Labels

Friday, 5 June 2020

ನಾಚಿಕೆಪಡಬೇಡ - ಮನದೊಳು naachike padabeda


ನಾಚಿಕೆಪಡಬೇಡ - ಮನದೊಳು -
ಯೋಚಿಸಿ ಕೆಡಬೇಡ ಪ.
ನಿಚ್ಚ ನೆನೆಯೊ ನಮ್ಮಚ್ಯುತನಾಮವ |
ಮೆಚ್ಚಿ ಕೊಟ್ಟರೆ - ಅಚ್ಯುತ ಪದವೀವ ಅಪ
ಹರಿಹರಿಯೆಂದೊದರೋ - ಹತ್ತಿದ - |
ದುರಿತಗಳಿಗೆ ಬೆದರೋ ||
ವಾರಿಜಾಕ್ಷನ - ವೈಕುಂಠಪುರವ |
ಸೇರಿಸೇರಿ ನೀ ಕುಣಿಕುಣಿದಾಡೊ 1
ಆರಗೊಡವೆ ಏನೋ - ನರಕದ |
ದಾರಿ ತಪ್ಪಿಸುವರೆ ||
ನೀರಜಾಕ್ಷ ನಮ್ಮ ನಿರ್ಜರ ಪತಿಯಲಿ |
ಸೇರಿ - ಸೇರಿಸಿ ಮನ ನಲಿನಲಿದಾಡೊ 2
ಭಕ್ತಜನರ ಕೂಡೊ - ಭವಭಯ |
ಬತ್ತಿಪೋಪುದು ನೋಡೊ ||
ಮುಕ್ತಿದಾಯಕ ಶ್ರೀ ಪುರಂದರವಿಠಲನ |
ಭಕ್ತಿಯಿಂದ ನೀ ಹಾಡಿ ಕೊಂಡಾಡೊ 3


ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ naa munde krishna


ನಾ ಮುಂದೆ ಕೃಷ್ಣ ನೀ ಎನ್ನ ಹಿಂದೆ-ನಿನ್ನ-|
ನಾಮವೆ ಕಾಯಿತು ನಾನೇನೆಂದೆ ಪ
ಸುರತರು ನೀನು ಫಲ ಬಯಸುವೆ ನಾನು |
ಸುರಧೇನು ನೀನು ಕರೆದುಂಬೆ ನಾನು ||
ವರಚಿಂತಾಮಣಿ ನೀನು ಪರಿಚಿಂತಿಸುವೆ ನಾನು |
ಶರಧಿಕ್ಷೀರನು ನೀನು ತರಳನೈ ನಾನು 1
ಅನಾಥನೈ ನಾನು ಎನಗೆ ಬಂಧುವು ನೀನು |
ದೀನ ಮಾನವ ನಾನು ದಯವಂತ ನೀನು ||
ದಾನವಂತಕ ನೀನು ಧೇನಿಸುವೆನು ನಾನು |
e್ಞÁನಗಂಭೀರ ನೀನು ಅಙÁ್ಞನಿ ನಾನು 2
ಒಂದರೊಳೊಂದೊಂದು ನಿನಗೆ ನಾ ಸಲಿಸುವೆ |
ಚೆಂದವಾಯಿತು ನಿನ್ನ ಸ್ತುತಿಯಿಂದಲಿ ||
ತಂದೆ ಪುರಂದರವಿಠಲರಾಯ ನೀ |
ಬಂದೆನ್ನ ಮನದಲ್ಲಿ ನಲಿನಲಿದಾಡೊ 3


ನಾ ಮಾಡಿದ ಕರ್ಮ ಬಲವಂತವಾದರೆ naa maadida karma balavantavadare


ನಾ ಮಾಡಿದ ಕರ್ಮ ಬಲವಂತವಾದರೆ |
ನೀ ಮಾಡುವುದೇನೊ ದೇವಾ ಪ
ಸಾಮಾನ್ಯವಲ್ಲವಿದು ಬ್ರಹ್ಮಬರೆದ ಬರೆಹ |
ನೇಮದಿಂದಲಿ ಎನ್ನ ಹಣೆಯಲ್ಲಿ ಬರೆದುದಕೆ ಅ.ಪ
ಅತಿಥಿಗಳಿಗೆ ಅನ್ನ ಕೊಟ್ಟವನಲ್ಲ -ಪರ -|
ಸತಿಯರ ಸಂಗವ ಗಳಿಗೆ ಬಿಟ್ಟವನಲ್ಲ ||
ಮತಿಹೀನನಾಗಿ ಮರುಳಾಗಿದ್ದೆನೋ ದೇವ |
ಗತಿ ಯಾವುದೈ ಎನಗೆ ಗರುಡವಾಹನ ಕೃಷ್ಣ 1
ಅನ್ನಪಾನಂಗಳಿಗೆ ಅಗ್ರಗಣ್ಯನು ಆಗಿ |
ಸ್ನಾನ ಸಂಧ್ಯಾದಿ ಕರ್ಮಂಗಳ ನೀಗಿ ||
ದಾನವಾಂತಕ ನಿನ್ನ ಧ್ಯಾನವ ಮಾಡದೆ |
ಶ್ವಾನನಂತೆ ಮನೆಮನೆ ತಿರುಗುತಲಿದ್ದೆ 2
ಇನ್ನಾದರು ನಿನ್ನ ದಾಸ ಸಂಗವನಿತ್ತು |
ಮನ್ನಿಸಿ ದಯಮಾಡೊ ಮನ್ಮಥಜನಕ ||
ಅನ್ಯರೊಬ್ಬರ ಕಾಣೆ ಆದರಿಸುವರಿಲ್ಲ |
ಪನ್ನಂಗಶಯನ ಶ್ರೀಪುರಂದರವಿಠಲ 3


ನಾ ನಿನ್ನ ಧ್ಯಾನದೊಳಿರಲು naa ninna dhyanadoliralu


ನಾ ನಿನ್ನ ಧ್ಯಾನದೊಳಿರಲು - ಇಂಥ
ಹೀನ ಮಾನವರಿಂದೇನಾಹೋದು ಹರಿಯೆ ಪ.
ಮಚ್ಚರಿಸಿದರೇನ ಮಾಡಲಾಪರೊ ಎನ್ನ
ಅಚ್ಯುತ ನಿನ್ನದೊಂದು ದಯವಿರಲು ||
ವಾಚ್ಛಲ್ಯ ಬಿಡದಿರು ನಿನ್ನ ನಂಬಿದ ಮೇಲೆ
ಕಿಚ್ಚಿಗೆ ಗೊರಲೆ ಮುತ್ತುವುದೆ ಕೇಳೆಲೊ ರಂಗ 1
ದಾಳಿಯಲಿ ತೇಜಿ ವೈಹಾಳಿಯಲಿ ನಡೆಯಲು
ಧೂಳು ರವಿಗೆ ತಾನು ಮುಸುಕುವುದೇ ||
ತಾಳಿದವರಿಗೆ ವಿರುದ್ಧ ಲೋಕದೊಳುಂಟೆ ?
ಗಾಳಿಗೆ ಗಿರಿ ನಡುಗುವುದೆ ಕೇಳೆಲೊ ರಂಗ 2
ಕನ್ನಡಿಯೊಳಗಿನ ಗಂಟ ಕಂಡು ಕಳ್ಳ
ಕನ್ನವಿಕ್ಕಲು ವಶವಾಗುವುದೇ ?
ನಿನ್ನ ಧ್ಯಾನವ ಮಾಡೆ ಪುರಂದರವಿಠಲನೆ
ಚಿನ್ನಕ್ಕೆ ಪುಟವಿಕ್ಕಿದಂತೆ ಕೇಳೆಲೊ ರಂಗ 3


ನಾ ನಿನಗೇನ ಬೇಡುವುದಿಲ್ಲ naa ninagena beduvadilla


ನಾ ನಿನಗೇನ ಬೇಡುವುದಿಲ್ಲ - ಎನ್ನ
ಹೃದಯಕಮಲದೊಳು ನೆಲಸಿರು ಹರಿಯೆಪ
ಶಿರ ನಿನ್ನ ಚರಣಕೆರಗಲಿ -ಚಕ್ಷು
ಎರಕದಿಂದಲಿ ನಿನ್ನ ನೋಡಲಿ ಹರಿಯೆ ||
ನಿರುಮಾಲ್ಯ ನಾಸ ಘ್ರಾಣಿಸಲಿ -ಎನ್ನ
ಕರಣ ಗೀತಂಗಳ ಕೇಳಲಿ ಹರಿಯೆ 1
ನಾಲಗೆ ನಿನ್ನ ಕೊಂಡಾಡಲಿ ಎನ್ನ
ತೋಳು ಕರಂಗಳ ಮುಗಿಯಲಿ ಹರಿಯೆ ||
ಕಾಲು ತೀರ್ಥಯಾತ್ರೆಗೆ ಪೋಗಲಿ -ಮನ
ಓಲೈಸಿ ನಿನ್ನನು ಸ್ಮರಿಸಲಿ ಹರಿಯೆ 2
ಚಿತ್ತ ನಿನ್ನೊಳು ಮುಳುಗಾಡಲಿ -ನಿನ್ನ
ಭಕ್ತ ಜನರ ಸಂಗ ದೊರಕಲಿ ಹರಿಯೆ ||
ತತ್ತ್ವಯೋಗಾಭ್ಯಾಸಕ್ಕಾಗಲಿ -ಉಕ್ಕಿ
ಸತ್ಯ ಮೂರುತಿ ನಮ್ಮ ಪುರಂದರ ವಿಠಲ * 3


ನಳಿನಜಾಂಡ ತಲೆಯದೂಗೆ nalinajanda taleyaduge


ನಳಿನಜಾಂಡ ತಲೆಯದೂಗೆ |
ಇಳೆಯು ನಲಿದು ಮೋಹಿಸುತಿರಲು ||
ಕೊಳಲ ಪಿಡಿದು ಬಾರಿಸಿದನು |
ಚೆಲುವ ಕೃಷ್ಣರಾಯನು ಪ
ಪೊಳೆವ ಪೊಂಬಟ್ಟೆಯ ದಟ್ಟಿ |
ಅಳವಡಿಸಿ ನೆಗಹಿನಿಂದ ||
ಹಲವು ರನ್ನದುಂಗುರವಿಟ್ಟ |
ಚೆಲುವ ಬೆರಳ ನಟಿಸುತ ||
|ಲಲಿತ ವಾಮಭಾಗ ತೋಳ-|
ಲೊಲಿದು ಓರೆನೋಟದಿಂದ ||
ಬಲದ ಪಾದ ಎಡಕೆ ಚಾಚೆ |
ನಳಿನಪದಗಳೊಪ್ಪುತಿರಲು 1
ಸೆಳನಡುವಿನೊಳಗೆ ಕತ್ತರಿ |
ಕಳೆಯ ಸಂಚಿ, ಗಜುಗು ಚೀಲ ||
ಬಿಳಿಯ ಮಣಿಯು ಗುಳ್ಳೆಗಳಿರಲು |
ಮಲಯಜಾನು ಲೇಪನ ||
ಜಲಜನೇತ್ರ ಕೌಸ್ತುಬಾಧಿ-|
ಗಳದಿ ಸ್ವರಗಳೊಪ್ಪುತಿರಲು ||
ಲಲಿತ ವೇಣು ಕಲ್ಪನೆಯಲಿ ಗೋ-|
ವಳರೆಲ್ಲರು ಕುಣಿಯಲು 2
ಮಾರವಿ ದೇಸಿ ಗುರ್ಜರಿ ಭೈರವಿ |
ಗೌರಿ ನಾಟಿ ಸಾವೇರಿ ಆಹೇರಿ ||
ಪೂರವಿ ಕಾಂಬೋದಿ ಪಾಡಿ ದೇಶಾಕ್ಷಿ ಶಂ-|
ಶಕರಾಭರಣ ರಾಗದಿ ||
ಪೂರವಿ ಕಲ್ಯಾಣಿ ವಸಂತ ತೋಡಿ |
ವರಾಳಿ ಗುಂಡಕ್ರಿ ಸಾರಂಗ ಸಾಳಗ ||
---------------------
ಸೋರಟ ಭೂಪಾಳಿ ಶ್ರೀ ರಾಗದಿಂದಲಿ 3
ಹರುಷದಿ ಬಾರಿಸುವ ರವಕೆ |
ಪುರದ ಸ್ತ್ರೀ ಜನರು ಎಲ್ಲ ||
ಮರೆದು ಮಕ್ಕಳ ಮನೆಯ ಕೆಲಸ |
ಮರೆದು ಹರಿಯ ಬಳಸಲು ||
ಕರಿಯು ಮೃಗವು ಕೇಸರಿ ಶರಭ |
ಹರಿಣ ನವಿಲು ಉರಗ ಮೋಹಿಸಿ ||
ನೆರೆದು ಮರೆದು ಜಾತಿವೈರವ |
ಸ್ವರವ ಕೇಳುತಿರಲು 4
ಕರಗೆ ಗಿರಿಯ ಕಲ್ಲು ತರುಗ-|
ಳೆರಗಿ ಪಕ್ಷಿ ತತಿಗಳಿರಲು ||
ಸುರರು ಸುಮನ ಸುರಿಯುತಿರಲು |
ಧರೆಯು ಮುದದಿ ಕುಣಿಯುತಿರಲು ||
ಶರಧಿ ಉಕ್ಕಿ ಸರಿತು ಸೊಕ್ಕಿ |
ಪುರರಿಪು ವಿಧಿ ಪೊಗಳುತಿರಲು ||
ವಿರಚಿಸಿದ ಪುರಂದರವಿಠಲ |
ಮುರಲಿಗಾನ ಮಾಡಿದ 5


Thursday, 4 June 2020

ನಲಿದಾಡೆ ಎನ್ನ ನಾಲಿಗೆ ಮೇಲೆ nalidaade enna naalige mele


ನಲಿದಾಡೆ ಎನ್ನ ನಾಲಿಗೆ ಮೇಲೆ - ಸರಸ್ವತಿ ದೇವಿ ಪ
ಕುಣಿದಾಡೆ ಎನ್ನ ನಾಲಗೆ ಮೇಲೆ ಅ.ಪ
ಸಲಿಲಜೋದ್ಬವನ ವದನ ನಿಲಯಳೇ
ಇಳೆಯೊಳಪ್ರತಿಮ ಗುಣಾಂಬುಧಿ ತಾಯೆ ಅ.ಪ
ಘಿಲುಘಿಲು ಘಿಲ್ಲು ಗೆಜ್ಜೆಯ ನಾದ | ಭಳಿ ಭಳಿರೆಂಬಂದುಗೆ |
ಹೊಳೆವ ಬೆರಳುಂಗುರ ಕಿಣಿಕಿಣಿನಾದ | ಎಳೆಯ ಮಾವಿನ |
ತಳಿರ ಪೋಲುವ ದಿವ್ಯ ಪಾದ | ಚೆಲ್ವಪೆಂಡೆಯ ಭೇದ ||
ನಲಿವ ಯುಗಳ ಜಂಘೆ | ಜಲಗುಳ್ಳೆಯಂತೆ ಜಾನು |
ಥಳಥಳಿಸುವ ತೊಡೆ ಹೊಳೆವ ಸುಗುಣಿಯೆ1
ದಿನಕರ ಕೋಟಿ ತೇಜದಿ ಹೊಳೆವ ಅನುಪಮವಾದ |
ಕನಕವಸನದಿಂದಲಿ ಎಸೆವ | ಘನವಾದ ಜಘನಗ-
ಗನದಂದದಿ ಕಟಿಯಲ್ಲಿ ಮೆರೆವ | ಮಣಿದಾಮವಿಭವ ||
ತನು ಜಠರವು ಜಾಹ್ನವಿ ಸುಳಿ ನಾಭಿಯು |
ಘನಸ್ತನಯುಗಳ ಚಂದನಲೇಪಿತಳೆ2
ದುಂಡಮುತ್ತಿನ ಕೊರಳ ಹಾರ | ಉದ್ದಂಡಮಣಿ ಪ್ರ-|
ಚಂಡ ಮಿಣಿಮಿಣಿಸುವ ಹೊನ್ನಿನ ಹಾರ | ಕರಿರಾಜಪೋತನ |
ಸೊಂಡಿಲಿನಂತೆ ಭುಜದ ಭಾರ ನಡೆವ ಒಯ್ಯಾರ ||
ಮಂಡಿತವಾದ ಕಂಕಣ ತೋಳ್ಬಳೆಗಳು |
ದುಂಡು ಹವಳ ಕೈಕಟ್ಟುಳ್ಳವಳೆ 3
ನಸುನಗು ಮುಖವು ನಾಸಾಭರಣ | ಎಸೆವ ಕಪೋಲ |
ಹೊಸ ಕುಂಡಲ ಚಳಿತುಂಬುಳ್ಳ ಶ್ರವಣ | ಬಿಸಜದಳದಂತೆ |
ಎಸೆವ ಕರ್ಣಾಂತವಾದ ನಯನ | ತಿಲಕದ ಹಸನ ||
ಶಶಿ ಸೂರ್ಯರ ಆಭರಣ ಸುಶೋಭಿತೆ |
ಕುಸುಮ ಮುಡಿದ ಮೂರ್ಧಜವುಳ್ಳವಳೇ 4
ಸಿಂಗಾರದ ಜಡೆಬಂಗಾರ | ಹೊಂಗೇದಗೆ ಮುಡಿದ |
ಬಂಗಾರದ ಹೆರಳಿನ ರಾಗುಟಿವರ | ಭೃಂಗಾದ ಸ್ವರ |
ಹಿಂಗದೆ ಭಕ್ತರ ಸಲಹುವ ಭಾರ | ಕಂಗಳ ಮನೋಹರ ||
ರಂಗ ಪುರಂದರ ವಿಟ್ಠಲರಾಯನ |ಮಂಗಳ ಮೂರ್ತಿಯ ತೋರೆ ಶುಭಾಂಗಿ 5