Labels

Tuesday, 1 October 2019

ದುರ್ಗಾ ದುರ್ಗೆಯೆ ಮಹದುಷ್ಟಜನ Durga durgeya

ದುರ್ಗಾ ದುರ್ಗೆಯೆ ಮಹದುಷ್ಟಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರೀ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವುದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೆ ದುರ್ಗೆ ಮಹಾ ದುರ್ಗೆ ಭೂದುರ್ಗೆ ವಿಷ್ಣು
ದುರ್ಗೆ ದುರ್ಜಯ ದುರ್ಧಕ್ಷೆ ಶಕ್ತಿ
ದುರ್ಗಕಾನನ ಗಹನ ಪರ್ವತಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತವಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನಿರ್ಗುಡಿದಂತೆ ಲೋಕ ಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯ ವಿಠ್ಠಲನಂಘ್ರಿ
ದುರ್ಗಾಶ್ರಮ ಮಾಡಿ ಬದುಕುವಂತೆ ಮಾಡು || ೧ ||

ಕೋತಿಯಾದರೆ ಬಿಡೆನೊ kotiyadare bideno

ಕೋತಿಯಾದರೆ ಬಿಡೆನೊ ಬಲುಪರಿ
ಭೂತಳದೊಳು ಪಾರ‍್ಯಾಡಲು ಬಿಡೆನೊ
ಖ್ಯಾತಿ ತೊರೆದು ಕಚ್ಚುಟ ಹಾಕಲು ಬಿಡೆನೊ
ಚಾತುರ ಬಿಟ್ಟರೆ ಬಿಡೆನೊ ನಾ ಬಿಡೆನೊ
ಭೀತಿ ಬೀರಲು ಬಿಡೆನೊ ಮಾತು
ಮಾತಿಗೆ ಹಲ್ಲು ತೋರಲು ಬಿಡೆನೊ
ಗಾತುರ ಗಗನಕ್ಕೆ ಬೆಳಿಸಲು ಬಿಡೆನೊ
ಕೋತಿ ಸೇವಿಸಲು ಬಿಡೆನೊ
ಆತುರದಲಿ ವನಧಿ ಲಂಘಿಸಿದರೆ ಬಿಡೆ
ಆ ತರುಗಳ ಕಿತ್ತಲು ಬಿಡೆನೊ
ವೀತಿಹೊತ್ರನ ಬಾಲದಲ್ಲಿ ಇಟ್ಟರೆ ಬಿಡೆ
ಜಾತಿ ಧರ್ಮವ ಬಿಟ್ಟರೆ ಬಿಡೆನೊ
ಈ ತೆರದಲ್ಲಿ ನೀನು ಇದ್ದರೇನಯ್ಯಾ ಬೆ
ನ್ನಾತು ಕೇಳುವದು ನಾ ಬಿಡಬಲ್ಲೆನೇ
ತಾತಾ ಇನ್ನಿದರಿಂದ ಆವದಾದರು ಬರಲಿ
ದಾತಾ ಮತ್ತಿದರಿಂದ ಏನಾದರಾಗಲಿ
ಸೋತು ಹಿಂದೆಗದು ಪೋದರೆ ನಿನ್ನ ಪದದಾಣೆ
ಯಾತಕ್ಕೆ ಸಂಶಯವೊ ಬಿಡೆನೊ ಬಿಡೆನೊ ಖ-
ದ್ಯೋತ ಮಂಡಲ ಪೋಗಲು ಬಿಡೆನೊ
ಮಾತು ಪೊಳ್ಳಾದರೆ ನೂರೊಂದು ಕುಲ ಎನ್ನ
ಗೋತ್ರದವರಿಗೆ ಗತಿ ಎಲ್ಲೆದೋ
ವಾತನ್ನ ಮಗವಾತ ಆತನ್ನ ರೂಪವ
ಗಾತುರದಲ್ಲಿ ನಿನ್ನೊಳಗೆ ತೋರೊ
ಜ್ಯೋತಿರ್ಮಯ ರೂಪ ವಿಜಯವಿಠ್ಠಲರೇಯನ
ದೂತದುರ್ಜನಹಾರಿ ದುಃಖನಿವಾರಿ || ೧ ||

ಒಂದು ಅವತಾರದಲಿ ondu Avataradalli

ಒಂದು ಅವತಾರದಲಿ ಕೊಂದೆ ರಕ್ಕಸರ ಮ-
ತ್ತೊಂದು ಅವತಾರದಿ ಅಸುರವೃಂದ ಘಾತಿಸಿದೆ
ನಂದತೀರಥ ರೂಪದಿಂದ ಸಕಲರಂದ ವಚನಗಳ ಕಡಿದು
ನಂದದಲ್ಲಿ ಮೆರೆದೆ ತಂದೆ ಈ ಕೃತಿಗಳು ನಿನ್ನಿಂ-
ದಾದದ್ದು ನೋಡಿ ಮಂದರೋದ್ಧಾರ ಸುಖಿಸುವ ಸಪುತ ದ್ವೀಪ
ಸಿಂಧು ಸಪುತ ಏಕದಿಂದ ಹಾರುವನು
ಮುಂದಿದ್ದ ಕಾಲಿವೆಯ ನಿಂದು ನಿಂದು ತಾ ದಾಟಿದಂತೆ
ಮಂದಮತಿಗಳ ಮನಕೆ ಏನೆಂದೆ ಎಲೋ ದೇವ
ಸುಂದರಾಂಗನೆ ಸುಖದಿಂದ ಪೂರಿತ ವಾಯು-
ನಂದನ ಹನುಮ ರಾಮನಿಂದಾಲಿಂಗನ ಪಡೆದೆ
ಬಂದು ವಂದಿಸಿದೆ ಗೋಪೀಕಂದಗೆ ಭೀಮ
ನಂದಮಾರುತಿ ವ್ಯಾಸನಿಂದ ತತ್ತ್ವಗಳೆಲ್ಲ
ಅಂದದಿ ಓದುವ ಅಮರೇಂದ್ರವಂದಿತ ಮಧ್ವ
ತಂದೆ ಎನ್ನ ಬಿನ್ನಹ ಒಂದು ಲಾಲಿಸುವುದು
ಪೊಂದಿ ಭೂಪತಿಯ ಮನದಿಚ್ಛೆ ಬೇಡಿದಂತೆ
ಇಂದು ಬೇಡುವೆ ಮನದಿಂದ ವಂದನೆ ಮಾಡುವೆ
ಕುಂದದೆ ಎನ್ನೊಳಿಪ್ಪ ಮಂದಮತಿ ಕಳೆವಾದೆಂದು
ಇಂದೀವರಾಕ್ಷ ಹೃದಯ ಮಂದಿರದೊಳು ನಿನ್ನ
ಅಂದವಾದ ರೂಪ ಇಂದು ತೋರುವುದೆನಗೆ
ಸಿಂಧುಶಯನ ಸಿರಿವೇಣುಗೋಪಾಲನು
ನಿಂದು ನಿನ್ನೊಳು ಲೀಲಾ ಒಂದೊಂದು ಮಾಳ್ಪ ಚಿತ್ರ || ೫ ||

ಇರುತಿ ಎಲ್ಲ ಜಗದಾಧಾರಕನಾಗಿ Iruti ella jagadharakanagi

ಇರುತಿ ಎಲ್ಲ ಜಗದಾಧಾರಕನಾಗಿ
ಇರುತಿದ್ದು ಧಾರುಣಿಯೊಳಗೆ
ಮೂರು ಅವತಾರಗಳ ಧರಿಸಿ
ಕ್ರೂರರ ಸದೆದದ್ದು ಮೀರಿದ ಕಾರ್ಯವೆ
ಮೇರು ನುಂಗುವನಿಗೆ ಒಂದು ಚೂರು ನುಂಗಲು
ಶೂರತನವು ಏನೋ ಆರು ಬಣ್ಣಿಪರೋ ವಿ
ಚಾರಿಸಿ ನಿನ್ನನ್ನು ನಾರಾಯಣ ಕೃಷ್ಣ ವೇಣುಗೋಪಾಲನಾ-
ಧಾರದಿಂದಲಿ ಸೇವೆ ಬಾರಿ ಬಾರಿಗೆ ಮಾಳ್ಪೆ || ೪ ||

ಪೃಥ್ವಿ ಶಬ್ದಾದಿ Prithvi shabdadi

ಪೃಥ್ವಿ ಶಬ್ದಾದಿ ಭೂತ ಮಾತ್ರಾ ಪರಮಾಣುಗಳಲ್ಲಿ
ಪ್ರತಿ ಪ್ರತಿ ರೂಪನಾಗಿ ಇರುತಿಪ್ಪೆ ಮಡದಿ ಸಹಿತ ಪ್ರಾ-
ಕೃತ ವಿಡಿದು ಸಕಲ ವ್ಯಾಪ್ತ ತಾತ್ವೀಕರಲ್ಲಿ ವ್ಯಾಪಾರ
ನಿನ್ನದಯ್ಯ ಲೋಕವಂದಿತ ದೇವ
ಶಾತಕುಂಭಾದಿಯಿಂದ ಬೊಮ್ಮಾಂಡವು ತಾಳ
ನಿನಗೆ ಎಣೆಯೆನುತ ತೋರುವುದಯ್ಯ ಶ್ರೀ-
ಕಾಂತನಾದ ಸಿರಿವೇಣುಗೋಪಾಲನು
ಪ್ರಿತಿಯಿಂದ ನಿನಗೆ ಒಲಿದ ಅಧಿಕನಾಗಿ || ೩ ||

ಅಖಿಲಾಗಮವೇದ್ಯ Akhilagamavedya

ಅಖಿಲಾಗಮವೇದ್ಯ ಅಖಿಲಾಗಮಸ್ತುತ್ಯ
ಅಖಿಲಾಗಮ ನಿಗಮ ವ್ಯಾಪುತ ದೇವನೆ
ಅಖಿಲರೊಳಗೆ ನಿಂದು ಸಕಲ ಕಾರ್ಯಗಳೆಲ್ಲ
ಅಕುಟಿಲ ನೀನಾಗಿ ಮಾಡಿಸಿ ಮೋದದಿಂದ
ಯುಕುತಿಯಿಂದ ಜಗವ ಅತಿಶಯವ ತಿಳಿದು
ಲಕುಮಿಯನು ನೀನು ಕಾಣುವೆ ಸರ್ವದಾ
ಭಕುತರೊಳಗೆ ನಿನ್ನ ತುತಿಸ ಬಲ್ಲವರಾರು
ಭಕುತಿಗಭಿಮಾನಿ ಭಾರತಿಗಳವಲ್ಲ
ಭ್ರುಕುಟಿ ವಂದಿತ ನೀನು ವೇಣುಗೋಪಾಲ
ಪ್ರಕಟದಿ ಬಲ್ಲದ್ದು ಅರಿಯರು ಉಳಿದದ್ದು || ೨ |

ಮರುತ ನಿನ್ನಯ ಮಹಿಮೆ Maruta ninnaya mahime


ಮರುತ ನಿನ್ನಯ ಮಹಿಮೆ ಪರಿಪರಿಯಿಂದ ತಿಳಿದು
ಚರಿಸಿದ ಮನುಜನಿಗೆ ದುರಿತ ಬಾಧೆಗಳ್ಯಾಕೆ
ಸರಸಿಜಾಸನಸಮ ಸಿರಿದೇವಿ ಗುರುವೆಂದು
ಪರತತ್ತ್ವಹರಿಯೆನುತ ನಿರುತ ವಂದಿಸಿ ಅಖಿಲ
ಭರಿತನಾಗಿಪ್ಪೆ ಜಗದಿ ಅರಸಿ ಭಾರತಿ ಸಹಿತ
ಹೊರಗಿದ್ದ ನವಾರ್ಣವದೊಳಗೆ ಜೀವರ ಬೀಜ
ಸರಿಬಂದ ವ್ಯಾಪಾರದಿ ಆಡಿಸುವೆ ಜಡಜೀವರನು
ಪುರಹರ ಮೊದಲಾಗಿ ತೃಣಜೀವ ಕಡೆಯಾಗಿ
ಅರಿಯರು ಒಂದು ಕಾರ್ಯ ಗುರುವೆ ನಿನ್ನ ಹೊರತು
ಹೊರಗೆ ಗೊಂಬೆಗಳ ತೋರಿ ಒಳಗೆ ಥರಥರದಿ ನೀನು
ಇರುವೆ ಸರ್ವರಿಗೆ ಆಧಾರರೂಪದಿ ಅತಿ
ಸ್ಥಿರ ಭಕುತಿಯಿಂದ ಹರಿಯ ಧೇನಿಸುತ
ಮಿರುಗುವ ಪ್ರಭೆ ನಿನ್ನದು ವದರುವ ಧ್ವನಿ ನಿನ್ನದು
ಬರುವ ಹೋಗುವ ವ್ಯಾಪಾರ ನಿನ್ನದು ದೇವ
ಭರದಿ ಶರಧಿಶಯನ ಸಿರಿ ವೇಣುಗೋಪಾಲರೇಯ
ಪರಮ ಹರುಷದಿ ಲೀಲಾ ತೋರುವ ನಿನ್ನೊಳಿದ್ದು || ೧ ||