ಪೌರಾಣಿಕ ಹಿನ್ನೆಲೆ
ಇನ್ನೊಂದು ಪುರಾಣ ಕಥೆಯ ಪ್ರಕಾರ, ವೃಂದಾಳೆಂಬ ಯುವತಿ, ಜಲಂಧರನೆಂಬ ದುಷ್ಟ ರಾಕ್ಷ ಸನನ್ನು ಮದುವೆಯಾಗುತ್ತಾಳೆ. ವೃಂದೆ ತಪಸ್ಸು ಮಾಡಿ, ಲಕ್ಷ್ಮೀನಾರಾಯಣರು ಸದಾ ತಮ್ಮ ಮನೆಯಲ್ಲಿ ನೆಲೆಗೊಳ್ಳಲೆಂಬ ವರವೊಂದನ್ನು ಪಡೆದಿದ್ದಳು. ಪತಿವ್ರತೆಯಾದ ವೃಂದಾಳ, ತಪಃಶಕ್ತಿಯ ಪ್ರಭಾವದಿಂದ ಜಲಂಧರನಿಗೆ ಸೋಲೆಂಬುದೇ ಇರಲಿಲ್ಲ. ಅಹಂಕಾರ, ಅಧರ್ಮಗಳ ಪ್ರತಿರೂಪವೆನಿಸಿದ ಜಲಂಧರ, ದೇವತೆಗಳ ಮೇಲೆ ಯುದ್ಧ ಸಾರುತ್ತಾನೆ. ಋುಷಿ, ಮುನಿಗಳ ಯಜ್ಞ-ಹವನಾದಿಗಳಿಗೆ ಭಂಗ ತರುತ್ತಾನೆ. ಈತನ ಉಪಟಳ ತಾಳಲಾರದ ದೇವತೆಗಳು ಪರಿಹಾರಕ್ಕಾಗಿ, ವಿಷ್ಣುವಿನ ಮೊರೆ ಹೋಗುತ್ತಾರೆ. ವಿಷ್ಣು ಜಲಂಧರ ರಾಕ್ಷ ಸನ ವೇಷದಲ್ಲಿ ಬಂದು, ವೃಂದಾಳ ಪಾತಿವೃತ್ಯವನ್ನು ಭಂಗ ಮಾಡಿ, ಜಲಂಧರನನ್ನು ಸಂಹರಿಸುತ್ತಾನೆ. ಕುಪಿತಗೊಂಡ, ವೃಂದಾ, ವಿಷ್ಣುವಿಗೆ, ಪತ್ನಿ ವಿಯೋಗವಾಗಲೆಂಬ ಶಾಪವನ್ನಿತ್ತು, ಪತಿಯೊಂದಿಗೆ ಚಿತೆಯೇರುತ್ತಾಳೆ. ರಾಮಾಯಣದಲ್ಲಿ, ವಿಷ್ಣುವಿನ ಅವತಾರವಾಗಿರುವ ರಾಮನಿಗೆ ಸೀತಾ ವಿಯೋಗವಾಗುವುದನ್ನು ಇಲ್ಲಿ ಸ್ಮರಿಸಬಹುದು. ಪಾರ್ವತಿ ದೇವಿ, ವೃಂದೆಯ ಚಿತೆಯ ಸುತ್ತಲೂ ತುಳಸಿ, ನೆಲ್ಲಿ, ಹುಣಸೆ ಗಿಡಗಳನ್ನು ನಿರ್ಮಿಸಿ, ವೃಂದಾವನವೊಂದನ್ನು ನಿರ್ಮಿಸಿದಾಗ, ನಳನಳಿಸಿ ಬೆಳೆದ ತುಳಸಿಯನ್ನು ವಿಷ್ಣು ವರಿಸುತ್ತಾನೆಂದು ಪ್ರತೀತಿಯಿದೆ. ಮುಂದೆ, ತುಳಸಿ ಮಾತೆಯೇ ರುಕ್ಮಿಣಿಯಾಗಿ ಜನಿಸಿ, ತುಳಸಿ ವಿವಾಹದ ದಿನವಾದ ಉತ್ಥಾನ ದ್ವಾದಶಿಯಂದು ಕೃಷ್ಣನನ್ನು ವರಿಸುತ್ತಾಳೆ. ಈ ವಿವಾಹೋತ್ಸವದ ಸ್ಮರಣೆಯನ್ನೇ ತುಳಸಿ ವಿವಾಹವೆಂದು ಆಚರಿಸುವ ಸಂಪ್ರದಾಯ ಬೆಳೆದು ಬಂದಿದೆ
No comments:
Post a Comment