ಸ್ಮರಿಸಿ ಬೇಡುವೆನು ನಾ ಹೇ ಗುರು ಸಾರ್ವಭೌಮಾ ಪ
ನಿರುತ ನೀ ಪೊರೆ ಎನ್ನ ವಾದಿಗಜಸಿಂಹ ಅ.ಪ.
ದಿತಿಸುತಗೆ ಸುತನೆನಿಸಿ | ಅತಿಮುದದಿ ಸುರಮುನಿಯ
ಮತ ಹಿಡಿದು ಹರಿಯ ಮಹಿಮೆ ಪಿತಗೆ ಪೇಳಿ
ಖತಿಗೊಂಡು ನಿನ್ನ ಮೂರುತಿ ತೋರೆನಲು ಶ್ರೀ
ಪತಿಯ ಸ್ತಂಭದಿ ಕರೆದ ಪ್ರಹ್ಲಾದ ರಾಜ 1
ಬಾಲ್ಯದಲಿ ಯತಿಯಾಗಿ ಲೀಲೆಯಿಂದಲಿ | ಭೂಮಿ
ಪಾಲಗೊದಗಿರ್ದ ಕುಹು ಯೋಗ ಬಿಡಿಸಿ
ಖೂಳ ಮಾಯಳ ಜಯಿಸಿ ಚಂದ್ರಿಕಾ ಗ್ರಂಥವನು
ಪೇಳಿ ಹರಿಪೀಠವೇರಿದ ವ್ಯಾಸರಾಜ 2
ಕಾಮರಿಪುನುತ ಮೂಲರಾಮ ಪದಯುಗ ಕುಮುದ
ಸೋಮನೆನಿಸುವ ಭಕ್ತಸ್ತೊಮಕ್ಕೆಲ್ಲ
ನೇಮದಿಂದಲಿ ವಿವಿಧ ಕಾಮಿತಾರ್ಥ ಸ್ಫುಟತ
ಹೇಮಸನ್ನಿಭ ಗಾತ್ರ ಪಾವನ ಚರಿತ್ರ 3
ಶಾಂತತೆಯ ಪೊಂದಿ ಮಂತ್ರಾಲಯದಿ ವೃಂದಾವ
ನಾಂತರದೊಳಿರುತ ಸಿರಿಕಾಂತ ಹರಿಯಾ
ಚಿಂತಿಸುತಲಿಹ ಸರ್ವತಂತ್ರ ಸ್ವತಂತ್ರ ಕರು
ಣಾಂತರಂಗನೆ ರಾಘವೇಂದ್ರ ಯತಿವರ್ಯಾ 4
ಮೂಕ ಬಧಿರಾಂಧತ್ವಗಳ ಪೊಂದಿ ಧರಣಿಯೊಳು
ವ್ಯಾಕುಲವ ಪಡುವವರನುದ್ಧರಿಸುತ
ನಾಕಪತಿವಿನುತ ಜಗನ್ನಾಥವಿಠಲನ ಮಧುಪ
ನೀ ಕೊಟ್ಟು ಸಲಹೆನ್ನಭೀಷ್ಟ ಸಮುದಾಯ 5
ಇತರ ಯತಿವರೇಣ್ಯರ ಸ್ತೋತ್ರ
No comments:
Post a Comment