Tuesday, 22 October 2019

ಇನ್ನು ಪುಟ್ಟಿಸದಿರಯ್ಯ innu puttisadirayya

ಇನ್ನು ಪುಟ್ಟಿಸದಿರಯ್ಯ ಪುಟ್ಟಿಸಿದಕೆ ಪಾಲಿಸಯ್ಯ
ಎನ್ನ ದಯದಿ ಪಾಲಿಸಯ್ಯ ಪ
ನಿನ್ನ ಚರಣಾಂಬುಜವ ನಂಬಿದೆನೊ ಶ್ರೀ ಹರಿಯೆ
ಬನ್ನು ಬಿದ್ದೆನು ಭವಬಂಧನವ ಬಿಡಿಸಯ್ಯ ಅ.ಪ
ಅಮರೇಂದ್ರವಂದಿತನೆ ಅನಂತಮಹಿಮನೆ
ಕಮಲಸಖಾನಂತಕರನೆ ||
ಕಮಲಾಯತಾಂಬಕನೆ ಕಾಮಿತದಾಯಕನೆ
ವಿಮಲ ಗುಣ ವಿಭೀಷಣಗೆ ಒಲಿದ ದಯದಿಂದಲೆನ್ನ 1
ಅಜಮಿಳ ಅಂಬರೀಷ ಅಕ್ರೂರ ವಿದುರಗೆ
ಗಜರಾಜ ಗಿರಿಜೇಶಗೆ ||
ನಿಜಭಕ್ತ ಪ್ರಹ್ಲಾದ ಅಜ ಧ್ರುವ ಅರ್ಜುನಗೆ
ದ್ವಿಜ ಸುತ ರುಕ್ಮಾಂಗದರಿಗೊಲಿದ ದಯದಿಂದಲೆನ್ನ 2
ಅವರಂತೆ ನಾನಲ್ಲ ಅವರ ದಾಸರ ದಾಸ
ಸವರಿ ಬಿಸುಟೆನ್ನ ದೋಷ ||
ಪವಿತ್ರನ್ನ ಮಾಡಯ್ಯ ಪುಂಡಲೀಕ ವರದನೆ
ಅವಸರಕೆ ದ್ರೌಪದಿಗೆ ಒಲಿದ ದಯದಿಂದಲೆನ್ನ 3
ಎಂದೆಂದು ನಿನ್ನ ಪಾದವೆನಗೆ ನೆಲೆಯಾಯಿತು
ಎಂದೆಂದು ನಿನ್ನ ನಾಮಭಜನೆ ||
ಎಂದೆಂದು ನೀಯೆನ್ನ ಬಿಡದೆ ಪಾಲಿಸೊ ಸ್ವಾಮಿ
ಅಂದು ಅಂಜನೆಕಂದನಿಗೆ ಒಲಿದ ದಯದಿಂದಲೆನ್ನ 4
ಅಂತರಂಗದುಬ್ಬಸವ ಅಯ್ಯೋ ನಿನಗುಸಿರುವೆನು
ಚಿಂತೆಗಳ ಪರಿಹರಿಸೊ ||
ಸಂತತ ಪಾಲಿಸೊ ಪುರಂದರ ವಿಠಲನೆ
ಚಿಂತಿಪ ಗೌತಮನ ಸತಿಗೆ ಒಲಿದ ದಯದಿಂದಲೆನ್ನ5

No comments:

Post a Comment