Labels

Tuesday, 7 April 2020

ಜಯ ಪಾಂಡುರಂಗ - ನಾ ನಿನ್ನ ಮನಕೆ ಬಾರೆನೆ jaya panduranga


ಜಯ ಪಾಂಡುರಂಗ  ನಾ ನಿನ್ನ ಮನಕೆ ಬಾರೆನೆ \\ಪ\\
ನಾ ನಿನ್ನ ಮನಕೆ ಬಾರೆನೆ ಬಂದರೆ ಈ ಭವದಬಲೆಯೊಳು ಸಿಲುಕುವೆನೆ - ಜಯ ಪಾಂಡುರಂಗ \\ಅ.ಪ\\
ಕೆಟ್ಟ ಕಿರಾತನ ಬೆಟ್ಟದಂಥ ಪಾಪವಸುಟ್ಟು ವಾಲ್ಮೀಕಿ ಮುನಿಯೆನಿಸಿದೆ \\1\\
ಅಂತ್ಯಸಮಯದಲ್ಲಿ ಅತಿ ಭ್ರಷ್ಟ ಅಜಾಮಿಳಗೆ\\ಅಂತಕನ ಬಾಧೆಯ ಬಿಡಿಸಿದೆಯೊ \\2\\
ತಂದೆ ತಾಯ್ಗಳನು ತೊರೆದ ಧ್ರುವನಿಗೆಚೆಂದದಿಂದ ಮಾರ್ಗವ ತೋರಿದೆಯೊ \\3\\
ಪಂಕಜನಾಭನೆ ಕುಬುಜೆಯ ಡೊಂಕ ತಿದ್ದಿಶಂಕೆಯಿಲ್ಲದೆ ಅವಳ ಕೂಡಿದೆಯೊ \\4\\
ತೊತ್ತಿನ ಮಗನ ಮನೆಯಕೂಡತೆಪಾಲನು ಸವಿದುಮತ್ತವಗೆ ಮುಕ್ತಿಯ ತೋರಿದೆಯೊ \\5\\
ಐದು ಮಂದಿಯ ಕೂಡ ಸರಸವು ದ್ರೌಪದಿಗೆಐದೆ ಲಜ್ಜೆಯ ಕಾಯ್ದೆಯೊ \\6\\
ದೀನರನುದ್ಧರಿಪ ಪುರಂದರ ವಿಠಲಏನು ಕಾರಣ ನನ್ನ ಮರೆತೆಯೊ \\7\\


ಜಗದುದ್ಧಾರಕ ತನ್ನ ಮಗನೆಂದು jagaduddara tanna


ಜಗದುದ್ಧಾರಕ ತನ್ನ ಮಗನೆಂದು ಬಗೆದು |
ನಿಗಮಗೋಚರನ ಆಡಿಸಿದಳು ಯಶೋದೆ ಪ
ವಟದೆಲೆಯ ಮೇಲು ಸಂಪುಟದ ಮೇಲೊರಗಿ ಉಂ-
ಗುಟವ ಪೀರುವನ-ಆಡಿಸಿದಳು1
ವಿಶ್ವತಶ್ಚಕ್ಷುವ ವಿಶ್ವತೋಮುಖನ |
ವಿಶ್ವವ್ಯಾಪಕನ-ಆಡಿಸಿದಳು 2
ಅಣೋರಣಿಯನ ಮಹತೋಮಹೀಯನ |
ಗಣನೆಯಿಲ್ಲದವನ-ಆಡಿಸಿದಳು3
ನಿಗಮಕೆ ಸಿಲುಕದ ಅಗಣಿತ ಮಹಿಮನ |
ಮಗುಗಳ ಮಾಣಿಕ್ಯನ-ಆಡಿಸಿದಳು 4
ಎಲ್ಲರೊಳು ಭರಿತನಾಗಿ ಇಪ್ಪ ಲಕುಮಿಯ |
ವಲ್ಲಭ ಪುರಂದರವಿಠಲನ-ಆಡಿಸಿದಳು 5


ಛೀ ಛೀ ಛೀ ಛೀ ಕಂಡೆಯ ಮನವೇ ಇಂಥ chi chi chi kandeya


ಛೀ ಛೀ ಛೀ ಛೀ ಕಂಡೆಯ ಮನವೇ ಇಂಥ
ನೀಚ ವೃತ್ತಿಗಳನು ಬಿಡು ಕಂಡೆಯ ಮನವೆ ಪ.
ಕಿವಿಗೊಟ್ಟು ಮಧುರನಾದಕೆ ಹುಲ್ಲೆಯು
ರವದ ಬಲೆಗೆ ಸಿಕ್ಕಿಬಿದ್ದುದನರಿಯ
ನವಮೋಹನಾಂಗಿಯರ ಕೋಕಿಲಾಪದ
ಸವಿ ಕೇಳದಾತನ ಕಥೆ ಕೇಳು ಮನವೇ 1
ನಲಿದೆದ್ದು ಕರಿ ಎಳೆಯ ತೃಣ ಸ್ಪರುಷನಕಾಗಿ
ಕುಳಿಗೆ ಬಿದ್ದಿರುವುದ ಕಂಡು ಕಂಡರಿಯ
ನಳಿನಾಕ್ಷಿಯರಂಗಸಂಗವ ಮೆಟ್ಟಿ ಕೆಡದೆ ಶ್ರೀ
ಲಲನೇಶನಂಘ್ರಿಯಾನಪಿವೇಕೋ ಮನವೇ 2
ಗಾಣದ ತುದಿಯ ಮಾಂಸವ ಮೆಲುವ ಮತ್ಸ್ಯವು
ಪ್ರಾಣವ ಬಿಡುವುದ ಕಂಡು ಕಂಡರಿಯ ?
ಮಾನಿನಿಯ ಬಯಸದೆ ಶ್ರೀ ನಾರಾಯಣನ
ಧ್ಯಾನಾಮೃತವನು ಸವಿದುಣ್ಣೋ ಮನವೆ3
ಪಣ್ಣೆಂದು ಭ್ರಮಿಸಿ ಪತಂಗ ದೀಪದಿ ಬಿದ್ದು
ಕಣ್ಣುಗೆಡುವುದನು ಕಂಡು ಕಂಡರಿಯ ?
ಬಣ್ಣರ ಬಾಲೆಯರ ರೂಪಕೆ ಮರುಳಾಗಿ
ಮಣ್ಣು ತಿನ್ನದೆ ಮಾರನಯ್ಯನ ನೆನೆ ಮನವೆ 4
ಅಳಿ ಪರಿಮಳನಾಗಿ ಕಮಲದೊಳಗೆ ಸಿಲುಕಿ
ಅಳಿದು ಹೋಹುದನು ಕಂಡ ಕಂಡರಿಯ ?
ಬಳಲದೆ ವರಪುರಂದರ ವಿಠಲನಂಘ್ರಿಯ
ತುಳಸಿ ನಿರ್ಮಾಲ್ಯವಾಫ್ರಾಣಿಸು ಮನವೆ5


ಚೆಂದವ ನೋಡಿರೆ-ಗೋಕುಲಾ chendava nodire


ಚೆಂದವ ನೋಡಿರೆ-ಗೋಕುಲಾ-|
ನಂದನ ಮೂರುತಿಯ ಪ
ಅಂದುಗೆ ಪಾಡಗ ಗೆಜ್ಜೆಯ ಧರಿಸಿ |
ಧಿಂ ಧಿಂ ಧಿಮಿಕೆಂದು ಕುಣಿವ ಕೃಷ್ಣನ ಅ.ಪ
ಕೊರಳ ಪದಕಹಾರ ಬಿಗಿದು |
ತರಳರೆಲ್ಲರ ಕೂಡಿಕೊಂಡು ||
ಕುರುಳುಗೂದಲ ಅರಳೆಲೆತಿಯು |
ಮಿರು-ಮಿರುಗುತ ಮೆರೆವ ಕೃಷ್ಣನ 1
ಉಡೆಯ ಗಂಟೆ ಘಣಘಣೆನುತ |
ನುಡಿಯೆ ಮೆಲ್ಲನೆ ಪಿಡಿದುಕೊಂಡು ||
ನಡೆದಾಡುತ ಸಡಗರದಲಿ |
ಬೆಡಗ ಮಾಡಿ ಆಡುವ ರಂಗನ 2
ಬಲುಬಲು ಆಶ್ಚರ್ಯದಿಂದ |
ನಲಿವ ಪುರಂದರವಿಠಲರಾಯ ||
ಹಲವು ಸುಖವ ನಮಗೆ ಇತ್ತ |ಜಲಜಲೋಚನ ಬಾಲಕೃಷ್ಣನ 3


ಚೆಂಡನಾಡುತ ಬಂದ ಪುಂಡ ಕೃಷ್ಣನು chendanaaduta banda


ಚೆಂಡನಾಡುತ ಬಂದ ಪುಂಡ ಕೃಷ್ಣನು ತನ್ನ |
ಹಿಂಡು ಗೋಪಾಲಕರ ಕೊಂಡು ಯಮುನೆಯ ತಡಿಗೆ ಪ
ಓರೆ ತುರುಬನೆ ಕಟ್ಟಿ ಗೀರುನಾಮವನಿಟ್ಟು |
ಹಾರ ಕಂಕಣ ತೋಳಬಂದಿ ಘುಂಗುರ ಘನ-|
ಸಾರ ಕುಂಕುಮ ಕೇಸರಿಗಂಧ ಕೂಡಿಸಿ |
ಸೇರಿಸುತ ನಡುವಿಗೆ ಕಾಸಿದಟ್ಟಿಯನುಟ್ಟು |
ಹಾರಾಡುತಲಿ ಬಂದ-ತೊಡರಗಾಲ |
ತೋರ ಚಿನ್ಮಣಿಗಳಿಂದ. ಮುತ್ತಿನ ಚೆಂಡು |
ಧಾರಿಣಿಗೆ ಪುಟಿಸಿ ನಿಂದ-ವಜ್ರದ ಖಣಿ |
ತೋರಿ ಗೆಳೆಯರ ಕೂಡ ಬಂದರಾ ಮನೆಯಿಂದ 1
ಕೊಂಡಾಲ ತಿಮ್ಮನು ಚೆಂಡನೆ ಹೊಡೆದನು |
ಮಿಂಡೆಯರ ಮೊಲೆಗಾಗಿ ಹಾರಿಹರಿದು ಬೀಳೆ |
ಹಿಂಡುನಾರಿಯರೆಲ್ಲ ಸುತ್ತಿಕೊಂಡಿರೆ ಅವರ |
ಮುಂಡೆಗೆ ತಗುಲಿಸಿ ಪುರದ ಬಾಗಿಲ ಬಿಟ್ಟು |
ಕಿಂಡಿಯಿಂದಲಿ ಬಂದನು-ನಾರಿಯರ |
ಮಂಡೆಗೆ ಚೆಂಡಿಟ್ಟನು-ತೋರಿಸುವರ |
ಕಂಡು ತಾ ನಗುತಿದ್ದನು-ಕೌತುಕವೆಂದು |
ದಿಂಡೆಯರು ಮಡುವಿನೊಳಗೆ ಹಾಕಿ ನಡೆದರು 2
ಗೆಳೆಯರೆಲ್ಲರು ಕೂಡಿ ಚೆಂಡು ತಾ ಎನಲಾಗಿ |
ಗುಳುಗುಳಿಸುವ ವಿಷದ ಯಮುನಾ ತಡಿಯಲಿ ನಿಂದು |
ಬಳಿಯ ವೃಕ್ಷದ ಮೇಲೇರಿ ತಾ ಧುಮುಕಲು |
ಕಳಕಳಿಸುವ ಗೋಪಾಲರಳುತಿರೆ |
ಇಳಿದ ನೀರೊಳಗಾಗಲು-ನಾಗರ ಫಣಿ |
ತುಳಿದು ಕುಣಿಕುಣಿಯುತಿರಲು-ಬ್ರಹ್ಮನು ಬಂದು |
ತಿಳಿದು ಮದ್ದಲೆ ಹೊಯ್ಯಲು-ಇಂದ್ರಾದ್ಯರು |
ನಲಿದು ತಾಳವನಿಟ್ಟು ಕೊಂಡಾಡುತಿದ್ದರು 3
ಮಗನ ಸುದ್ದಿಯ ಕೇಳಿ ಹರಿದು ಬಂದಳು ಗೋಪಿ |
ನಗರದ ಹೊರಗಾಗಿ ಬಾಯ ನಾದದಿಂದ |
ವಿಗಡೆಯರು ಬಿಟ್ಟ ಮಂಡೆಯ ಜುಂಜು ಕೆದರುತ |
ತೆಗೆದು ಮಣ್ಣನೆ ತೂರಿ ಕುಳಿತಲ್ಲಿಂದಲೆ ನಮ್ಮ-|
ನ್ನಗಲಿ ಹೋಗುವರೆ ಹೀಗೆ-ರಂಗ ನಮ್ಮ |
ಮೊಗವ ನೋಡುವುದೆಂದಿಗೆ-ನೋಡಿದ ಕಣ್ಣ |
ತೆಗೆದು ಕೀಳುವೆನಿಂದಿಗೆ-ಪಡೆದ ಪೊಟ್ಟೆ |
ದಗದಗಿಸಲು ಕೊಟ್ಟು ಮುನಿಯದೆ ಬಾ ಬೇಗ 4
ಏನನೆಂಬೆನು ಕೃಷ್ಣ ನಿನ್ನ ಕಾಣದೆ ಪುರದ |
ಮಾನಿನಿಯರು ಬೆರಗಾಗಿ ಬೀಳುತ ಕರುವ |
ಕಾಣದಿರೆತ್ತಿಗೆ ಕರುವನು ಬಿಡುವರು |
ಆ ನಾಸಿಕದ ಮೂಗುತಿ ಕಿವಿಗಿಡುವರು |
ಧೇನು ಮೇವನೆ ತೊರೆದುವು-ಗೋವುಗಳನ್ಯ-|
ರಾಮನೆಗೋಡಿದುವು-ವತ್ಯಗಳೆಲ್ಲ |
ಮೌನದಿ ಮೊಲೆ ತೊರೆದುವು ಕೃಷ್ಣಯ್ಯನ |
ವೇಣುನಾದದ ಧ್ವನಿ ಕೇಳದೆ ಮೆಚ್ಚವು 5
ದ್ವಾರಕಿ ಕೃಷ್ಣ ನೀ ಬಾಯೆಂದು ಕರೆವೆನೊ |
ತೋರುವ ಸಮಪಾದ ವಿಠಲನೆಂಬೆನೊ |
ಶ್ರೀರಮಣ ವೆಂಕಟನೆಂದು ಒದರುವೆನೊ |
ಶ್ರೀರಂಗಶಯನನೆಂದೆನಲ್ಲದೆ ನಿನ್ನ |
ಚೋರ-ಜಾರನೆಂದೆನೆ-ಹದ್ದಿನ ಮೇಲೆ |
ಏರಿ ತಿರುಗುವನೆಂದೆನೆ-ಬೆಣ್ಣೆಯ ಕದ್ದು |
ಸೂರೆ ಮಾಡುವನೆಂದೆನೆ-ಕೃಷ್ಣಯ್ಯ ನೀ |
ಬಾರಯ್ಯ ಬಾರದಿದ್ದರೆ ಪ್ರಾಣ ನೀಗುವೆ 6
ಕಣ್ಣೆತ್ತಿ ನೋಡಿದನೆಂದೆನೆ ಕಡೆಗೋಲ |
ಬೆನ್ನಲಿ ಪಿಡಿದನೆಂದೆನೆ ಹಲ್ಲಳನೂರಿ |
ಮಣ್ಣ ಕಚ್ಚಲು ಬಾಯ ತೆರೆಯುವನೆಂದೆನೆ |
ಮಣ್ಣ ಬೇಡಲು ನಾ ಕೊಡಲಾರೆನೆಂದೆನೆ |
ಎನ್ನ ಕುತ್ತಿಗೆ ಕೊಯ್ವರೆ-ಮಾತೆಯ ಮಾತು |
ಮನ್ನಿಸಿ ವನಕೆ ಪೋಪರೆ-ಬಲಭದ್ರ |
ಅಣ್ಣನಿಗೆ ಮುಖವ ತೋರೆ-ಕೃಷ್ಣಯ್ಯ ನೀ |
ಸಣ್ಣವನೆನ್ನದೆ ಹರಿಯ ಕೊಂಡಾಡಿದೆ 7
ಎಂದ ಮಾತನು ಕೇಳುವಾ ಸಮಯ ನಾಗಿಣಿ-|
ವೃಂದವೆಲ್ಲವು ತಮ್ಮ ಕಂಠಭೂಷಣರಾಗಿ |
ಅಂದದ ಮೇಲುದ ಸುತ್ತಿಕೊಂಡಿರೆ ಅರ-|
ವಿಂದನಾಭಾಚ್ಯತ ಕೇಶವ ಮುರಹರ |
ಮಂದರಧರ ಹರಿಯೆ-ನಿನಗೆ ನಾವು |
ಮಂದಾಕಿನಿಯ ಸರಿಯೆ-ಮಾಂಗಲ್ಯದ |
ಚೆಂದ ಕಾಯೈ ದೊರೆಯೆ-ಹರಿಯ ಕೃಪೆ-|
ಯಿಂದ ಕರೆದು ನಮ್ಮ ಕಾಯಬೇಕೆಂದರು 8
ಇಂತಿಂತು ಸ್ತವನವ ಮಾಡೆ ಕಾಳಿಂಗನ |
ಕಾಂತೆಯರ ಸ್ತೋತ್ರಕ್ಕೆ ಮೆಚ್ಚಿ ನಾಗನ ಬಿಟ್ಟು |
ಕಂತುಕ ಸಹಿತ ಪಂಕಜನಾಳವನೆ ಕೊಂಡು |
ಸಂತಸದಲಿ ಇಕ್ಕುತ-ಶೋಕದಿ ನೀವು |
ಭ್ರಾಂತಿ ಬಿಡಿರಿ ಎನ್ನುತ-ಬರಿದೆ ಎಲ್ಲ |
ಸಂತೆ ಕೂಡಿದೆ ಎನ್ನುತ-ನಾ ಹಸಿದೆನು |
ಪಂತಿಭೋಜನ ಕೊಂಡು ನಡೆಯಿರಿ ಮನೆಗೆಂದ 9
ಸುರರಿಗೆ ಸುಧೆ ಮುಂಚೆ ಉಣಿಸಿದ ಪರಬ್ರಹ್ಮ |
ಪರಿಪರಿ ಭೋಜನ ಮಾಳ್ಪ ಕಂಡುವರಾರು? |
ಸುರದುಂದುಭಿ ಪೊಡೆದು ಪಾರಿಜಾತದ ಮಳೆ |
ಸುರಿಸಿದರಾಕ್ಷಣಕೆ-ಬ್ರಹ್ಮನು ತಾನು |
ತೆರಳಿದನಾಶ್ರಮಕೆ-ಪುರಂದರವಿಠಲ |
ತಿರುಗಿದ ನಿಜಧಾಮಕೆ-ಕೃಷ್ಣನ ಲೀಲೆ |
ಗುರುದಯೆಯಲಿ ನಮ್ಮ ಹರಿಯ ಕೊಂಡಾಡಿದೆ 10


ಚಿಹಿ ಹಳಿ - ಥೂ ಖೋಡಿ ಪಾಪಿ ಮನವೇ ಇಂಥ-| chihi hali thoo


ಚಿಹಿ ಹಳಿ - ಥೂ ಖೋಡಿ ಪಾಪಿ ಮನವೇ ಇಂಥ-|
ಕುಹಕ ಬುದ್ಧಿಯ ನೀ ಬಿಡು ಕಾಣೋ ಮನವೇಪ
ಬಣ್ಣದ ಬೀಸಣಿಕೆಯಂತೆ ಹೆಣ್ಣು ತಿರುಗುವುದು ಕಂಡು |
ಕಣ್ಣ ಸನ್ನೆಮಾಡಿ ಕೈಯ ಹೊನ್ನ ತೋರಿಸಿ ||
ತಣ್ಣೀರು ಹೊಯ್ದ ಹೊಸ ಸುಣ್ಣದಂದದಿ ಕುದಿದು ಕುದಿದು |
ಕಣ್ಣಿನೊಳು ಮಣ್ಣ ಚೆಲ್ಲಿ ಕೊಂಬರೇ ಮನವೆ1
ಪಗಡೆ ಚದುರಂಗ ಲೆತ್ತವನಾಡೆ ಕರೆದರೆ |
ನಿಗುರಿದುವು ಕರ್ಣಗಳು ಮೊಚ್ಚೆಯಂತೆ ||
ಜಗದೀಶ್ವರನ ದಿನದಿ ಜಾಗರಕೆ ಕರೆದರೆ |
ಮುಗಿಲ ಹರಿದು ಧರೆಗಿಳಿದಂತೆ ಮನವೇ 2
ವಾಸುದೇವನ ಪೂಜೆ ಒಮ್ಮೆ ಮಾಡೆಂದರೆ |
ಬೇಸತ್ತು ತಲೆಯ ಚಿಟ್ಟಿಕ್ಕಿ ಕುಳಿತೆ ||
ಆ ಸಮಯದಲೊಬ್ಬ ಕಾಸು ಕೊಡಲು ಅವನ |
ದಾಸಿಯ ಮಗನಂತೆ ಬೆಂಬಿಡದೆ ಮನವೇ 3
ನೆರೆಮನೆ ಹೊರಮನೆ ಪ್ರಸ್ತವಾದರೆ ಅವರು |
ಕರೆಯದ ಮುನ್ನವೆ ಹೊರೆಹೊರಟೆ ||
ಬರಿಗಂಟು ಬರಿಮಾತು ಸುಳ್ಳುಸುದ್ದಿಯ ಹೇಳಿ |
ಹಿರಿಯ ಮಗನಂತೊಡಲ ಹೊರಕೊಂಬೆ ಮನವೆ 4
ಬಿಂದು ಮಾತ್ರವೆ ಸುಖ-ದುಃಖ ಪರ್ವತದಷ್ಟು |
ಸಂದೇಹ ವಿಲ್ಲವಿದು ಶಾಸ್ತ್ರಸಿದ್ಧ ||
ಎಂದೆಂದಿಗೂ ನಮ್ಮ ಪುರಂದರವಿಠಲನ |
ಹೊಂದಿಹೊಂದಿ ನೀ ಸುಖಬಾಳೊ ಮನವೆ 5


ಚಿತ್ತೈಸಿದ ವ್ಯಾಸರಾಯ chittaisida vyasaraya


ಚಿತ್ತೈಸಿದ ವ್ಯಾಸರಾಯ |
ಚಿತ್ತಜನಯ್ಯನ ಬಳಿಗೆ ಪ.
ಮುತ್ತಿ ಮುತ್ತೈದೆಯರೆಲ್ಲ
ಎತ್ತೆ ರತುನದಾರತಿಯ ಅಪ
ಹೇಮಪಿಡಿಗಳುಳ್ಳಂತಹ |
ಚಾಮರಂಗಳನು ಪಿಡಿದು ||
ಕಾಮಿನಿ ಮಣಿಯರು ಕೆಲವರು |
ಸ್ವಾಮಿಯೆಂದು ಬೀಸುತಿರೆ 1
ಹಾಟಕದ ಬೆತ್ತನೂರು |
ಸಾಟಿಯಿಲ್ಲದಲೆ ಪಿಡಿದು ||
ನೀಟಾದ ಓಲಗದವರ |
ಕೂಟಗಳ ಮಧ್ಯದಲಿ 2
ಸಾಧುವಿಪ್ರಜನಂಗಳು |
ವೇಧಘೋಷ ಮಾಡುತಿರೆ ||
ಮೋದದಿಂದ ಗೋವಿಂದನ |
ಸಾಧನ ಮಾರ್ಗವ ಪಿಡಿದು3
ಭೇರಿ ತುತ್ತೂರಿ ಮೃದಂಗ |
ಮೌರಿ ಚಾರುವೇದ್ಯಂಗಳು ||
ಬಾರಿಬಾರಿಗೆ ಹೊಡೆಯೆ |
ನಾರದರು ತಾ ಕೂಡಿಯೆ |4
ಅರವಿಂದಾಸನನಯ್ಯ |
ಪುರಂದರವಿಠಲನು||
ಸಿರಿಸಹಿತದಿ ಬಂದು |
ಕರಪಿಡಿದೆತ್ತಿದ್ದು ಕಂಡೆ 5