ಹಮ್ಮುನಾಡಲಿಬೇಡ ಹಮ್ಮು ಈಡೇರದು
ಹಮ್ಮಿನಿಂದಲಿ ನೀವು ಕೆಡಬೇಡಿರಯ್ಯ ಪ.
ಮುನ್ನೊಮ್ಮೆ ರಾವಣನು ಜನಕನಾ ಸಭೆಯಲ್ಲಿ
ತನ್ನಳವನರಿಯದಲೆ ಧನುವೆತ್ತಲು
ಉನ್ನತದ ಆ ಧನು ಎದೆಯ ಮೇಲೆ ಬೀಳಲು
ಬನ್ನ ಬಟ್ಟುದ ನೀವು ಕೇಳಿಬಲ್ಲಿರಯ್ಯ 1
ಕುರುಪತಿಯ ಸಭೆಯಲ್ಲಿ ಕೃಷ್ಣ ತಾ ಬರಲಾಗಿ
ಕರೆದು ಮನ್ನಣೆಯನ್ನು ಮಾಡಿದಿರಲು
ಧರೆಗೆ ಶ್ರೀ ಕೃಷ್ಣನಂಗುಟವನಂದೊತ್ತಲು
ಅರಸು ಆಸನ ಬಿಟ್ಟು ಉರುಳಾಡಿದ 2
ಅತಿ ವೇಗದಲಿ ಕೃಷ್ಣ ಸತ್ಯಭಾಮೆಯ ಕರೆದು
ಸೀತೆ ನೀನಾಗೆಂದು ನೇಮಿಸಿದನು
ಮತಿವಂತೆ ಬಗೆಬಗೆಯ ಶೃಂಗಾರವಾದರೂ
ಸೀತಾ ಸ್ವರೂಪ ತಾನಾಗಲಿಲ್ಲ 3
ಹನುಮನನು ಕರೆಯೆಂದು ಖಗಪತಿಯನಟ್ಟಲು
ಮನದಲಿ ಕಡುಕೋಪದಿಂದ ನೊಂದು
ವಾನರನೆ ಬಾಯೆಂದು ಗರುಡ ತಾ ಕರೆಯಲು
ಹನುಮ ಗರುಡನ ತಿರುಹಿ ಬೀಸಾಡಿದ 4
ಇಂತಿಂತು ದೊಡ್ಡವರು ಈ ಪಾಡು ಪಟ್ಟಿರಲು
ಪಂಥಗಾರಿಕೆ ತರವೆ ನರಮನುಜಗೆ ?
ಚಿಂತಾಯತನು ಚೆಲ್ವ ಪುರಂದರವಿಠಲನ
ಸಂತತವು ನೆನೆ ನೆನೆದು ಸುಖಿಯಾಗೊ ಮನುಜ 5
No comments:
Post a Comment