Labels

Friday, 5 June 2020

ನಾರಾಯಣ ಗೋವಿಂದ narayana govinda


ನಾರಾಯಣ ಗೋವಿಂದ - ಹರಿಹರಿ
ನಾರಾಯಣ ಗೋವಿಂದ ಪ
ನಾರಾಯಣ ಗೋವಿಂದ ಮುಕುಂದ
ಪರತರ ಪರಮಾನಂದ ಅ.ಪ
ಮೊದಲು ಮತ್ಸ್ಯನಾಗಿ ಉದಿಸಿ ಸೋಮನನು
ಸದೆದು ವೇದಗಳ ತಂದ 1
ಮಂದರಗಿರಿಯಲಿ ಸಿಂಧುಮಥಿಸಿ ಸುಧೆ
ತಂದು ಭಕ್ತರಿಗುಣಲೆಂದ 2
ಭೂಮಿಯ ಕದಿದಾ ಖಳನನು ಮರ್ದಿಸಿ
ಆ ಮಹಾಸತಿಯಳ ತಂದ 3
ದುರುಳ ಹಿರಣ್ಯನ ಕರುಳುಬಗೆದು ತನ್ನ
ಕೊರಳೊಳಗಿಟ್ಟಾನಂದದಿಂದ 4
ಪುಟ್ಟನಾಗಿ ದಾನಕೊಟ್ಟ ಬಲಿಯ ತಲೆ
ಮೆಟ್ಟಿ ತುಳಿದ ಬಗೆಯಿಂದ 5
ಧಾತ್ರಿಯೊಳಗೆ ಮುನಿಪುತ್ರನಾಗಿ ಬಂದು
ಕ್ಷತ್ರಿಯರೆಲ್ಲರ ಕೊಂದ 6
ಮಡದಿಗಾಗಿ ತಾ ಕಡಲನೆ ಕಟ್ಟಿ
ಹಿಡಿದು ರಾವಣನ ಕೊಂದ 7
ಗೋಕುಲದೊಳು ಹುಟ್ಟಿ ಆಕಳ ಕಾಯ್ದ
ಶ್ರೀಕೃಷ್ಣನು ತಾ ಬಂದ 8
ಛಲದಲಿ ತ್ರಿಪುರರ ಸತಿಯರ ವ್ರತದ
ಫಲವನಳಿದ ಬಗೆಯಿಂದ 9
ಧರೆಯೊಳು ಪರಮ ನೀಚರ ಸವರಲು ಕು -
ದುರೆಯನೇರಿದ ಕಲಿ ಚೆಂದ 10
ದೋಷದೂರ ಶ್ರೀ ಪುರಂದರ ವಿಠಲ
ಪೋಷಿಪ ಭಕ್ತರ ವೃಂದ 11


ನಾರಾಯಣ ಎನ್ನಿರೊ narayana enniro


ನಾರಾಯಣ ಎನ್ನಿರೊ - ಶ್ರೀ ನರಹರಿ |
ನಾರಾಯಣ ಎನ್ನಿರೊ ಪ.
ನಾರಾಯಣನೆಂದು ಅಜಮಿಳ ಕೈವಲ್ಯ |
ಸೂರೆಗೊಂಡನೆಂಬ ಸುದ್ದಿಯನರಿಯಿರಾ ? ಅಪ
ಚೋರರ ಭಯ ಎಲ್ಲವೊ - ಇದಕೆ ನೋಡೈ - |
ದಾರರಂಜಿಕೆ ಇಲ್ಲವೊ ||
ಊರನಾಳುವ ದೊರೆಯ ಭೀತಿ ಇನಿತಿಲ್ಲವೊ ||
ಘೋರ ಪಾತಕವೆಲ್ಲ ಹಾರಬಿಡುವುದಿದು 1
ಕಾಶಿಗೆ ಹೋಗಲೇಕೆ - ಕಾವಡಿ ಹೊತ್ತು - |
ಬೇಸತ್ತು ತಿರುಗಲೇಕೆ |
ವಾಸುದೇವನ ನಾಮ ವರ್ಣಿಸಿದವರಿಗೆ |
ಕ್ಲೇಶವೆಂಬುವುದಿದು ಲೇಶಮಾತ್ರವು ಇಲ್ಲ 2
ಸ್ನಾನವ ಮಾಡಲೇಕೆ - ಸಂಧ್ಯಾವಂದನೆ - |
ಮೌನ ಮಂತ್ರಗಳೇತಕೆ ||
ದೀನರಕ್ಷಕ ಬೆಟ್ಟದೊಡೆಯನಾದವನ |
ಧ್ಯಾನಕೆ ಸಮವುಂಟೆ ಪುರಂದರವಿಠಲನ 3


ನಾರಾಯಣ ಎನ್ನಬಾರದೆ narayana ennabaarade


ನಾರಾಯಣ ಎನ್ನಬಾರದೆ - ನಿಮ್ಮ |
ನಾಲಿಗೆಯೊಳು ಮುಳ್ಳು ಮುರಿದಿಹುದೇ ? ಪ.
ವಾರಣಾಸಿಗೆ ಪೋಗಿ ದೂರ ಬಳಲಲೇಕೆ |
ನೀರ ಕಾವಡಿಯನು ಪೊತ್ತು ತಿರುಗಲೇಕೆ ||
ಊರುರು ತಪ್ಪದೆ ದೇಶಾಂತರವೇಕೆ |
ದಾರಿಗೆ ಸಾಧನವಲ್ಲವೆ ಹರಿನಾಮ ? 1
ನಿತ್ಯ ಉಪವಾಸವಿದ್ದು ಹಸಿದು ಬಳಲಲೇಕೆ |
ಮತ್ತೆ ಚಳಿಯೊಳು ಗಂಗೆ ಮುಳಗಲೇಕೆ ||
ಹಸ್ತವ ಪಿಡಿದು ಮಾಡುವ ಜಪ - ತಪವೇಕೆ
ಮುಕ್ತಿಗೆ ಸಾಧನವಲ್ಲವೇ ಹರಿನಾಮ ? 2
ಸತಿ - ಸುತರನು ಬಿಟ್ಟು ಯತಿಗಳಾಶ್ರಮವೇಕೆ
ವ್ರತ - ಕೃಚ್ಛ್ರ ನೇಮ - ನಿಷ್ಟೆಗಳೇತಕೆ ||
ಪೃಥಿವಿಯೊಳಗೆ ನಮ್ಮ ಪುರಂದರವಿಠಲನ |
ಅತಿ ಭಕುತಿಯಿಂದೊಮ್ಮೆ ನೆನೆದರೆ ಸಾಲದೆ 3


ನಾಮವನೊದಗಿಸಯ್ಯ -ಶ್ರೀಹರಿ ನಿನ್ನ naamavanodagisayya


ನಾಮವನೊದಗಿಸಯ್ಯ -ಶ್ರೀಹರಿ ನಿನ್ನ |
ನಾಮವನೊದಗಿಸಯ್ಯ ಪ
ನಾಮವನೊದಗಿಸಯ್ಯ ನಾನೆಂಬ ಕರ್ತೃತ್ವ ಬಿಡಿಸಿ |
ಸಾಮಜಪೋಷಕ ನಿನ್ನ ಪಾದಸರಸಿಜಗಳಿಗೆರಗುವೆ ಅ.ಪ
ಮಾತನಾಡುವಾಗ ಮಲಗುವಾಗ ನಡೆಯುವಾಗ |
ಭೀತಿಗೊಂಡಾಗ ಎಡಹಿಬೀಳುವಾಗ |
ಸೀತಾರಾಮ ಗೋವಿಂದ ಶ್ರೀ ವೈಕುಂಠಾಧೀಶ ಅ-|
ನಾಥ ಬಾಂಧವ, ಕೃಷ್ಣಾ, ಕೃಷ್ಣಾ ಎಂದು ಕರೆವ 1
ತನು ತಾಳದಂಥ ಕ್ಷುಧೆ ದಾಹವಿಕಾರಗ-|
ಳನುಭವಿಸುತ ಕಂಗೆಡುವಂಥ ಸಮಯದಲ್ಲಿ ||
ವನಜನಾಭ ಗೋವಿಂದ, ವಾಣೀಪತಿಪಿತ ಕೃಷ್ಣ |
ದನುಜ ಮರ್ದನ ಭಕ್ತ ವತ್ಸಲನೆಂದು ಕರೆವ 2
ಆಸಹ್ಯವಾದ ಜರೆ ರೋಗಂಗಳಾವರಿಸಿ |
ಅಸುಗಳು ಕಂಠಗತವಾಗಿ ಧೃತಿತಪ್ಪಿ ||
ವಿಷಮದೂತನ ಕೈವಶವಪ್ಪ ಸಮಯದಲ್ಲಿ |
ಬಿಸಜಾಕ್ಷ ಪುರಂದರವಿಠಲನೆಂದು ಕರೆವ 3


ನಾನೇನ ಮಾಡಿದೆನೊ naanena maadideno


ನಾನೇನ ಮಾಡಿದೆನೊ-ರಂಗಯ್ಯ ರಂಗ
ನೀನೆನ್ನ ಕಾಯಬೇಕೋ ಪ
ಮಾನಾಭಿಮಾನವು ನಿನ್ನದು ಎನಗೇನು
ದೀನ ರಕ್ಷಕ ತಿರುಪತಿ ವೆಂಕಟರಮಣ ಅ.¥
ರಕ್ಕಸತನುಜನಲ್ಲೇ - ಪ್ರಹ್ಲಾದನು
ಚಿಕ್ಕ ಪ್ರಾಯದ ಧ್ರುವನು ||
ಸೊಕ್ಕಿನ ಪಾಪ ಮಾಡಿದಜಮಿಳನು ನಿನ್ನ
ಅಕ್ಕನ ಮಗನು ಮಗನು ಏನೋ -ರಂಗಯ್ಯ 1
ಕರಿರಾಜ ಕರಿಸಿದನೇ - ದ್ರೌಪದಿದೇವಿ
ಬರದೋಲೆ ಕಳುಹಿದಳೇ ||
ಕರುಣದಿಂದಲಿ ಋಷಿಪತ್ನಿಯ ಶಾಪವ
ಪರಿಹರಿಸಿದೆಯಲ್ಲವೋ -ರಂಗಯ್ಯ
ಒಪ್ಪಿಡಿಯವಲಕ್ಕಿಯ -ನಿನಗೆ ತಂದು
ಒಪ್ಪಿಸಿದವಗೊಲಿದೆ ||
ಒಪ್ಪುವೆ ನಿನಗೆ ಶ್ರೀ ಪುರಂದರ ವಿಠಲವ
ರಪ್ಪಂತೆ ಎನ್ನ ಕಾಯೋ -ರಂಗಯ್ಯ 3


ನಾನೇಕೆ ಬಡವನೊ naaneke badavano


ನಾನೇಕೆ ಬಡವನೊ -ನಾನೇಕೆ ಪರದೇಶಿ
ನೀನಿರುವತನಕ ಹರಿಯೇ ಪ
ಪುಟ್ಟಿಸಿದ ತಾಯ್ತಂದೆ ಇಷ್ಟಮಿತ್ರರು ನೀನೆ
ಅಷ್ಟೆಲ್ಲ ಬಳಗ ನೀನೆ ||
ಪೆಟ್ಟಿಗೆಯೊಳಗಿನ ಅಷ್ಟಾಭರಣ ನೀನೆ
ಶ್ರೇಷ್ಠಮೂರುತಿ ಕೃಷ್ಣ ನೀನಿರುವ ತನಕ 1
ಒಡಹುಟ್ಟಿದಣ್ಣ ನೀನೆ, ಒಡಲ ಹೊರೆವನ ನೀನೆ
ಇಡು-ತೊಡುವ ವಸ್ತು ನೀನೆ ||
ಮಡದಿ ಮಕ್ಕಳನೆಲ್ಲ ಕಡಹಾಯ್ಸುವವ ನೀನೆ
ಬಿಡದೆ ಸಲಹುವ ಒಡೆಯ ನೀನಿರುವ ತನಕ 2
ವಿದ್ಯೆ ಹೇಳುವ ಗುರು ನೀನೆ ಬುದ್ಧಿ ಹೇಳುವ ಧಣಿ ನೀನೆ
ಉದ್ಧಾರಕರ್ತ ನೀನೆ ||
ಮದ್ದು ಶ್ರೀ ಪುರಂದರ ವಿಠಲನ ಪಾದದಲಿ
ಬಿದ್ದು ಲೋಲಾಡುತಿರು ಕಾಣು ಮನವೆ 3


ನಾನೇಕೆ ಪರದೇಶಿ ನಾನೇಕೆ ಬಡವನೊ naaneke paradeshi


ನಾನೇಕೆ ಪರದೇಶಿ ನಾನೇಕೆ ಬಡವನೊ
ಮಾನಾಭಿಮಾನದೊಡೆಯ ವಿಠಲ ಎನಗಿರಲು ಪ
ಮೂರುಲೋಕದ ಒಡೆಯ ಶ್ರೀಹರಿಯು ಎನ್ನ ತಂದೆ
ವಾರಿಜಾಂಬಕೆ ಲಕ್ಷ್ಮೀ ಎನ್ನ ತಾಯಿ ||
ಮೂರು ಅವತಾರದವರೆನ್ನ ಗುರು ಕಾಣಿರೊ
ಸಾರ ಹೃದಯರು ಎನ್ನ ಬಂಧು ಬಳಗ1
ಇಪ್ಪತ್ತುನಾಲ್ಕು ನಾಮಗಳೆಂಬ ಹಳನಾಣ್ಯ
ಒಪ್ಪದಲಿ ಉಣಲುಂಟು ಉಡಲುಂಟು ತೆಗೆದು ||
ತಪ್ಪದಲೆ ನವಭಕ್ತಿಯೆಂಬ ನವರತ್ನಗಳು
ಮುಪ್ಪು ಇಲ್ಲದ ಭಾಗ್ಯ ಎನಗೆ ಸಿದ್ಧವಿರಲಿಕ್ಕೆ 2
ಎನಗೆ ಎಂಬವನ ಹೆಸರೇನೆಂಬೆ ಶ್ರೀನಿವಾಸ
ತನಗೆಂದರೆಂದು ಬಗೆವನು ಕಾಣಿರೊ ||
ಘನಮಹಿಮನಾದ ಸಿರಿ ಪುರಂದರ ವಿಠಲನು
ಅನುಮಾನವಿರದೆನ್ನ ಶಿರದ ಮೇಲಿರಲಿಕ್ಕೆ 3