ ಕೂಗಲು |
ಕಂಡು ಕರುಣದಿ ಕಾಯ್ದ ಪುರಂದರವಿಠಲನ 3