Labels

Thursday, 30 July 2020

ಹರನ ಕುಮಾರನ harana kumarana

ಶ್ರಾವಣ ಶುಕ್ರವಾರ  ಹಾಡು

ಹರನ ಕುಮಾರನ ಚರಣಕಮಲಗಳಿಗೆರಗಿ ಶಾರದೆಗೆ ವಂದಿಸುತ
ಶರಧಿಶಯನಗೆ ಸೆರಗೊಡ್ಡಿ ಬೇಡಿಕೊಂಬೆ ಶರಧಿಸುತೆಯ ಕಥೆಗೆ ವರವ

ಸಾಕ್ಷಾತ ಶ್ರೀಹರಿ ವಕ್ಷಸ್ಥಳ ವಾಸಿಯೇ ಇಕ್ಷುಚಾಪದವನ ಪಡೆದ
ಮೋಕ್ಷದಾಯಕಳೇ ಮಾ ಲಕ್ಷುಮಿ ಕರುಣಾ\ ಕಟಾಕ್ಷದಿ ನೋಡಬೇಕೆನ್ನ

ಶ್ರಾವಣಮಾಸದಿ ಮೊದಲ ಶುಕ್ರವಾರ  ಮಾಧವನರಸಿ ಮಾಲಕ್ಷ್ಮೀ ದೇವೇರ
ಮಹಿಮೆ ಕೊಂಡಾಡುವೋದೀ ಕಥೆ ಕಿವಿಗೊಟ್ಟು ಕೇಳೋದು ಜನರು

ಬಡವ ಬ್ರಾಹ್ಮಣನೊಂದು ಪಟ್ಟಣದೊಳಗಿದ್ದ ಮಡದಿ ಮಕ್ಕಳ ಸಹಿತಾಗಿ
ಹಿಡಿದು ತಂಬೂರಿ ತಂಬಿಗೆಯ ಗೋಪಾಳಕ್ಕೆ ಬಿಡದೊಂದು ಮನೆಯ ತಿರುಗುತಲಿ

ಸೊಸೆಯರು ನಾಲ್ಕು ಮಂದಿಯು ಗಂಡುಮಕ್ಕಳೂ ಹಸುಗೂಸುಗಳು ಮನೆತುಂಬಾ
ಅಶನ ವಸನವಿಲ್ಲ ಹಸಿದ ಮಕ್ಕಳಿಗೆ ಹಾಲು ಮೊಸರು ಅನ್ನವು ಮೊದಲಿಲ್ಲ

ಅತಿಗುಣವಂತರು ಗತಿಯಿಲ್ಲ ಗ್ರಾಸಕ್ಕೆ ಮಿತಭೋಜನವ ಮಾಡುವರು
ವ್ರತನೇಮ ನಿಷ್ಠೆ ನಿರುತ ದರಿದ್ರವನು ಶ್ರೀಪತಿ ಸತಿ ದಯದಿ ನೋಡಿದಳು

ಒಂದು ದಿನದಿ ಬಂದ ಮಂದಿ ಮಂದಿರದಲ್ಲಿ ಚೆಂದಾದ ಸುಣ್ಣ ಸಾರಣೆಯು
ರಂಗವಲ್ಲಿ ಚಿತ್ರ ಬಣ್ಣಕಾರಣೆ ಮನೆ ಮುಂದೆ ತೋರಣ ಕಟ್ಟುತಿರಲು

ಮನೆಮನೆಯಲ್ಲಿ ಮಾಲಕ್ಷ್ಮೀದೇವೇರ ಚಟ್ಟಿಗೆ ಬರೆವುದನು
ತಾ ಕಂಡು ಇದು ಏನು ನೋವಿ ಎನಗೆ ಹೇಳಬೇಕೆಂದು ಘನಭಕ್ತಿಯಿಂದ ಕೇಳಿದನು

ಕ್ಷೀರಸಾಗರದಲ್ಲಿ ಹುಟ್ಟಿದ ಮಾಲಕ್ಷ್ಮೀ ದೇವಿ ದೇವರ ಪಟ್ಟದರಸಿ
ಶ್ರಾವಣಮಾಸ ಸಂಪತ್ತು ಶುಕ್ರವಾರ  ನಾವು ಪೂಜೆಯ ಮಾಡಬೇಕು

ಎನಗೊಂದು ಚಟ್ಟಿಗೆ ಬರೆದುಕೊಟ್ಟರೆ ಎನ್ನ ಮನೆಯಲ್ಲಿ ಇಟ್ಟು ಪೂಜಿಪೆನು
ವಿನಯದಿಂದ ಹೇಳಿಕೊಂಡರೆ ಒಂದು ಚಟ್ಟಿಗೆ ಬರೆದುಕೊಟ್ಟರು ಬಲಗೈಲಿ

ಸಿರಿದೇವಿ ಚಟ್ಟಿಗೆ ಹಿಡಿದು ಗೋಪಾಳಕ್ಕೆ ಹೋದನು ಮನೆ ಮನೆಯಲ್ಲಿ
ಗೋಧಿ ಅಕ್ಕಿ ಬ್ಯಾಳಿ ಬೆಲ್ಲ ತುಪ್ಪವ ತಂದು ನೀಡೋರು ಹಿಡಿ ಹಿಡಿರೆಂದು

ಕ್ಯಾದಿಗೆ ಕುಸುಮ ಮಲ್ಲಿಗೆ ಪತ್ರಫಲಗಳು ಪೂಜಾ ಸಾಧನ ಪದಾರ್ಥಗಳು
ಆದಿಲಕ್ಷ್ಮಿ ದಯ ಆದ ಕಾರಣದಿಂದ ಆದರದಿಂದ ಕೊಡುವರು

ತಂದ ಪದಾರ್ಥ ತನ್ನ ಹೆಂಡತಿ ಕರೆದು ಮುಂದಿಟ್ಟು ವಾರ್ತೆಗಳ ಹೇಳಿದನು
ಇಂದಿರಾದೇವೇರ ಇಂದು ಪೂಜೆಯ ಮಾಡು ಆನಂದವ ಕೊಡುವಳು ನಮಗೆ

ಕಬ್ಬು ಬಿಲ್ಲು ಹಿಡಿವೋ ಕಾಮನ ಮಾತೆ ಮಾಲಕ್ಷ್ಮೀ ಉರ್ವಿಯೊಳು ಉತ್ತಮಳೀಕೆ
ಹಬ್ಬದೂಟಕೆ ಹೇಳಿ ಬಂದೆ ಬ್ರಾಹ್ಮಣಗೆ ಮತ್ತೊಬ್ಬ ಮುತ್ತೈದೆಗೆ ಹೇಳೆಂದ

ಚಿಕ್ಕ ಸೊಸೆ ಎಣ್ಣೆ ಕುಂಕುಮ ಕೈಯಲ್ಲಿ ತಕ್ಕೊಂಡು ನಡೆದಳು ಹಾದಿಯಲಿ
ಚೊಕ್ಕ ಚಿನ್ನದ ಗೊಂಬೆಯಂಥ ಮುತ್ತೈದೆ ತಾಗಕ್ಕನೆ ಬಂದು ಕೇಳಿದಳು

ಹುಡುಗೀ ನೀ ಎತ್ತ ಪೋಗುವಿಯೇ ನಿಮ್ಮ ಮನೆ ಎಲ್ಲೆ ಅಡಿಗೆ ಏನೇನು ಮಾಡುವರು
ಹಿಡಿದೆಣ್ಣೆ ಕುಂಕುಮ ಕೊಡುವುದು ಇನ್ಯಾರಿಗೆ ಕೊಡಬಾರದೇನೆ ನೀ ಎನಗೆ

ದಾರಾದರೇನಮ್ಮ ದಾರಿ ನೋಡದ ಮುಂಚೆ ನೀನೇ ಬಾ ನಮ್ಮ ಮಂದಿರಕೆ
ಹೇಳಿ ಮುತ್ತೈದೆಗೆ ಹಿಗ್ಗಿಲೆ ಬಂದು ಅತ್ತೆ ಮಾವನ ಮುಂದೆ ಅರುಹಿದಳು

ಮನೆಯ ಸಾರಿಸಿ ಸುಣ್ಣ ಕಾರಣೆ ರಂಗೋಲಿಯ ಬರೆದು ಬಾಗಿಲಿಗೆ ಬಣ್ಣವನು
ತಳಿರು ತೋರಣ ಕಟ್ಟಿ ಸರ್ವ ಸಂಭ್ರಮದಿಂದ ಎರೆದುಕೊಂಡರು ಎಲ್ಲರೂ ಬೇಗ

ಕಮಲ ಕ್ಯಾದಿಗೆ ಕಬ್ಬು ಕದಳಿ ಕಂಬವು ಬಾಳೆಗೊನೆ ಕಟ್ಟಿ ಚಿತ್ರ ಮಂಟಪವ
ಎಡಬಲದಲ್ಲಿ ನಾಲ್ಕು ನಂದಾದೀವಿಗೆ ಹಚ್ಚಿ ನಡುವೆ ಹಾಕಿ ಪದ್ಮ ಪೀಠಗಳ

ಚಟ್ಟಿಗೆಯೊಳಗೆ ಅಕ್ಕಿ ಐದು ಫಲವ ತುಂಬಿ ಮುತ್ತೈದೆಯರೆಲ್ಲಾ ನೆರೆದು ಕಟ್ಟಿದರು
ಕೊರಳ ಮಾಂಗಲ್ಯ ಮಾಲಕ್ಷ್ಮೀ ಪ್ರತಿಷ್ಠೆ ಮಾಡಿದರು ಸಂಭ್ರಮದಿ

ಅರಿಷಿಣ ಕುಂಕುಮ ಗಂಧ ಬುಕ್ಕಿಟ್ಟು ಗೆಜ್ಜೆವಸ್ತ್ರವು ಪಾರಿಜಾತ ಸಂಪಿಗೆಯು
ಮುಡಿಸಿ ಮಲ್ಲಿಗೆ ದಂಡೆ ಒಡೆಸಿ ತೆಂಗಿನಕಾಯಿ ಉಡಿ ತುಂಬಿ ಉತ್ತತ್ತಿ ಫಲಗಳು

ಭಕ್ಷ್ಯ ಶ್ಯಾವಿಗೆ ಪರಮಾನ್ನ ಚಿತ್ರಾನ್ನ ಸಣ್ಣಕ್ಕಿ ಶಾಲ್ಯಾನ್ನ ಸೂಪಗಳು
ಚಕ್ಕುಲಿ ಗಿಲಗಂಜಿ ಚೆಂದ ಚಿರೋಟಿ ಹಪ್ಪಳ ಸಂಡಿಗೆ ಆಂಬೋಡೆಗಳು

ಸಕ್ಕರೆ ಘೃತ ಕ್ಷೀರ ಸಕಲ ಪಕ್ವಾನ್ನ ಮಂಡಿಗೆ ಬೀಸೋರಿಗೆ ಗುಳ್ಳೋರಿಗೆಯು
ಚಂದ್ರನಂತೆ ಹೊಳೆವ ಶ್ಯಾವಿಗೆಯ ಫೇಣಿಯು ದಿವ್ಯ ಬುಂದ್ಯ ಬುರುಬುರಿ ಅನಾರಸವು

ಬೇಕಾದ ಬೇಸನ್ನು ಬಿಳಿಯಾದ ಅರಳಿನುಂಡೆ ಮೋತಿಚೂರು ಚೂರ್ಮಲಾಡು
ಸೇತು ಬಿಳುಪಿನ ಚಕ್ರದಂಥ ಜಿಲೇಬಿ ಸುಕಿಯದುಂಡೆ ಮುಖವಿಲಾಸಗಳು

ಹೋಳಿಗೆ ಎಣ್ಣೋರಿಗೆ ಹೊಯ್ಗಡವು ಗೇಹೂರಿ ಕಾಯಿಹಾಲು ಕರಿದ ಹೂರಣ ಕಡುಬು
ತೇಂತೋಳಿ ತಿರುವಿದ ಉದ್ದಿನಬೇಳೆ ಮೆಣಸು ಜೀರಿಗೆ ಇಂಗು ಹಾಕಿದ ಉಪ್ಪಿನ ಕಡುಬು

ಸಾರು ಸಾಂಬಾರ ಪಡುವಲಕಾಯಿ ಪಳದ್ಯ ಉಪ್ಪೇರಿ ಉಪ್ಪಿನಕಾಯಿರಸವು
ಖೀರು ಮಾಲತಿ ಗೌಲಿ ಪರಡಿ ಪರಮಾನ್ನ ಮುಕ್ ಸೌರಿ ಚಟ್ಟಣಿ ಕೋಸಂಬರಿಯು

ಹಾಗಲವು ಹೀರೆ ಸೌತೆ ಹಂದರದ ಅವರೆ ಚೌಳಿ ಬಾಳೆ ಬೆಂಡೆ ಕುಂಬಳವು
ಮಾಗಿದ ಹಲಸಿನ ಕಾಯಿ ಕಲಸಿ ಮೇಲೋಗರ ಗೆಣಸು ಗುಳ್ಳದಕಾಯಿ ಬಜ್ಜಿಗಳು

ಸಬ್ಜಿಭಾತು ಸೌತೆಭಾತು ಕೇಸರೀ ಭಾತು ಕೆನೆಕೆನೆ ಮೊಸರು ಒಗ್ಗರಣೆ
ಹಸಿ ಅಲ್ಲ ಬಿಸಿ ಹಾಲು ಹೊಸಬೆಣ್ಣೆ ಇಂಗುಪ್ಪು ಕಲಸಿ ಬಕಾಳ ಭಾತುಗಳು 

ಮುದ್ದು ಮಾಲಕ್ಷ್ಮೀ ನೈವೇದ್ಯ ಮಾಡಿದರು ಅನಿರುದ್ಧ ಮೂರುತಿ ಸಹಿತಾಗಿ
ಶುದ್ಧ ಸುಣ್ಣವು ಎಲೆ ಅಡಿಕೆ ಏಲಕ್ಕಿ ಪತ್ತರಿ ಕಾಯಿ ಕಾಚು ಲವಂಗ

ಹಚ್ಚಿಕೊಂಡರು ಎಲ್ಲ ಅರಿಷಿಣ ಗಂಧ ಕುಂಕುಮ ಎತ್ತಿ ಚಾಮರವ ಬೀಸುವರು
ಅಚ್ಯುತನ ಅರಸಿ ಅನುಗ್ರಹದಿ ನೋಡಿದಳು ಮೆಚ್ಚಿ ಮುಚ್ಚಿದ ಕಣ್ಣ ತೆಗೆದು

ಅಮರಾದಿ ಸುರರ ಒಡೆಯನ ರಾಣಿ ಲಕ್ಷ್ಮಿಗೆ ಸರ್ವವ ಸಮರ್ಪಣ ಮಾಡಿ
ನಮೋ ನಮೋ ಎಂದು ಕೈಮುಗಿದು ಮಂತ್ರಾಕ್ಷತೆ ಶಿರದಲ್ಲಿ ಹಾಕಿ ವರವ ಬೇಡುವರು

ಹಾಡುತ ಪಾಡುತ ಮಾಡುತಲಾರತಿ ಬೇಡುತ ಮುಡಿದ ಮಲ್ಲಿಗೆಯ
ನೋಡುತ ನಲಿನಲಿದಾಡುತ ತಾ ದಯಮಾಡುತ ಕೊಟ್ಟಳು ವರವ

ಹೊತ್ತು ಬಹಳವಾಯ್ತು ಮುತ್ತೈದೆ ಬರಲಿಲ್ಲ ಮತ್ತೇನು ಇದಕೆ ಉಪಾಯ
ಅಷ್ಟು ಅಡಿಗೆ ಎಲೆ ಬಡಿಸಿ ಕುಂಕುಮ ವೀಳ್ಯವಿಟ್ಟು ಪುಟ್ಟಿಯನು ಮುಚ್ಚಿದರು

ಗಂಡ ಹೆಂಡಿರು ಬಂದ ಬ್ರಾಹ್ಮಣರೊಡಗೂಡಿ ಉಂಡು ವೀಳ್ಯವನೆ ತಕ್ಕೊಂಡು
ಇಂದು ನಮಗೆ ಜಯಶುಭಕಾಲ ಬಂದಿತೀಗ ಎಂದು ಆನಂದ ಹೊಂದಿದರು

ಮರುದಿನ ಸಂಪತ್ತು ಶನಿವಾರ ಹಿಟ್ಟಿನ ಕಡುಬು ಅಂಬಲಿ ಪರಮಾನ್ನ ತಿಳಿ ತಿಳಿದೆಣ್ಣೆ
ಹಿಂಡಿಯ ಪಲ್ಯ ಗೌರೀಪೂಜೆಯ ಮಾಡಿ ಇಟ್ಟರು ನೈವೇದ್ಯವನು

ಎರಡನೇ ಶುಕ್ಕುರುವಾರ ಮುತ್ತೈದೆಗೆ ಧೃಢವಾಗಿ ಹೇಳಿ ಬಾರೆನಲು
ಎಡಗೈಯ ಮುಚ್ಚಿಕೊಂಡು ಎಣ್ಣೆ ಕುಂಕುಮವನು ನಡೆದಳು ಆಗ ಇನ್ನೊಬ್ಬ ಸೊಸೆಯು

ಬಾಜಾರ ಬಿಟ್ಟು ಬದಲು ಮಾರ್ಗ ಹಿಡಿಯಲು
ಹಾದಿಗೆ ಬಂದು ಅಡ್ಡಗಟ್ಟಿ
ಆದಿ ಶುಕ್ಕುರುವಾರ ಹೇಳಿ ಎನ್ನನ್ನು ಬಿಟ್ಟು
ನೀ ದಾರಿಗೆ ಹೇಳುವಿಯೇ ಭೋಜನಕೆ

ನಮ್ಮ ಗೊಡವೆ ಯಾತಕಮ್ಮ ನಿನಗೆ ಸುಮ್ಮನೆ ಹೋಗು
ಶುಕ್ಕುರುವಾರದಲಿ ನಿನ್ನ
ಎಲೆಯ ಬಡಿಸಿಟ್ಟಿದ್ದು ಇಂದಿಗೆ ಅದೆ
ಉಣಬೇಕಾದರೆ ಹೋಗಮ್ಮ

ತಂಗಳೂಟವನು ಉಂಬೋ ಕಂಗಾಲಿ ನಾನಲ್ಲ
ಬಂಗಾರದಂಥ ಮುತ್ತೈದೆ
ತಿಂಗಳಾಗಲಿ ಹಂಗುನೂಲು ಕಟ್ಟಿ ನಿನ್ನೆಲೆ
ತಂಗಳು ನಿನಗೆ ಉಣಿಸುವೆನು

ಬಡಿವಾರ ಮಾತು ಯಾಕೆ ಬಡಸಿಟ್ಟ ಎಲೆ ಉಂಬೋ
ಬಡವಿ ಅಲ್ಲ ನಾ ಭಾಗ್ಯವಂತೆ
ತಡೆಯದೆ ಬರುವೆನು ತಾ ಎಣ್ಣೆ ಕುಂಕುಮ
ಹಿಡಿದೆಳಕೊಂಡು ನಡೆದಳು

ಕೊಟ್ಟೆಣ್ಣೆ ಕುಂಕುಮ ತಟ್ಟನೆ ಬಂದಳು
ಅಷ್ಟು ವಾರ್ತೆಗಳ ಹೇಳಿದಳು
ದಿಟ್ಟ ಮುತ್ತೈದೆ ದೇಶದ ಮ್ಯಾಲೆ ಕಾಣೆನೆಂದು
ಎಷ್ಟು ಹೇಳಲಿ ಆಕೆಯ ಚೆಲ್ವಿಕೆಯ

ಅಡಿಗೆಯಾದವು ಗೌರೀಪೂಜೆಗಳಾದವು
ಬಡಿದವು ಮೂರು ಗಂಟೆಗಳು
ಉಡಿ ಕುಂಕುಮ ಅರಿಷಿಣ ಬಡಿಸಿಟ್ಟರು ಒಂದೆಲೆ
ಸಡಗರದಿಂದ ಉಂಡರಾಗ

ಮೂರನೇವಾರ ಮುತ್ತೈದೆಗೆ ಹೇಳುವರು
ಮತ್ತ್ಯಾರೆಂದು ವಿಚಾರ ಮಾಡುವರು
ಮಾವನವರೆ ಎನ್ನ ಮಾತು ನೋಡಿರಿ ಎಂದು ತಾ
ಹೋದಳು ಇನ್ನೊಬ್ಬ ಸೊಸೆಯು

ಮುಡಿಬಾಗಿ ಮುಚ್ಚಿ ಕೊಂಡೆಣ್ಣೆ ಕುಂಕುಮವನ್ನು
ಹಿಡಿದಳೂ ಇನ್ನೊಂದು ಓಣಿಯನು
ಬಡ ಬಡ ಬಂದು ಹಿಡಿದೆಣ್ಣೆ ಕುಂಕುಮ
ಕೊಡುವುದು ಇನ್ಯಾರಿಗೆ ಔತಣವ

ಔತಣವಲ್ಲಮ್ಮ ಅತಿ ಬಡವರು ನಾವು
ಗತಿಯಿಲ್ಲ ಗೌರಿ ಹಬ್ಬಕ್ಕೆ
ಸುತರು ಆಡ ಹೋಗ್ಯಾರ ಹುಡುಕುತಾ ಬಂದೆ
ಬಿಡು ದಾರಿ ಈ ಪರಿ ಬಯ್ಯುವರು ಎನ್ನ ಮನೆಯಲಿ

ಉಗುಲುತಗಲಿನ ಮಾತಿನ ಬಗೆಯ ನಾ ಬಲ್ಲೆನೆ
ಹಗರಣಗಿತ್ತಿ ನೀ ಹೌದೆ
ಮೊದಲ ಶುಕ್ಕುರುವಾರ ಹೇಳಿ ಎನ್ನನು ಬಿಟ್ಟು
ಬದಲು ಮುತ್ತೈದೆಗೆ ಹೇಳುವರೆ

ಎರಡು ವಾರ ಔತಣ ಬುರುಡಿ ಊಟಾಯಿತು
ಬರಡು ಎಮ್ಮೆ ಹೈನ ಉಂಡಂತೆ
ಕಡಲೆ ಹೂರಣ ಕಡುಬು ಕಟದಬೆಣ್ಣೆ
ಕಾಸಿ ತುಪ್ಪವ ಬಡಿಸು ಎನಗೆ

ಮೆಚ್ಚಿ ಕೊಂಡು ಆಕೆ ಮಾತಿಗೆ ಮರುಳಾದಳೂ
ಹಚ್ಚಿ ಕುಂಕುಮ ಎಣ್ಣೆ ಕೊಟ್ಟು
ನಿಶ್ಚಯವೇನಮ್ಮಾ ನೀ ಬರುವುದು ಎಂದರೆ
ಈ ಕ್ಷಣ ಬರುವೆನು ಹೋಗೆಂದಳು

ಬಂದು ಹೇಳಿದಳಾಕೆ ಚೆಂದ ಚೆಲ್ವಿಕೆ ಮಾತು
ಒಂದೊಂದು ಮಾಡಿ ವರ್ಣಿಸುತಾ
ಇಂದಾಕೆ ಮನಕೆ ಬಂದಂತೆ ಅಡಿಗೆ
ಮಾಡೋಣೆಂದು ಸಂತೋಷ ಪಡುವರು

ಕಡಲೆ ಹೂರಣ ಗಸಗಸೆ ಕೊಬ್ಬರಿ ಏಲಕ್ಕಿ
ಪುಡಿ ದ್ರಾಕ್ಷಿ ಉತ್ತತ್ತಿ ಹಳಕು
ಕಲಸಿ ಕಲ್ಲುಸಕ್ಕರೆ ಕರಿಗಡುಬು ಬೆಣ್ಣೆ ಕಾಸೀ
ತುಪ್ಪವು ಸೋಸಿಲಿಂದ

ಸಿರಿದೇವಿ ಪೂಜೆ ನೈವೇದ್ಯಗಳಾದವು
ಹೊರಗೆ ಹತ್ತು ತಾಸು ಮೀದವು
ಬರಲಿಲ್ಲ ಮುತ್ತೈದೆ ಎಂದು ಎಲೆ ಬಡಿಸಿಟ್ಟು
ಸರ್ವರೂ :ಊಟವನು ಮಾಡಿದರು

ಹುಟಿದ ಮ್ಯಾಲೆ ಇಂಥ ಕಡುಬು ಕಂಡಿದ್ದಿಲ್ಲ
ನಮ್ಮ ಹೊಟ್ಟೆಗೆ ಉಂಡವರು ನಾವಲ್ಲ
ಮುತ್ತೈದೆ ಪುಣ್ಯದಿಂದ ಈ ಊಟ ದೊರಕಿತು
ಎಂದು ಅಷ್ಟರೂ ನಗುತ ನುಡಿದರು

ನಾಲ್ಕನೇವಾರ ನಾ ಹೇಳಿ ಬರುವೆನೆಂದು
ಆಕೆ ಹೋದಳು ಹಿರಿಮಗನ ಅರಸಿ
ಬೇಕಾದವರು ಬಂದು ಹಾಕ್ಯಾಡಲಿ ಎನ ಕೂಡ
ಯಾಕೆ ಎನಗೆ ಒಬ್ಬರ ಭಿಡೆಯ

ದೊಡ್ಡ ಅಗಸೆಯ ಬಿಟ್ಟು ದಿಡ್ಡಿ ಬಾಗಿಲ ಮುಂದೆ
ಸದ್ದು ಮಾಡದೆ ಬರುತಿರಲು
ವಜ್ರದ ಗೊಂಬೆಯಂತೆ ಹೊಳೆವೋ ಮುತ್ತೈದೆ
ನಿಂತಿದ್ದಳಾಗ ಎದುರಿಗೆ ಬಂದು

ಸರ್ವರೊಳಗೆ ಹಿರಿಸೊಸಿಯು ನಾ ಎಂಬಂಥ
ಗರ್ವ ಅಹಂಕಾರದಿ ನೀನು
ಸರಿಯಾಗಿ ಮೂರುವಾರ ಹೇಳಿ ಬಿಟ್ಟು ಎನ್ನ
ಕರೆಯದೆ ಉಂಬುವ ಕಾರಣ ಏನೆ

ಕರಿಲಿಕ್ಕೆ ಬರಲಿಕ್ಕೆ ಕಾಣೆ ನಿಮ್ಮ ಮನೆ ನಾನು
ತಿರುಗೂವಿ ನಾರದರಂತೆ
ಇರುವ ಮಂದಿರವ ತೋರಿದರೆ ಈಗ ನಾ ಬಂದು
ಕರೆದುಣಿಸುವೆನು ನಿಮ್ಮನ್ನು

ದೂರುಂಟು ನಮ್ಮ ಮನೆ ದಾರಿ ಅಸಾಧ್ಯವು
ನೋಡಿ ಬಂದವರು ದಾರಿಲ್ಲ
ಆಹಾರ ನಿದ್ರೆ ಸಂಸಾರ ಸಮುದ್ರವ
ಮೀರಿದವರಿಗೆ ಕಾಂಬುವುದು

ಮಧ್ಯಾಹ್ನದ ಹೊತ್ತಿಗೆ ಸಿದ್ಧಾಗಿ ಬರುವೆನು
ಭದ್ರವಾಗಿ ವಚನ ಕೊಡುವೆನು
ಶುಭವಾದಂಥ ಕೊಬ್ಬರಿ ಭಾರೀ ಬಟ್ಟಲು
ತರಿಸಿ ಹುರಿಗಡಲೆ ತುಂಬು ಉಡಿಯ

ಆಗರದೊಳಗಿನ ಅರಗಿಣಿ ಮರನೇರಿ
ಮಾಗಿದ ಫಲವ ಮೆದ್ದಂತೆ
ಬ್ಯಾಗ ಬಂದು ಈಗ ನಿಮ್ಮನೆಯಲ್ಲಿ ಊಟವನುಂಡು
ತೇಗುತ ತೃಪ್ತ್ಯಾಗಿ ಬರುವೆ

ಮಾಯಾದೇವಿಯ ಮಾಯಾ ಮಾತಿಗೆ ಮರುಳಾಗಿ
ತಾ ಕೊಟ್ಟೆಳೆಣ್ಣೆ ಕುಂಕುಮವ
ನಾ ಹೋದ ಕಾರ್ಯ ಕಾಯಿ ಆಗೋದೇ ಹಣ್ಣೆಂದು
ಹೇಳಿಕೊಂಡಳು ಹೇಳಿ ಕೊಂಡಳು ಶಿಫಾರಸ್ಸು

ವರಗೌರಿ ಪೂಜೆ ನೈವೇದ್ಯಗಳಾದವು
ಹೊರಗೆ ಆರು ಗಂಟೆ ಬಡಿದವು
ಬರಿಯ ಭರಾಸು ಮಾತಿನ ಜಾಣೆ ಮುತ್ತೈದೆ
ಬರಲಿಲ್ಲವೆಂದು ನುಡಿದರು

ಮತ್ತೊಂದು ಎಲೆ ಬಡಿಸಿಟ್ಟು ಮೃಷ್ಟಾನ್ನಗಳ ಅಷ್ಟರೂ
ಊಟವನು ಮಾಡಿದರು
ಕರ್ಪೂರದ ಅಡಿಕೆ ವೀಳ್ಯಗಳ ತಕ್ಕೊಂಡರು
ಅತ್ಯಂತ ಹರುಷದಿಂದ ಇರುವರು

ಬಂದಿತೀಗ ಐದನೇವಾರ ಮುತ್ತೈದೆಗೆ
ಇಂದು ನೀ ಹೇಳಿಬಾರೆನುತಾ
ಹೆಂಡತಿ ಕರೆದು ಹೇಳಿದ ಕುಂಕುಮ ಎಣ್ಣೆ
ತಕ್ಕೊಂಡು ತಾ ನಡೆದಳು ಬ್ಯಾಗ

ಬೀದಿ ಬಿಟ್ಟು ಬದಲು ಹಾದಿಗೆ ಬಂದಳಾ
ಹಾದಿಗೆ ಬಂದು ಅಡ್ಡಗಟ್ಟಿ
ನೀ ದಯ ಮಾಡಿ ಬಂದೆ ಎನಗೆ ಔತಣವ
ಆದರದಿಂದ ಹೇಳುವುದಕೆ

ಜಪ್ಪಿಸಿಕೊಂಡು ಔತಣವ ತಕ್ಕೊಂಡು ನೀ
ತಪ್ಪಿಸಿಕೊಂಡು ಹೋಗುತಿರೆ
ಒಪ್ಪತ್ತಾದರೂ ಊಟ ಮಾಡದವರ ಮಾತಿಗೆ
ಒಪ್ಪಿಕೊಂಬುವುದು ಹ್ಯಾಗೆ ಹೇಳಮ್ಮಾ

ಬಂದ ಔತಣ ಗಂಡ ಮಕ್ಕಳು ಭಾಗ್ಯ
ಒಲ್ಲೆ ಎಂಬುವರು ಉಂಟೆ ಲೋಕದಲಿ
ಕಂಡಲ್ಲಿ ಔತಣ ಹೇಳಿ ಕರೆಯದೆ ಇರುವುದೇನು
ಚೆಂದವೇ ನಿಮ್ಮ ನಡತೆ

ಲಕ್ಷಣವಂತೆ ನಾ ಎದುರಿಗೆ ಬಂದರೆ
ಲಕ್ಷಣ ಶುಭ ಶಕುನಗಳು
ಇಕ್ಷು ಮ್ಯಾಲೆ ಜೇನು ಇಟ್ಟಂತೆ ಬಂದು ಈಗ
ಲಕ್ಷ್ಮೀ ಸರಿಗೆ ನಾ ಕೂಡುವೆನು

ಅವಕಾಶ ಕೊಡುವೆನು ಸಾವಕಾಶ ಅಡಿಗೆ ಮಾಡು
ದಿವಾಕರ ಮುಣುಗೋ ಕಾಲದಲಿ
ದನಕರು ಬರುವೋ ವ್ಯಾಳ್ಯಕ್ಕೆ ನಾ ಬರುವೆನು
ಮನಕೆ ಸಂದೇಹ ಬ್ಯಾಡಮ್ಮಾ

ಅಂಗಳ ಸಾರಿಸಿ ರಂಗು ಕಾರಣೆ ಕೊಟ್ಟು
ರಂಗವಲ್ಲಿಯ ಚಿತ್ರ ಬರೆದು
ಅಂಬರೂದಿನ ಕಡ್ಡಿ ಅರಮನೆ ಬಾಗಿಲ
ಮುಂದೆ ಒಂದು ಹಚ್ಚಿಡಿಸು ಹಿಲಾಲು

ಮಡಿಪೀತಾಂಬರವುಟ್ಟು ಮಡಿಸೀರೆಯನು ಬಿಟ್ಟು
ಕಡಗ ಕಂಕಣ ಕೈಯಲ್ಲಿಟ್ಟು
ಧೃಢವಾದ ಮುಕುರ ಒಂದಡ್ಡಿಕೆ ಬುಗುಡಿ
ಬಾವುಲಿ ಹೊಳೆಯುತಲಿ

ಕಂಚು ಕಳಶ ಕದಲಾರತಿ ತಕ್ಕೊಂಡು
ಮುಂಚೆ ಬಂದು ಎದುರುಗೊಂಡರೆ ಎನ್ನ
ಮಿಂಚಿನಂತೆ ಹೊಳೆವೋ ಚಿನ್ನದ ಹಲಗೆಯ ತೂಗೋ
ಮಂಚದಿ ಬಂದು ಕೂಡುವೆನು

ಅರಮನೆಯಲ್ಲಿ ನಾವಿರುವೋ ಮೂರಂಕಣ ಮನೆ ಮುಂದೆ
ಮುರುಕು ಚಪ್ಪರವು
ಮರದ ಮಣೆಯು ನಮ್ಮಲ್ಲಿರುವೋದು ಚಿನ್ನದ ಹಲಗೆ
ಮಂಚ ಎಲ್ಲಿ ತರುವೋಣ

ಮಡಿಸೀರೆ ಬಿಟ್ಟರೆ ಇನ್ನೊಂದು ಕೋರಿಗಳಿಲ್ಲ
ಮಡಿ ಪೀತಾಂಬರ ನಾ ಕಂಡಿಲ್ಲ
ಹರಡಿ ಕಂಕಣವೆಲ್ಲೆ ಕರಿಯ ಕಾಜಿನ ಬಳೆ
ಇರಲಮ್ಮ ನಿಮ್ಮ ದಯ ನಮಗೆ

ಬಂಗಾರದ ಬಾಳೆಲಿ ಬೆಳ್ಳಿ ಬಟ್ಟಲು
ಮಂಡಿಗೆ ಹಾಲು ತುಪ್ಪಗಳು
ಉಂಡು ಕೂಡುವೆನು ಕುಂದಣ ಕೆತ್ತಿದ ತಬಕಿನಲಿ
ತಂದು ನೀಡೆನಗೆ ತಾಂಬೂಲ

ಹುಟ್ಟಿದ ಮೇಲೆ ಈ ಬೆಟ್ಟಿಲಿ ಎಲೆಯ ಸುಣ್ಣ ಹಚ್ಚಿ
ಹಾಕಿಕೊಂಡು ನಾನರಿಯೆ
ಕರ್ಪೂರದ ಅಡಿಕೆ ಮುತ್ತಿನ ಸುಣ್ಣ ಎಳೆ ಎಲೆಗೆ ಹಚ್ಚಿ
ನೀ ಮಡಚಿ ಕೊಡು ಎನಗೆ

ಬಂಗಾರ ಎಂಬುದು ನಮ್ಮ ಕಂಗಳು ಕಂಡಿಲ್ಲ
ಮಂಗಳ ಸೂತ್ರದ ಒಂದು ಹೊರತು
ಕುಂದಣ ತಬಕು ಎಲ್ಲಿ ಒಡಕೊಂದು ಹಿತ್ತಾಳೆ
ತುಂಡಾದ ತಾಟೊಂದು ಇರುವುದು

ಬುಟ್ಟದಾರಿ ಬುಗುಡಿ ಅಂಚು ಜರತಾರಿ
ಅಚ್ಚು ಚಿನ್ನದ ಥಳಕಿರವೋ
ಕುಪ್ಪುಸ ಹೊಲಿಸಿಕೊಟ್ಟರೆ ಒಂದರೆ ಕ್ಷಣ
ತೊಟ್ಟು ನಿನಗೆ ಕೊಟ್ಟು ಬರುವೆ

ಹುಟ್ಟಾ ಬಡವರು ನಾವು ಅಷ್ಟದರಿದ್ರರು
ನಿತ್ಯ ಯಾತ್ರೆಯಲಿ ಬದುಕುವರು
ಚಿತ್ತಕ್ಕೆ ತಂದು ನೀವು ದಯಮಾಡಿ ಬರುವೋದು
ಎಂದು ಹಸ್ತವ ಮುಗಿದು ಹೇಳಿದಳು

ಕಡೆಯ ವಾರವು ಕಾಮಧೇನುವಿನಂತೆ ಬರುವೆನು
ಪಡೆದುಕೋ ಮನದ ಇಷ್ಟಾರ್ಥ
ನಡೆದು ಬರುವೆ ನಾಲ್ಕುವಾರದ ದಕ್ಷಿಣಿ
ಕೊಡು ನಾ ಬಿಡುವವಳಲ್ಲ

ಒಂದೊಂದು ಮಾತನಾಡವಳು ಮುತ್ತೈದೆ
ಬಾಯಿಂದ ಮುತ್ತು ಉದುರುವಂದದಲಿ
ಆನಂದದಿಂದ ಹಚ್ಚಿ ಕುಂಕುಮ ಎಣ್ಣೆ ಕೋಟ್ಟಾಗ
ಬಂದಳು ತನ್ನ ಮಂದಿರಕೆ

ಸಾಧ್ಯವಲ್ಲವು ಭಾಳ ಅಸಾಧ್ಯ ಮುತ್ತೈದೆ
ನಿಂತಿದ್ದಳು ಎನ್ನ ಎದುರಿಗೆ ಬಂದು
ನಿದ್ರೆಯೋ ಕನಸೋ ಎಚ್ಚರಿದ್ದಿಲ್ಲ ಎನಗೊಂದು
ನಿರ್ಧಾರವಾಗಿ ತಿಳಿಯದು

ಗತ್ತಿನ ಮಾತು ಚಮತ್ತು ಚಾತುರ್ಯ
ಸಂಪತ್ತಿನ ಸೌಭಾಗ್ಯವಂತೆ
ಎಷ್ಟು ಹೇಳಲಿ ಆಕೆ ಚೆಲ್ವಿಕೆ ಚೆಂದ
ಸಾಕ್ಷಾತ ವಿಷ್ಣುವನ್ನಾದರೂ ಮೋಹಿಸುವಳು

ನಮ್ಮ ಪುಣ್ಯದ ಫಲ ಒದಗಿ ಬಂದಿದ್ದರೆ
ಮನ್ನಿಸಿ ಮನೆಗೆ ಬರುವಳು
ಇನ್ನೇನು ಮಾಡೋಣ ಇದಕೆ ಎಂದು ಆಲೋಚಿಸಿ
ಇನ್ನೊಬ್ಬ ಮುತ್ತೈದೆಗೆ ಹೇಳಿದರು

ಪಾಲು ಸಕ್ಕರೆ ಪಂಚಭಕ್ಷ್ಯ ಪರಮಾನ್ನವು
ಸಾರು ಶಾಕಗಳು ಶಾಲ್ಯಾನ್ನ
ಮಾಲಕ್ಷ್ಮೀ ಪೂಜೆ ನೈವೇದ್ಯ ಮಾಡಿ
ಮಂಗಳಾರತಿ ಬೆಳಗುವರು

ಪಕ್ಷಿವಾಹನ ಪುರುಷೋತ್ತಮನಾದ ಅಧೋಕ್ಷಜ
ಆ ಪರಮಾತ್ಮ ನ ಅಕ್ಷದ ಸುತ ಅಡಗುವ ಕಾಲವನ್ನು
ನಿರೀಕ್ಷಿಸಿ ನೋಡುತಿಹರು

ಅತ್ತ ಮಾಲಕ್ಷ್ಮೀ ತಾ ಪಚ್ಚಕರ್ಪೂರ ಪುನುಗಿನ
ಎಣ್ಣೆ ಸಂಪಿಗೆ ತೈಲ
ಕಸ್ತೂರಿ ಬೆರೆಸಿದ ಬಿಸಿನೀರು ಅರಿಷಿಣ
ಹಚ್ಚಿ ತಾ ಎರಕೊಂಡಳಾಗ

ಸುಳಿಗುರುಳು ಹಿಕ್ಕೆ ಬೈತಲೆ ತಿದ್ದಿ ತಳಪು ಹಾಕಿ
ಚೌರಿ ರಾಗಟೆ ಚಂದ್ರ ಗೊಂಡ್ಯ
ಗಿಳಿಗಿಜ್ಜೆ ಹೆರಳು ಬಂಗಾರ ಕ್ಯಾದಿಗೆ ಮ್ಯಾಲೆ
ಅರಳು ಮಲ್ಲಿಗೆ ಮಾಲೆ ಮುಡಿದು

ಬಿಚ್ಚಿ ನಾನುಟ್ಟಳು ಬಿಳಿಯ ಪೀತಾಂಬರ
ಅಚ್ಚ ಜರದ ಸೆರಗ ಹೊದ್ದು
ಕುತ್ತಣಿ ಕುಬುಸ ಮುತ್ತಿನ ಗೊಂಡ್ಯ ತೋಳಿಗೆ
ಕಟ್ಟುತಿದ್ದಳು ಬಾಜು ಬಂದು

ವಜ್ರದ ವಂಕಿಯು ನಾಗಮುರಿಗೆ ನಾಗಡ್ಡಿಕೆ
ಗೆಜ್ಜಡ್ಡಿಕೆಯು ಕೊರಳಲ್ಲಿ
ದೊಡ್ಡ ಸರಿಗೆ ಮ್ಯಾಲೆ ಅಡ್ಡಿಕೆ ಮುತ್ತಿನ ಕೆಂಪು
ಥಳಕು ಜಳಕು ಹೊಳೆಯುತಲಿ

ಪುತ್ಥಳಿಸರ ಏಕಾವಳಿ ಚಂದ್ರಹಾರ
ಕಟ್ಟಿದಳಾಗ ಕಂಠಿ ಕಟ್ಟಾಣಿ
ಪಚ್ಚ ಮಾಣಿಕ ರತ್ನಪದಕ ನಿರಿಗಳಲಿ
ಜತ್ತಾಗಿ ನಲಿದಾಡುತಿರಲು

ಪರಡಿ ಕಂಕಣ ಹಸ್ತಕಡಗ ಕಮಲದ್ವಾರ್ಯ
ನಡುವಿಗೆ ನವರತ್ನ ಪಚ್ಚೆ
ಬಿಡಿಮುತ್ತು ಬಿಗಿದ ವಜ್ರದ ವಾಲೆ ಬುಗುಡಿ
ಚಂದ್ರಮುರುವು ಮುತ್ತಿನ ಸರಪಳಿಯು

ಸಾಲುಕುಂದಣದ ಆಣಿ ಮುತ್ತಿನ ಮುಕುರ್ಯ
ಬುಲಾಕು ಬಲಕೆ ವಜ್ರದ ಹರಳು
ತೀಡಿ ಕಾಡಿಗೆ ಹಚ್ಚಿ ತಿದ್ದಿ ಕುಂಕುಮವ
ಹಣೆ ಮ್ಯಾಲೆ ಹಚ್ಚಿ ಜೋಳದಕುಡಿಯಂತೆ

ಪಿಲ್ಯ ಕಾಲುಂಗುರ ಲುಲ್ಲು ಪೈಜಣ ರುಳಿ
ಘಲ್ಲು ಘಲ್ಲೆಂತ ಹೆಜ್ಜೆನಿಡುತ
ಗೆಲ್ಲು ಮಿಂಚುಗಳಂತೆ ಥಳಥಳಿಸುತ ಬೀದಿಯಲ್ಲಿ
ಬಂದಳು ಗಜಗಮನೆ

ಬೆಳ್ಳನೆ ಬೆಳ್ಳಿಯ ಮಿಳ್ಳೆ ತನ್ನ ಉಂಗುರ
ಬೆರಳಿನಿಂದ ಹಿಡಿದು ಬೀಸುತಲಿ
ತೆಳ್ಳನೆ ಪಾದ ಪುತ್ಥಳಿಯಂತೆ ಹೊಳೆಯುತ
ಚಿನ್ನ ಬಳ್ಳಿಯಂದದಿ ಬಳುಕುತಲಿ

ರಾಜಾಧಿರಾಜರೆಲ್ಲರು ನಿಂತು ನೋಡುತ
ಲಾಜಾವರದ ಗೊಂಬೆಯಂತೆ
ಭೋಜನಕೆತ್ತ ಪೋಗುವಳೋ ನೋಡುವಣೆಂದು
ಬಹು ಜನರು ಹಿಂದೆ ನಡೆದರು

ದಾವಲೋಕದಿಂದ ಇಳಿದಿಲ್ಲಿ ಬಂದಳು
ದಾರ ಸತಿಯೋ ದಾರ ಸುತಳೋ
ಮೋರೆ ನೋಡಲು ಮೂರ್ಛೆ ಬರುವುದು ಒಯ್ಯಾರಿ
ಮುಂಗಾರು ಮಿಂಚುಗಳಂತೆ ತೋರುವಳು

ಇಂದ್ರನ ಶಚಿಯೋ ಚಂದ್ರಮನ ರೋಹಿಣಿಯೋ
ಸುಂದರ ಸೂರ್ಯನರಸಿ ಸಂಜ್ಞೆಯೋ
ಗಾಂಧರ್ವರರಸಿಯೋ ಗಗನದಿಂದ ಇಳಿದಂಥ
ಗಂಗಾ ಶ್ಯಾಮಲ ಸೀತಾಂಗನೆಯೋ

ರತಿಯೋ ರೇವತಿಯೋ ಅರುಂಧತಿಯೋ ಪಾರ್ವತಿಯೋ ಭಾರತಿ
ಭಾಗ್ಯವಂತೆ ಸರಸ್ವತಿಯೋ
ಪತಿಗಳು ಐವರು ಸತ್ಯ ಪಾಂಡವರರ ಅರಸಿ
ದ್ರೌಪದಿ ಬಂದಳಿಲ್ಲಿಗೆ ಎಂಬುವರು

ಸತ್ಯಭಾಮೋ ರುಕ್ಮಣೀ ಜಾಂಬವಂತೀ ಆಷ್ಟಮ
ಸ್ತ್ರೀಯರೊಳಿಗಿದಾರೋ ಇವತ್ತು
ಸಂಪತ್ತು ಶುಕ್ಕುರುವಾರ ಸಾಕ್ಷಾತ
ಲಕ್ಷ್ಮಿಯೇ ಬಂದಳು ಎಂಬುವರು

ಹಸ್ತವ ಮುಗಿವರು ಸಾಷ್ಟಾಂಗಕ್ಕೆರಗೋರು
ಇತ್ತ ಬನ್ನಿ ಎಂದು ಕರೆವರು
ಶ್ರೇಷ್ಠ ವೈಕುಂಠ ಮೋಕ್ಷಪುರ ಮಾಲಕ್ಷ್ಮೀ
ಬಿಟ್ಟಿಲ್ಲೆ ಬಂದಳೆಂಬುವರು

ಮುಡಿಬಾಗಿ ನಡೆಯುತ ಮುಡಿದ ಹೂವು ಉದುರುತಾ
ಮುಗುಳ್ನಗೆಯಿಂದ ತಾ ನಗುತಾ
ಎಡಬಲದಲಿ ಓರೆನೋಟವ ನೋಡುತಾ
ನಡೆದಳು ಬಡವರ ಮನೆಗೆ

ಸಿರಿ ಬಂದು ತಾ ಕಣ್ಣ ತೆರೆದು ನೋಡುತಲಿರೆ
ಅರಮನೆ ಆಯಿತು ಆ ಕ್ಷಣದಿ
ಸುರಗಿ ಮಲ್ಲಿಗೆ ಶ್ಯಾವಂತಿಗೆ ನಾನಾ ಫಲಗಳಿದ್ದ
ವನವಾಯಿತು ಆ ಮನೆ ಸುತ್ತ

ಗಚ್ಚಿನಂಗಳ ವೃಂದಾವನ ಕಟ್ಟೆ ಕಾರಂಜಿ
ಹಚ್ಚನೆ ಗಿಳಿ ಹಂಸ ಗರುಡ ಪಕ್ಷಿ
ನವಿಲು ಪಾರಿವಾಳ ಪಾಂಚಾಲಿ ವೃಕ್ಷ ಅಶ್ವತ್ಥಗಿಡಗಳು

ಪಚ್ಚದಂತೆ ಹೊಳೆವೋ ಶ್ರೀ ತುಳಸಿದೇವಿಯರಲ್ಲಿ
ಅಚ್ಚ ವಜ್ರದ ಗೊಂಬೆಯಂತೆ
ಲಕ್ಷ್ಮಿ ತಾ ನಲಿನಲಿಯುತಲಿ ರಚಿತವಾದ
ಕುರ್ಚಿಯಲಿ ಬಂದು ಕೂಡುವಳು

ಬಡವನ ಮಡದಿಗೆ ಒಡವೆ ವಸ್ತ್ರವಾದವು
ಹರಡಿ ಕಂಕಣವು ಕೈಯಲ್ಲಿ
ಮಡಿಸೀರೆ ಉಟ್ಟಿದ್ದು ಹೋಗಿ ಮಡಿಪೀತಾಂಬರವಾಯ್ತು
ಅಡಿಗೆರಗಿ ಎದುರುಗೊಂಬುವರು

ಗಂಧ ಕುಂಕುಮ ಅರಿಷಿಣ ದಿವ್ಯ ಬುಕ್ಕಿಟ್ಟು
ತಂದು ಹಚ್ಚಿ ಕಾಲ ಜಾವಡಿಯ
ದುಂಡು ಮಲ್ಲಿಗೆ ಪಾರಿಜಾತ ಸಂಪಿಗೆ ಮಾಲೆ
ದಂಡೆ ಮುಡಿಸಿ ಜಡೆಮುಡಿಗೆ

ಕದಳಿ ಫಲಗಳು ಕೊಬ್ಬರಿಬಟ್ಟಲೊಳಗೆ ಹುರಿಗಡಲೆ
ಹಾಕಿ ಉಡಿಯ ತುಂಬುವರು
ಹಿಡಿದು ಕುಂದಣದ ಹರಿವಾಣದೊಳು ಹಾಡಿ
ಪಾಡುತ ಮಾಡಿ ಮುತ್ತಿನಾರತಿಯ

ಇಂದಿರಾದೇವಿ ಆನಂದದಿ ಕುಳಿತಿರೆ
ಇಂದ್ರಾದಿ ಸುರರು ನೋಡುತಲಿ
ಮಂದಾರ ಮಲ್ಲಿಗೆ ಮಳೆಯ ಕರೆದರಾಗ
ದುಂದುಭಿ ಭೇರಿ ಬಡಿದವು

ಎಡಬಲದಲ್ಲಿ ಚಾಮರವನ್ನು ಬೀಸೋರು
ಹಿಡಿದು ಹಿಲಾಲು ನೋಡುವರು
ಬಿಡಿಮಲ್ಲಿಗೆ ತಂದು ನಡೆಮುಡಿ ಹಾಸೋರು
ಸಡಗರದಿಂದ ಎದ್ದಳಾಗ

ಲಕ್ಕುಮಿದೇವಿ ತಾ ಗಕ್ಕನೆ ಬಂದಳು
ಹೊಕ್ಕಳು ದೇವರ ಮನೆಯ
ಚೊಕ್ಕ ಚಿನ್ನದ ಕೊಡವಾಗಿ ತಾ ತೂಗೋ
ಮಾಣಿಕ್ಯ ಮಂಚದಲು ಕೂಡುವಳು

ರನ್ನ ಮಾಣಿಕ್ಯ ರತ್ನ ಹೊನ್ನಹಣವು ಚೊಕ್ಕ
ಚಿನ್ನದ ಮೊಹರ ವರಾಹಗಳು
ಬಣ್ಣದ ಹವಳ ಮುತ್ತು ಭಾರಿ ಬಂಗಾರದಂದಿಗೆಯ
ಬಿಂದಿಗೆ ನೋಡುತಿಹರು

ಶುಕ್ಕುರುವಾರ ಶುಭಕಾಲ ಇವರಿಗೆ
ಸಿಕ್ಕಳು ಸಿಂಧುನಂದನೆಯು
ಬೊಕ್ಕಸದ ಭಾಗ್ಯ ಭಂಡಾರದ ಜಯಲಕ್ಷ್ಮೀ
ದಕ್ಕಿದಳು ಇವರಿಗೆ ಎಂಬುವರು

ಕರ್ಪೂರದಾರತಿ ಮಾಡಿ ಕಾಯಿ ಒಡೆದು
ಬುಕ್ಕಿಟ್ಟು ಕುಂಕುಮ ಹಚ್ಚುವರು
ಪಟ್ಟಣದ ಜನರು ಪತ್ತಲ ಸೀರಿ ಕುಪ್ಪುಸ
ಲಕ್ಷ್ಮಿಗೆ ಉಡುಗೊರೆಯ ಕೊಡುವರು

ನಾಲ್ಕುವಾರದ ಎಲೆ ತೆಗೆದು ನೋಡುತಲಿರೆ
ಹಾಕಿದ ಅನ್ನವು ಆಣಿಮುತ್ತು
ಶಾಕ ಪಾಕವು ಪಲ್ಯ ಪರಮಾನ್ನ ಭಕ್ಷ್ಯ
ಬಂಗಾರ ರಜತ ಬಾಳೆಯೆಲೆಯು

ಬಂದು ನೋಡುತ ನಾಲ್ಕು ಮಂದಿ ಸೊಸೆಯರು
ಹಂಚಿಕೊಂಡರು ಆಗ ಒಂದೊಂದು ಎಲೆಗಳ
ಹಿಂದೆ ಮಾಡಿದ ಪುಣ್ಯ ಒಂದು ಒದಗಿತು ನಮಗೆಂದು
ಸಂತೋಷ ಪಡುವರು

ಬಂದ ಮುತ್ತೈದೆ ಬ್ರಾಹ್ಮಣರೊಡಗೂಡಿ ಕೊಂಡುಂಡು
ವೀಳ್ಯವನೆ ತಕ್ಕೊಂಡು
ಮಂದಗಮನೆ ಲಕ್ಷ್ಮೀ ಮಹಿಮೆ ಕೊಂಡಾಡುತ
ಆನಂದವಾಗಿ ಇರುತ್ತಿದರವರು

ಮುದದಿಂದ ಮೂರ್ಜಗದ ಒಡೆಯ ನಾರಾಯಣನ
ಎದೆಯಲ್ಲಿ ಇರವೋ ಲಕ್ಷ್ಮೀ ನಮ್ಮ
ಸದನಕೆ ಬಂದು ಸಂಪತ್ತು ಶುಕ್ಕುರುವಾರ
ಸಮ ದೃಷ್ಟಿಯಿಂದ ನೋಡುವಳು

ಕಿವುಡಗೆ ಕಿವಿ ಕುರುಡಗೆ ಕಣ್ಣು ಬರುವುದು
ಬರಡು ಆಕಳು ಹೈನವಾಗುವುದು
ಹಡೆಯದ ಬಂಜೆ ಹೊಟ್ಟೆ ಮಕ್ಕಳಾಗೋರು
ಪಡೆವರೋ ಇಷ್ಟಫಲಗಳ

ದನಕರು ತಳಿಯಾಗಿ ಧನಧಾನ್ಯ ಬೆಳೆಯಾಗಿ
ಸದಾಕಾಲ ಶುಭಕಾರ್ಯವಾಗಿ
ಬಳೆ ಕುಂಕುಮ ಅರಿಷಿಣ ಮಾಂಗಲ್ಯ ಮುತ್ತೈದೆತನವ
ಕೊಟ್ಟು ವರವ ನೀಡುವಳು
ಬಡವರ ಮನೆಗೆ ನಡೆದು ಬಂದು ಭಾಗ್ಯದ
ಕೊಡವಾಗಿ ಕೂತಂತ ಕಥೆಯು
ಧೃಢಭಕ್ತಿಯಿಂದ ಹೇಳಿ ಕೇಳಿದ ಜನರಿಗೆ
ಕೊಡುವಳು ಸಕಲ ಸಂಪತ್ತು

ಸಾಮಜವರದ ಸುಧಾಮನ ಸಖನಾದ
ಸ್ವಾಮಿ ಶ್ರೀಹರಿ ಮೋಹದ ಅರಸಿ
ಶ್ರೀಮಹಾಲಕ್ಷ್ಮೀ ಪೂಜೆಯ ಮಾಡಿದವರಿಗೆ
ಭೀಮೇಶಕೃಷ್ಣ ತಾ ಒಲಿವ

Tuesday, 21 July 2020

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ nille nille kolhapur devi

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ
ಇಲ್ಲೆ ಬಾರೆ ಗೆಜ್ಜೆ ಘಿಲ್ಲೆನುತ||
ಕರುಣಸಾಗರ ಹರಿತರುಣಿಯೆ ನೀ ಕೋಟಿ
ತರುಣ ಕಿರಣ ರತ್ನಾಭರಣನಿಟ್ಟು
ಮಣಿಕೌಂಸ್ತುಭ ವಕ್ಷ ಸ್ಥಳದಲ್ಲಿದ್ದೊ ್ಹಳೆಯುವ
ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ||1||
ಪಂಕಜಾಕ್ಷಿ ಪಂಕಜೋದ್ಭವನ ಜನನಿ
ಪಂಕಜಮುಖಿ ಪಾಲಿಸೆ ಎನ್ನ
ಪಂಕಜನಾಭನ ಅಂಕದಲ್ಲೊಪ್ಪುವ
ಪಂಕಜೆ ನಿನ್ನ ಪಾದಪಂಕಜಕೆರಗುವೆ ||2||
ಮುಗುಳುನಗೆಯ ಮುತ್ತುಗಳು ಜಡಿತ ಕ-
ರ್ಣಗಲ ವಾಲೆಯು ಕದಪಿನಲ್ಲೊ ್ಹಳೆಯೆ
ಬಗೆ ಬಗೆ ಸರ ಬಂಗಾರವನಿಟ್ಟು ಮೂ-
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ||3||
ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ
ಬ್ಯಾಗ ನೋಡಿ ಪರಮೋತ್ಸವದಿ
ನಾಗಶಯನ ನಾಗಾರಿವಾಹನನ-
ರ್ಧಾಂಗಿ ಎನಿಸಿದಾನಂತ ಮಹಿಮಳೆ ||4||
ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ
ವಾಸವಾಗಿರಲ್ಯತಿ ಪ್ರೇಮದಲಿ
ಈಶ ನಾರದ ಬ್ರಹ್ಮಾಸುರರೊಡೆಯ ಭೀ-
ಮೇಶಕೃಷ್ಣನ ನಿಜ ದಾಸರಿಗ್ವರನೀಹೊ ||5||

Sunday, 12 July 2020

ಆವಿನ ಕೊಂಬಿನ ತುದಿಯಲಿ ಸಾಸಿವೆ aavina kombina tudiyali

.

ಆರು ಮುನಿದು ನಿಮಗೆ ಏನು aaru munidu nimage


U
ಆರು ಮುನಿದು ನಿಮಗೆ ಏನು ಮಾಡುವರಯ್ಯ
ಊರು ಒಲಿದು ನಮಗೇನ ಮಾಡುವುದಯ್ಯ
ಕೊಡಬೇಡ ತಮ್ಮೊಡಲಿಗೆ ತುಸುವನು
ಇಡಬೇಡ ನಮ್ಮ ಶುನಕಗೆ ತಳಿಗಿಯನು
ಆನೆಯ ಬಪ್ಪನ ಶ್ವಾನ ಕಚ್ಚಲು ಬಲ್ಲುದೆ?
ದೀನ ನಾಥ ನಮ್ಮ ಪುರಂದರವಿಠಲ ಉಳ್ಳನಕ
ಆರುಮುನಿದು................||


ಆರು ಅಕ್ಷರವುಳ್ಳ ವ್ಯಾಹೃತಿಯಿಂದ aaru aksharavulla vyahatiyinda


U
ಆರು ಅಕ್ಷರವುಳ್ಳ ವ್ಯಾಹೃತಿಯಿಂದ ಓಂಕಾರವಾಗುವುದು ಕೇಳಿ
ಈ ರೀತಿ ಇಪ್ಪತ್ತು ನಾಲ್ಕು ಅಕ್ಷರಗಳಿಂದ
ತೋರುತಲಿ ಗಾಯತ್ರಿಯ ರಚಿಸಿದ ಹರಿಯು
ಮೆರಿವುವೈ ಪುರುಷ ಸೂಕ್ತಾದಿ ಅನಂತವೇದರಾಶಿ
ದೊರೆ ಎಂದು ಪೊಗಳುವ ಓಂಕಾರ ಶ್ರೀಕಾರ
ಮೆರೆವುವೈ ಅಯ್ವತ್ತೊಂದು ಅಕ್ಷರಗಳು
ಈ ರೀತಿ ಅಶೇಷ ಗುಣಾಧಾರಯೆಂದು
ನಾರಾಯಣೋಥ ಪೂರ್ಣ ಗುಣಯುತ
ಭರದಿ ಙÁÐನ ರೂಪ ಶಬ್ದನೊ
ಮೆರೆವ ದೇವೇಶ ಶತರ್ದನ ಧರಿಸಿದೆ
ಪುರಂದರ ವಿಠಲ.


ಆಯುಸ್ಸು ಇದ್ದರೆ ಅನ್ನಕ್ಕೆ ಕೊರತೆಯಿಲ್ಲ aayussu iddare annakke

ಆಯುಸ್ಸು ಇದ್ದರೆ ಅನ್ನಕ್ಕೆ ಕೊರತೆಯಿಲ್ಲ
ಜೀವಕ್ಕೆ ಎಂದೆಂದಿಗೂ ತನುಗಳ ಕೊರತೆÉಯಿಲ್ಲ
ಸಾವು-ಹುಟ್ಟು ಸಹಜವೆಂಬ ಲೋಕದೊಳಗೆ
ಕಾಲ ಕಾಲದಿ ಹರಿಯ ಕಲ್ಯಾಣ ಗುಣಗಳ
ಕೇಳದವನ ಜನ್ಮ ವ್ಯರ್ಥ ಪುರಂದರವಿಠಲ.