Labels

Thursday, 7 November 2019

ಶ್ರೀ ತುಳಸಿ ಮಹಿಮೆಯದು shri tulasi mahimeyadu

ಶ್ರೀ ತುಳಸಿ ಮಹಿಮೆಯದು ಪೊಗಳಲಳಿವಿಲ್ಲ ಶ್ರೀ
ನಾಥ ನಾರಾಯಣನ ಅರ್ಚನೆಗೆ ಸರ್ವದಾ
ಪ್ರೀತಿಕರಳಾಗಿ ರಾಜಿಪಳು ಕಲಿಯುಗದಲ್ಲಿ ನೋಂತವರ ಭಾಗ್ಯವೆಂತೊ ||ಪ||
ಶ್ರೀ ಮದಾರ್ಚಿತ ಕ್ಷೀರವಾರಿಧಿಯ ಮಥಿಸುತಿರೆ
ಆ ಮಹಾವಿಷ್ಣುವಿನ ನೇತ್ರದಿಂದಲಿ ಹೊರಟ
ಪ್ರೇಮಜಲದುದ್ಭವಿಸಿ ನಳನಳಿಸಿ ದಿವ್ಯ ಆಮೋದ ಪೂರ್ಣಳಾಗಿ
ಭೂಮಿ ಪಾವನವ ಮಾಡುತಲಿ ಭೂನಿರ್ಜರರ
ಧಾಮ ಧಾಮಗಳಲ್ಲಿ ವೃಂದಾವನದಿ ನೆಲೆಸಿ
ಕಾಮಿತ ಫಲನೀವ ಕಲ್ಯಾಣಿ ಕೃಷ್ಣನಿಗೆ ನೇಮದಿಂ ಪ್ರಿಯಳಾದ. || ೧ ||
ಈ ಮನುಜ ದೇಹದಲಿ ದಾವ ಪ್ರಾಣಿಯು ಪಿತೃ-
ಸ್ತೋಮವನ್ನುದ್ಧರಿಪೆನೆಂದರೆ ಸುಲಭ ಸಾಧ್ಯ
ಕೋಮಲ ದಳವನೊಂದು ತಂದು ಶ್ರೀ ಮಾಧವನ ಚರಣ ತಾಮರಸಕರ್ಪಿಸುವದು
ತಾ ಮುನ್ನ ಮಾಡಿದಘ ಪಂಚಕಗಳೋಡಿದವು
ಸಾಮಾನ್ಯವಲ್ಲ ತುಳಸಿಯ ವನವ ಸೋಂಕಿ ಬಂ
ದಾ ಮರುತದಿಂದ ದೇಶ ಗ್ರಾಮಗಳು ಪಾವನವು ಧೀಮಂತ ಮಾನ್ಯಳಾದ || ೨ ||
ತುಳಸಿ ನೆಳಲಲ್ಲಿ ಅಂಕುರಗಳೆದ್ದಲ್ಲಿ ಪಿತೃ-
ಗಳಿಗೆ ಅನ್ನವಿತ್ತರೆ ಕ್ಷಯಫಲವು ಊರ್ಧ್ವಪುಂಡ್ರ
ತಳದಮೃತ್ತಿಕೆಯಲಿಟ್ಟರೆ ಕೋಟಿ ತೀರ್ಥಗಳ ಮುಳುಗೆದ್ದ ಫಲ ಸಿದ್ಧವು
ನಿಲಯದಲಿ ಪತ್ರ ಮೃತ್ತಿಕೆ ಕಾಷ್ಠವಿರಲಲ್ಲಿ
ಕಲಿ ಮುಟ್ಟಲಂಜಿ ತೊಲಗುವನು ಮಣಿಸರಗಳನು
ಕೊರಳಲ್ಲಿರೆ ಕಲುಷ ಸಂಹರವು ಸಹ ನಿಜ ಸಲೆ ವಿಷ್ಣುಪದವಿಯನೀವ || ೩ ||
ಶತಸಾಸಿರಪರಾಧವಿರಲಿನ್ನು ಮೃತ್ತಿಕೆಲಿ
ಪಿತ ಕಾಯದವನಿಗೆ ಬಹುಜನ ನೋಡೆ ವಿಘ್ನಗಳ
ಸ್ಥಿತಿಯ ಗತಿಯುಡುಗಿ ದುಷ್ಟಗ್ರಹಗಳೆಲ್ಲನುಕೂಲಗತಿಯಾದ ಫಲವೀವವು
ಪ್ರತಿದಿನದಿ ನಿರ್ಮಾಲ್ಯಗಳ ಧರಿಸಿ ಹರಿಪಾದ ತೀ
ರ್ಥವೊಮ್ಮೆ ಸೇವಿಸಿದವರ ಮುಕ್ತಿ ಕರತಳವಕ್ಕು ಪತಿತಪಾವನಿ ಎನಿಸುವಾ || ೪ ||
ದರುಶನದಿ ಸ್ಪರುಶನದಿ ಧ್ಯಾನದಿಂ ಕೀರ್ತನಿಯು
ನಿರುತ ಪ್ರಣಾಮಗಳು ಸ್ತೋತ್ರದಾರೋಪಣಿಂ
ಪರಮಜಲ ಶೇಚನಾರ್ಚನ ನಿಷ್ಠೆಯಿಂದ ನವ ಪರೀಕ್ಷೆಯನು ಮಾಡಲು
ಹರಿಚರಣ ಕಮಲರತಿ ದೊರಕಿ ಯುಗ ಕೋಟಿ ಸಾ-
ಸಿರ ಕಾಲ ತಿರುಗಿ ಬಂದರೆ ಸತತ ಮಾಂಗಲ್ಯ
ಹರಿಯ ಮನೆಯಲ್ಲಿ ನಿಜ ಹರುಷವನ್ನುಂಬುವರು ಮುರಾರಿ ವರದಂತೆ ಪದವ || ೫ ||
ಒಂದೊಂದು ದಳ ಕೋಟಿ ಸ್ವರ್ಣಭಾರಕೆ ಮಿಗಿಲು
ಎಂದು ವಿಶ್ವಾಸದಲಿ ತಂದು ಸಾಸಿರನಾಮ
ದಿಂದ ಗೋವಿಂದಗರ್ಪಿಸಿದರಿಲ್ಲಿಹ ಭವದುಂದುಗವು ಮಾನುಷ್ಯರಿಗೆ
ಸುಂದರ ತುಲಸಿ ಮೂಲವನ್ನು ತೊಡಕಿರ್ದ ಕಳೆ
ಯಂದೆಗೆದು ಶಾಖೋಪಶಾಖದಿಂ ವೃದ್ಧಿಸಾ
ನಂದವಿತ್ತಾರ ನೂರೊಂದು ಕುಲ ಕೋಟೆಗಳ ನರಕವನು ಹೊಂದಲೀಸರು ಪುಣ್ಯವು || ೬ ||
ಶ್ರೀ ವಿಷ್ಣುವಲ್ಲಭೆಯ ಮೂಲದಲಿ ತೀರ್ಥಗಳು
ಬಾವನ್ನಗಂಧಿಯಳ ಮಧ್ಯದಲಿ ಸುರನಿಕರ
ಪಾವನಿಯಳಾ ಹರಿಯ ಕೊನೆಯಲಿ ಶ್ರುತಿ ಸಮೂಹ ಲಾವಣ್ಯ ಗುಣರಾಸಿಯು
ಭಾವಶುದ್ಧಿಯಲಿ ಉದಯದಿ ಸ್ಮರಿಸಿ ನಿರುತದಿ
ನಾವ ಕಾರ್ಯಕೆ ಗೆಲುವು ಇಹಪರದ ಸೌಖ್ಯವಿ
ತ್ತಾವ ಕಾಲಕ್ಕೆ ಹೊರೆವ ಪ್ರಸನ್ನವೆಂಕಟ ದೇವನಂಗ ದೊಳೊಪ್ಪುವಾ || ೭ ||

No comments:

Post a Comment