Labels

Thursday, 16 January 2020

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ baaramma ele muddu

ಬಾರಮ್ಮ, ಎಲೆ ಮುದ್ದು ಗೋಪ್ಯಮ್ಮ ||ಪ||
ನಿಮ್ಮ , ಬಾಲಕೃಷ್ಣಯ್ಯಗೆ ಬುದ್ಧಿ ಹೇಳಮ್ಮ
ಬಾಲಕರನು ಬಡೆವನಮ್ಮ
ಮುದ್ದು, ನೀಲವರ್ಣಗೆ ಬುದ್ಧಿ ಹೇಳಮ್ಮ ||ಅ||
ಸಣ್ಣವನಾಗಿ ತೋರುವನಮ್ಮ, ಪಾಲ್-
ಬೆಣ್ಣೆ ಮೊಸರು ಕದಿವನಮ್ಮ
ಕಣ್ಣಾರೆ ಕಂಡವು ಮಗ ನಿಮ್ಮ , ಮುದ್ದು
ಚಿಣ್ಣಗೆ ಬುದ್ಧಿಯ ಪೇಳಮ್ಮ ||
ಇಟ್ಟ ಕಸ್ತೂರಿ ನಾಮದವನಮ್ಮ, ಅವ
ಹೊಟ್ಟೆಯೊಳಿಡಬಲ್ಲನೀ ಜಗವಮ್ಮ
ದುಷ್ಟ ಹಾವನು ತುಳಿದವನಮ್ಮ, ಗೋಪಿ
ಗಟ್ಟ್ಯಾಗಿ ಬುದ್ಧಿಯ ಪೇಳಮ್ಮ ||
ಅರಳೆಲೆ ಮಾಗಾಯಿಯವನಮ್ಮ, ಹೊನ್ನ
ಬೆರಳ ರನ್ನದ ಮುದ್ರಿಕೆಯವನಮ್ಮ
ಇರುಳುಹಗಲು ನಮ್ಮ ಮರುಳು ಮಾಡಿ ಪೋದ
ತರಳಗೆ ಬುದ್ಧಿಯ ಪೇಳಮ್ಮ ||
ಮಾಯಾರೂಪಿಲಿ ಬರುವನಮ್ಮ, ಕದ್ದು
ಆವಿನ ಮೊಲೆ ಉಂಬುವನಮ್ಮ
ಮಾವನ ಕೊಂದನಿವನಮ್ಮ, ಚೆಲ್ವ
ದೇವರ ದೇವಗೆ ಬುದ್ಧಿ ಪೇಳಮ್ಮ ||
ಕಡಹದ ಮರನೇರಿದವನಮ್ಮ, ಬೆಟ್ಟ
ಕೊಡೆ ಮಾಡಿ ಹಿಡಿದು ಕಾಯ್ದವನಮ್ಮ
ಮಡದೇರಂದದಿ ರಮಿಸುವನಮ್ಮ, ಘುಡು
ಘುಡಿಸಿ ಕಂಬದಲೊಡೆವನಮ್ಮ ||
ಒಮ್ಮೆಗೆ ಈವರಿಗೊಲಿದವನಮ್ಮ, ಚೆಲ್ವ
ಬ್ರಹ್ಮದೇವರ ಪಡೆದವನಮ್ಮ
ನಮ್ಮೆಲ್ಲರ ಪೊರೆವ ಪುರಂದರ-ವಿಠಲಗೆ
ಘಮ್ಮನೆ ಬುದ್ಧಿಯ ಪೇಳಮ್ಮ ||

ನೋಡು ನೋಡು ನೋಡು ಕೃಷ್ಣ nodu nodu krishna

ನೋಡು ನೋಡು ನೋಡು ಕೃಷ್ಣ ಹೇಗೆ ಮಾಡುತಾನೆ
ಬೇಡಿಕೊಂಡರೆ ಬಾರ ಕೃಷ್ಣ, ಓಡಿ ಹೋಗುತಾನೆ ||ಪ||
ಕಂಡಕಂಡವರ ಮೇಲೆ ಕಣ್ಣ ಹಾಕುತಾನೆ
ಉಂಡು ಉಂಡು ಮುಸುಕನಿಟ್ಟು ಮಲಗಿಕೊಳ್ಳುತಾನೆ
ಲಂಡತನವ ಮಾಡಿ ಮಾಡಿ ಮಣ್ಣ ಗೋರುತಾನೆ
ಭಂಡು ಮಾಡಿ ಬಾಗಿಲೊಳಗೆ ಚೀರಿಕೊಳ್ಳುತಾನೆ ||೨||
ಕರುಣವಿಲ್ಲದಲೆ ಬಂದು ಕಾಲಲೊದೆಯುತಾನೆ
ಶರಣು ಹೊಕ್ಕರೆಯು ತಾನೆ ಕೊಡಲಿ ಮಸೆಯುತಾನೆ
ಹರಿಯುವ ವಾನರರ ಕೂಡ ಹಾರಾಡುತಾನೆ
ಸಿರಿಕೃಷ್ಣ ಹಾಲು-ತುಪ್ಪ ಸೂರೆಮಾಡುತಾನೆ ||೩||
ಬಾಲೆಯರಿಗೆ ವರವನಿತ್ತು ಪುರವ ಕೆಡಿಸುತಾನೆ
ನೀಲಗುದುರೆಯನೇರಿ ಹಾರಿಸಾಡುತಾನೆ
ಬಾಲಕರ ಕೂಡಿಕೊಂದು ಕುಣಿದಾಡುತಾನೆ
ಲೋಲಪುರಂದರವಿಠಲ ತಾನು ಕುಣಿಯುತಾನೆ||೪||

ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ boochi bandide

ಬೂಚಿ ಬಂದಿದೆ, ರಂಗ ಬೂಚಿ ಬಂದಿದೆ ||ಪ||
ಚಾಚಿ ಕುಡಿದು ಸುಮ್ಮನೆ ನೀ ಪಾಚಿಕೊಳ್ಳೊ ಕೃಷ್ಣಯ್ಯ ||ಅ||
ನಾಲ್ಕು ಮುಖದ ಬೂಚಿಯೊಂದು
ಗೋಕುಲಕ್ಕೆ ಓಡಿ ಬಂದು
ಲೋಕರನ್ನು ಎಳೆದುಕೊಂಡು
ಕಾಕು ಮಾಡಿ ಒಯ್ಯುವುದಕೆ ||
ಮೂರು ಕಣ್ಣಿನ ಬೂಚಿಯೊಂದು
ಊರೂರ ಸುತ್ತಿ ಬಂದು
ದ್ವಾರದಲ್ಲಿ ನಿಂತಿದೆ ನೋಡೊ
ಪೋರರನ್ನು ಒಯ್ಯುವುದಕೆ ||
ಅಂಗವೆಲ್ಲ ಕಂಗಳುಳ್ಳ
ಶೃಂಗಾರ ಮುಖದ ಬೂಚಿ
ಬಂಗಾರದಂಥ ಮಕ್ಕಳನೆಲ್ಲ
ಕಂಗೆಡಿಸಿ ಒಯ್ಯುವುದಕೆ ||
ಆರು ಮುಖದ ಬೂಚಿಯೊಂದು
ಈರಾರು ಕಂಗಳದಕೆ
ವಾರು ವಾರು ಅಳುವ ಮಕ್ಕಳ
ದೂರ ಸೆಳೆದು ಒಯ್ಯುವುದಕೆ ||
ಮರದ ಮೇಲೆ ಇರುವುದೊಂದು
ಕರಾಳ ಮುಖದ ಬೂಚಿ
ತರಳರನ್ನು ಎಳೆದುಕೊಂಡು
ಪುರಂದರವಿಠಲಗೊಪ್ಪಿಸಲಿಕೆ ||

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು kaayalaarenu krishna kandavara

ಕಾಯಲಾರೆನು ಕೃಷ್ಣ ಕಂಡವರ ಬಾಗಿಲನು
ನಾಯಿಕುನ್ನಿಗಳಂತೆ ಪರರ ಪೀಡಿಸುತ ||ಪ||
ಉದಯಕಾಲದಲೆದ್ದು ಸಂಧ್ಯಾವಿಧಿಯ ಬಿಟ್ಟು
ಪದುಮನಾಭನ ಸ್ಮರಣೆ ಮೊದಲಿಲ್ಲದೆ
ಮುದದಿ ನಿನ್ನರ್ಚಿಸದೆ ನರರ ಸದನವ ಪೊಕ್ಕು
ಒದಗಿ ಸೇವೆಯ ಮಾಡಿ ಅವರ ಬಾಗಿಲನು ||
ಕಲ್ಲ ಕರಗಿಸಬಹುದು , ಹುರಿಗಡಲೆಯೊಳು ಅದರ
ತೈಲವನು ತೆಗೆದಾದರುಣಲುಬಹುದು
ಬಲ್ಲಿದವರ ಮನಸು ಮೆಚ್ಚಿಸಲರಿಯೆನೈ
ಹಲ್ಲು ಕಿರಿಯುತೆ ಹಂಬಲಿಸಿ ಬಾಯಿಬಿಡುತ ||
ಇಂತು ನಾನಾ ಚಿಂತೆಯಲಿ ನಿನ್ನ ನೆನೆಯದೆ
ಭ್ರಾಂತಿಯೆಂತೆಂಬ ಹೆಬ್ಬಲೆಯೊಳು ಸಿಲುಕಿ
ಅಂತ್ಯವನು ನಾ ಕಾಣೆ ಆದರಿಸುವವರಿಲ್ಲ
ಚಿಂತೆಯ ಬಿಡಿಸಯ್ಯ ಪುರಂದರವಿಠಲ ||

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ kanda bedavo mannu tinna bedavo

ಕಂದಾ ಬೇಡವೊ ಮಣ್ಣು ತಿನ್ನ ಬೇಡವೊ ||ಪ||
ಕಂದಾ ಬೇಡವೊ ಮಣ್ಣು ತಿನ್ನಲಿ ಬೇಡವೊ
ಸುಂದರಾಂಗನೆ ನಿನಗೆ ಹೊಟ್ಟೆ ನೋಯುವುದಯ್ಯ ||ಅ||
ಬೇಗನೆ ಏಳಯ್ಯ , ಮಣ್ಣಾಟ ಬಿಡೊ ನೀನು
ಜೋಗಿ ಬರುತಾನಲ್ಲಿ ಅಂಜಿಸುವುದಕೀಗ ||
ತಾಯಿ ಮಾತನು ಒತ್ತಿ ಕರದಲಿ ಮಣ್ಣೊತ್ತಿ
ಬಾಯಲಿ ಇಟ್ಟನು ಬಾಲಕೃಷ್ಣಯ್ಯನು ||
ಪೆಟ್ಟು ಕೊಡುವೆ ನಿನಗೆ , ಸಿಟ್ಟು ಬಹಳ ಇದೆ
ಮುಟ್ಟಬೇಡೊ ಮಣ್ಣು , ಬೆಣ್ಣೆ ತರುವೆನಯ್ಯ ||
ಅಮ್ಮಯ್ಯ ಕೇಳೆಲೆ , ಬಾಯಲಿ ಮಣ್ಣಿಲ್ಲ
ಗುಮ್ಮನ ಕರೆಬೇಡ , ಸುಮ್ಮನೆ ಇರುತೇನೆ ||
ಮಗುವೆ ಬಾ ಬಾ ಎಂದು ಬಣ್ಣಿಸಿ ಕರೆದಳು
ಮಗುವಿನ ಬಾಯ ಶೋಧಿಸಿದಳು ಬೇಗನೆ ||
ಬಾಯಲಿ ಕಂಡಳು ಹದಿನಾಲ್ಕು ಲೋಕವ
ಕಾಯ ಮರೆತಳಯ್ಯ ಮರುಳಿಗೆ ವಶವಾಗಿ ||
ಮತ್ತು ಕಂಡಳು ಅವಳು ಗೋಕುಲವೆಲ್ಲವ
ಅತ್ತ ಕಂಡಳು ತನ್ನ ಕೃಷ್ಣನ ಬಗಲಲಿ ||
ಗೋಪ್ಯೇರ ಮನೆಗಳಲಿ ಗೋಪಾಲಕೃಷ್ಣನು
ಗೋಪ್ಯೇರ ಮನೆಗಳಂತೆ ದುಡುಕು ಮಾಡುತಲಿರ್ದ ||
ಬಾಲನು ಬೀದಿಯ ಮಣ್ಣೆತ್ತಿ ಉಣುತಿರ್ದ
ಬಾಲೆ ಗೋಪ್ಯಮ್ಮನು ಮಣ್ಣ ತೆಗೆತಿರ್ದಳು ||
ಕಂದನು ನೀನಲ್ಲ ಕಂದರ್ಪ ಜನಕನೆ
ಕಂದನೆ ನಿನ್ನ ಬಾಯ ಮುಚ್ಚಿಕೊಳ್ಳಯ್ಯ ಈಗ ||
ದೇವದಿದೇವನೆ ದೇವಕಿತನಯನೆ
ಭಾವಜನಯ್ಯನೆ ಬಾರಯ್ಯ ದೊರೆಯೆ ||
ಜಯಗಳಾಗಲಿ ನಮ್ಮ ಕೃಷ್ಣರಾಯಗೆ ಬಹಳ
ಜಯಗಳಾಗಲಿ ಅವನ ಭಕ್ತರ ವೃಂದಕೆ ||
ಲೀಲಾವಿನೋದನು ರುಕ್ಮಿಣೀಲೋಲನು
ಲೀಲೆ ತೋರಿದನಂದು ತಂದೆ ಪುರಂದರವಿಠಲ ||

ಹೇಗೆ ಮಾಡಲಿ ಮಗುವಿಗೆ hege maadali maguvige

ಹೇಗೆ ಮಾಡಲಿ ಮಗುವಿಗೆ ಏನಾಯಿತೆ , ಇದ-
ರಾಗಮವ ಬಲ್ಲವರು ತಿಳಿದು ಪೇಳಿ ||ಪ||
ಕಣ್ಣಮುಚ್ಚಲೊಲ್ಲನು ತೂಗಿ ಮಲಗಿಸಿದರೆ
ಬೆನ್ನ ಮೇಲಿನ ಬುಕಟಿ ಕಲ್ಲ ಅರಿಯಾಗಿದೆ ||
ರೋಗವಿದೇನು ದಾಡೆಯಲಿ ನೀರು ಇಳಿವುತದೆ
ಕೂಗುವ ಧ್ವನಿ ಒಮ್ಮೆ ಕುಂದಿದುದು ||
ಖಂಡ ಸಕ್ಕರೆ ಹಾಲು ಉಣಕೊಟ್ಟರೊಲ್ಲದೆ
ಮಣ್ಣು ಹೇಂಟೆ ಬೇಡಿದ ಕೈಯಾಗೆ ಏನು ಕೊಡಲಿ
ಮಂಡೆ ಜಡೆಕಟ್ಟಿತಿನ್ನೇನು ಮಾಡಲಿ ಇದಕೆ
ಹಿಂಡು ಸತಿಯರ ಸಂಗ ಘನವಾಯಿತು ||
ಮಾಲೆಯನು ತೆಗೆದು ಮೈಮುರಿದುಟ್ಟು ನಗುತಿದೆ
ಕಲಕಿತನದಲ್ಲಿ ಎಮ್ಮ ಕಾಡುತಾನೆ
ನೆಲೆಯ ಬಲ್ಲವರು ಕಾಣೆ ಧರೆಯೊಳಗೆ
ಚೆಲುವ ಶ್ರೀಪುರಂದರವಿಠಲ ಒಬ್ಬನೇ ಬಲ್ಲ ||

ಡಂಗುರವ ತೀಡಿ ಮೈಯೊಳು dangurava teedi maiyolu

ಡಂಗುರವ ತೀಡಿ ಮೈಯೊಳು ಗಂಧ ಪೂಸಿದ , ಸ್ವಾಮಿ, ಗಂಧ ಪೂಸಿದ ||೧||
ಪುಣುಗು ಜವ್ವಾಜಿ ಕಸ್ತೂರಿ ಹಚ್ಚಿದ , ಸ್ವಾಮಿ , ಕಸ್ತೂರಿ ಹಚ್ಚಿದ ||೨||
ನೊಸಲ ಮೇಲೆ ಮೃಗನಾಭಿ ತಿಲಕ ಧರಿಸಿದ , ಸ್ವಾಮಿ , ತಿಲಕ ಧರಿಸಿದ ||೩||
ಓರೆ ತುರುಬು ಓರೆ ಜಡೆಯ ಗೊಂಡೆ ಕಟ್ಟಿದ , ಸ್ವಾಮಿ , ಗೊಂಡೆ ಕಟ್ಟಿದ ||೪||
ಎಂಟು ಎಂಟು ಮುತ್ತ್ತಿನ ವಂಟಿ ಇಟ್ಟನೆ , ಸ್ವಾಮಿ ,ವಂಟಿ ಇಟ್ಟನೆ ||೫||
ಕಂಠದಲ್ಲಿ ಕೌಸ್ತುಭ ಆಭರಣವಿಟ್ಟನೆ , ಸ್ವಾಮಿ , ಆಭರಣವಿಟ್ಟನೆ ||೬||
ಪಾದದಲ್ಲಿ ಹೊನ್ನಂದುಗೆ ನೂಪುರವಿಟ್ಟನೆ , ಸ್ವಾಮಿ ಬಾಪುರಿ ಇಟ್ಟನೆ ||೭||
ಕಿರುಗೆಜ್ಜೆ ಪಾಡಗ ಪೆಂಡೆ ಕಾಲಲಿಟ್ಟನೆ , ಸ್ವಾಮಿ , ಕಾಲಲಿಟ್ಟನೆ ||೮||
ಅಂಗುಲಿಗೆ ತಕ್ಕಂಥ ಉಂಗುರವಿಟ್ಟನೆ , ಸ್ವಾಮಿ , ಹೊನ್ನುಂಗುರವಿಟ್ಟನೆ ||೯||
ತೋಳರಕ್ಷೆ ಮಣಿಹಸ್ತ ಕಡಗ ಇಟ್ಟನೆ , ಸ್ವಾಮಿ , ಕಡಗ ಇಟ್ಟನೆ ||೧೦||
ಹಾರಪದಕ ಹುಲಿಯುಗುರು ವೈಜಯಂತಿಯು , ಕೊರಳೊಳ್, ವೈಜಯಂತಿಯು ||೧೧||
ದುಂಡು ಮುತ್ತು ಕಟ್ಟಿ ಸರಿಗೆ ತಾಳಿ ಧರಿಸಿದ, ಸ್ವಾಮಿ, ತಾಳಿ ಧರಿಸಿದ ||೧೨||
ಬಂದಿ ಕಂಕಣ ಬಾಪುರಿ ವಂಕಿ ಇಟ್ಟನೆ , ಸ್ವಾಮಿ , ವಂಕಿ ಇಟ್ಟನೆ ||೧೩||
ಶೃಂಗಾರದ ಜರತರದ ಅಂಗಿ ತೊಟ್ಟನೆ , ಸ್ವಾಮಿ , ಅಂಗಿ ತೊಟ್ಟನೆ ||೧೪||
ಅಂಗದಲ್ಲಿ ಭಂಗಾರದ ಕವಚವಿಕ್ಕಿದ , ಸ್ವಾಮಿ , ಕವಚವಿಕ್ಕಿದ ||೧೫||
ದಿಟ್ಟ ವೆಂಕಟೇಶ ಬೇಟೆಯಾಡ ಹೊರಟನೆ , ಸ್ವಾಮಿ ಬೇಟೆ-ಯಾಡಹೊರಟನೆ ||೧೬||
ಪಟ್ಟವಾಳಿ ಶಾಮಿಯ ಕಸೆಯ ಬಿಗಿದನೆ , ಸ್ವಾಮಿ, ಕಸೆಯ ಬಿಗಿದನೆ ||೧೭||
ಹುಡಿಯ ಕಟ್ಟು ನಡುವಿಗೆ ಕಟ್ಠಾಣಿ ಹೊಗಿಸಿದ , ಸ್ವಾಮಿ, ಕಟ್ಠಾಣಿ ಹೊಗಿಸಿದ ||೧೮||
ಓರೆ ತುರುಬಿನ ನಾಯಕ ಬಾರದ್ಹೋದನೆ , ಸ್ವಾಮಿ ,ಬಾರದ್ಹೋದನೆ ||೧೯||
ಚೆಲುವ ಚೆನ್ನಿಗರಾಯನಾಗಿ ವನಕೆ ಹೊರಟನೆ , ಸ್ವಾಮಿ , ವನಕೆ ಹೊರಟನೆ ||೨೦||
ಜಗವೆಲ್ಲ ನೋಡುತಿರಲು ತೇಜಿಯೇರಿದ , ಸ್ವಾಮಿ ,ತೇಜಿಯೇರಿದ ||೨೧||
ತ್ರಿಜಗವನ್ನೆ ಪಾಲಿಸೆಂದು ತೇಜಿ ಹಿಡಿದನೆ , ಸ್ವಾಮಿ, ವಾಜಿ ಹಿಡಿದನೆ ||೨೨||
ಗಟ್ಟ ಬೆಟ್ಟವನ್ನೆ ಸುತ್ತಿ ಕಷ್ಟಬಟ್ಟನೆ ,ಸ್ವಾಮಿ , ಕಷ್ಟಬಟ್ಟನೆ || ೨೩||
ವೃಕ್ಷಮೂಲದಲ್ಲಿ ಮಿಂಚುತಿಹಳ ಕಂಡನೆ , ಸ್ವಾಮಿ , ಮಿಂಚುತಿಹಳ ಕಂಡನೆ ||೨೪||
ಸೋಲುಮುಡಿಯ ಸೋಗೆಗಣ್ಣ ಓರೆನೋಟವ , ಅವಳ , ಓರೆನೋಟವ ||೨೫||
ನೀಲವರ್ಣದ ಕೋಮಲಾಂಗಿ ಮೇಲೆ ಛಾಯವ , ಅವಳ , ಮೇಲೆ ಛಾಯವ ||೨೬||
ಎರಳೆಗಂಗಳಂತೆ ಕಣ್ಣ ತಿರುಗುತಿಹಳು , ಅವಳು , ಹೊಳೆಯುತಿಹಳು ||೨೭||
ಮೃಗವ ಕಂಡು ಶಿರವನೆತ್ತಿ ನೋಡುತಿಹಳು , ಅವಳು , ನೋಡುತಿಹಳು ||೨೮||
ಕುಂಜರಗಮನೆಯಂತೆ ತಿರುಗುತಿಹಳು , ಅವಳು , ಒಲೆವುತಿಹಳು ||೨೯||
ವನವ ಬಿಟ್ಟು ವನಕೆ ವನಕೆ ಹಾರುತಿಹಳು , ಅವಳು, ಹಾರುತಿಹಳು ||೩೦||
ಅವಳ ಕಂಡು ವೆಂಕಟೇಶ ಭ್ರಾಂತಿಬಟ್ಟನೆ , ಸ್ವಾಮಿ ಭ್ರಾಂತಿಗೊಂಡನೆ ||೩೧||
ಅಡ್ಡದಾರಿಯಲ್ಲಿ ಮೋರೆ ನೋಡುತಿಹನೆ , ಸ್ವಾಮಿ , ನೋಡುತಿಹನೆ ||೩೨||
ದಾರಿಗಡ್ಡ ನಿಂದಿರಲಾರು ಹೀನರಾವುತ , ಎಲೊ ,ಹೀನರಾವುತ ||೩೩||
ಪರನಾರಿಯರ ಕಂಡು ಮೋರೆ ಹೇಗೆ ಮಾಡುತಿ , ಎಲೊ ,ಹೇಗೆ ಮಾಡುತಿ ||೩೪||
ಹೀನನಲ್ಲವೆ ನಿನ್ನ ಹುಡುಕಬಂದೆನೆ, ನಿನ್ನ , ಹುಡುಕಬಂದೆನೆ ||೩೫||
ನಿನ್ನ ಗುರುಕುಚಗಳ ಕಂಡು ಭ್ರಾಂತಿಗೊಂಡೆನೆ, ನಾನು , ಭ್ರಾಂತಿಗೊಂಡೆನೆ ||೩೬||
ಲಂಡ ಪುಂಡರ ಮಾತ ಆಡದಿರೊ , ಎನ್ನ ಕೂ-ಡಾಡದಿರೊ ||೩೭||
ಕತ್ತಿ ಕಠಾರಿ ನಿನ್ನ ಸೇನೆಗಂಜೆನೋ , ನಾನು , ಸೇನೆಗಂಜೆನೋ ||೩೮||
ನಿನ್ನ ಬಿರುದ ಬಿಟ್ಟುಕೊಟ್ಟು ಬಾರೆ ಚುಂಚುಕಿ , ಬೇಗ , ಬಾರೆ ಚುಂಚುಕಿ ||೩೯||
ಬಾರೆ ಹೋಗೆ ಎನ್ನಲಿಕ್ಕೆ ಭಾಮೆಯೆ ನಾನು , ಎಲೊ , ಭಾಮೆಯೆ ನಾನು ||೪೦||
ನಿನ್ನ ಬಿಂಕ ಬಿಟ್ಟುಕೊಟ್ಟು ತಿರುಗೊ ರಾವುತ , ಅತ್ತ , ಸಾರೊ ರಾವುತ ||೪೧||
ನೀಲವೇಣಿ ಎನ್ನ ಕೂಡ ನಿಲ್ಲಲಾರೆಯೆ , ಎನ್ನೊಳ್ , ನಿಲ್ಲಲಾರೆಯೆ ||೪೨||
ನಿನ್ನ ಮುಖಪದ್ಮಗಳ ಕಂಡು ಭ್ರಾಂತಿಗೊಂಡೆನೆ , ನೀರೆ ,ಭ್ರಾಂತಿಗೊಂಡೆನೆ ||೪೩||
ಹೀನಮಾತಾಡದಿರೊ ಹೀನ ರಾವುತ , ಎಲೊ , ಹೀನ ರಾವುತ ||೪೪||
ವಾರಿಜಾಕ್ಷಿ ಎನ್ನ ಕೂಡೆ ವಾದವೇತಕೆ , ಎಲೆ , ವಾದವೇತಕೆ ||೪೫||
ಪ್ರೇಮದಿಂದ ಬಂದು ತೊಡೆಯ ಮೇಲೆ ಏರೆ ಚುಂಚುಕಿ , ಮೇಲೆ , ಏರೆ ಚುಂಚುಕಿ ||೪೬||
ತೊಡೆಯ ಮೇಲೆ ಏರಲಿಕ್ಕೆ ಮಡದಿಯೆ ನಾನು , ಎಲೊ , ಮಡದಿಯೆ ನಾನು||೪೭||
ಹೀನಮಾತಾಡದಿರೊ ಹುಡುಗ ರಾವುತ , ಎಲೊ , ತುಡುಗ ರಾವುತ ||೪೮||
ರಾಜ್ಯಭೂಮಿಗಳನು ಅಷ್ಟು ಕೊಡುವೆನು ನಾನು , ನಿನಗೆ , ಬಿಟ್ಟುಕೊಡುವೆನು ||೪೯||
ನಿನ್ನೊಡೆಯನೆಂದು ಪಾಲಿಸೆ ಚುಂಚುಕಿ , ಬೇಡಿ-ಕೊಂಬೆ ನಾಯಕಿ ||೫೦||
ರಾಜ್ಯಭೂಮಿಯಾಳಲಿಕ್ಕೆ ರಾಯನೇ ನಾನು , ಎಲೊ ,ರಾಯನೇ ನಾನು ||೫೧||
ದೊಡ್ಡ ಅಡವಿಬೆಟ್ಟದೊಳಗೆ ಆಹಾರವೇನೊ , ಎಲೊ , ಆಹಾರವೇನೊ ||೫೨||
ಆಲದಂತಿಹ ಹಣ್ಣು ಮುಟ್ಟಬಾರದ ಹಣ್ಣು , ಮುಟ್ಟ-ಬಾರದ ಹಣ್ಣು ||೫೩||
ಮುದ್ದು ಸುರಿವ ಹೂ , ಬಹಳ , ಮುದ್ದು ಸುರಿವ ಹೂ ||೫೪||
ಕರೆಯಬಾರದಾ ಹಣ್ಣು ಕೈಗೆ ನೀಕಾದ, ಹಣ್ಣು , ಕೈಗೆ ನೀಕಾದ ||೫೫||
ಎಷ್ಟು ಪೇಳ್ದರು ಕೇಳಲಿಲ್ಲ ಏನ ಮಾಡಲಿ , ಇ-ನ್ನೇನು ಮಾಡಲಿ ||೫೬||||
ಅಡವಿಯೊಳಗೆ ದಾರಿಲ್ಲೆಂದು ಜುಲ್ಮೆ ಮಾಡಿದ , ಸ್ವಾಮಿ , ಜುಲ್ಮೆ ಮಾಡಿದ ||೫೭||
ಸ್ವಾಮಿಪುಷ್ಕರಣಿಯ ತೀರದಲ್ಲಿ ವಾಸ ಮಾಡಿದ , ಸ್ವಾಮಿ , ವಾಸ ಮಾಡಿದ || ೫೮ ||
ವರಹವತಾರ ತಾನೆಂದು ಅರಸನಾದನೆ , ಸ್ವಾಮಿ , ಅರಸನಾದನೆ ||೫೯||
ಕೊಲ್ಲಾಪುರದಲ್ಲಿ ತನ್ನ ನಾರಿಯಿಟ್ಟನೆ , ಸ್ವಾಮಿ , ನಾರಿಯಿಟ್ಟನೆ ||೬೦||
ಬೆಟ್ಟ ನಡೆವರಿಲ್ಲೆಂದು ಕೃಷ್ಣ ನಡೆದನೆ , ಸ್ವಾಮಿ , ಕೃಷ್ಣ ನಡೆದನೆ ||೬೧||
ಸ್ವಾಮಿ ವೆಂಕಟೇಶ ತಾನು ಬೇಟೆಯಾಡಿದ , ಸ್ವಾಮಿ ,ಬೇಟೆಯಾಡಿದ ||೬೨||
ಅಪ್ಪ ವೆಂಕಟೇಶ ತಾನು ಒಪ್ಪದಿಂದಲೆ , ಗಿರಿಗೆ ಬಂದನೆ ||೬೩||
ಶ್ರೀಶ ಪುರಂದರವಿಠಲನೆಂದು ಹಾಗೆ ನಿಂದನೆ , ಸ್ವಾಮಿ , ಹಾಗೆ ನಿಂದನೆ ||೬೪||