Tuesday, 22 October 2019

ಇನ್ನಾದರೂ ಹರಿಯ innadaru hariya

ಇನ್ನಾದರೂ ಹರಿಯ ನೆನೆಯೊ ನೀ ಮನುಜಾ |
ಮುನ್ನಾದ ದುಃಖಗಳು ನಿಜವಾಗಿ ತೊಲಗುವುವು ಪ.
ಊರೂರ ನದಿಗಳಲಿ ಬಾರಿ ಬಾರಿಗೆ ಮುಳುಗಿ |
ತೀರದಲಿ ಕುಳಿತು ನೀ ಪಣೆಗೆ ನಿತ್ಯ ||
ನೀರಿನಲಿ ಮಟ್ಟಿಯನು ಕಲಸಿ ಬರೆಯುತ ಮೂಗು - |
ಬೇರನ್ನು ಪಿಡಿದು ಮುಸುಕಿಕ್ಕಲೇನುಂಟು 1
ನೂರಾರು ಕರ್ಮಂಗಳನ್ನು ಡಂಭಕೆ ಮಾಡಿ |
ಆರಾರಿಗೋ ಹಣದ ದಾನಕೊಟ್ಟು |
ದಾರಿದ್ರ್ಯವನು ಪಡೆದು ತಿರಿದಿಂಬುವುದಕೀಗ |
ದಾರಿಯಾಯಿತೆ ಹೊರತು ಬೇರೆ ಫಲವುಂಟೇ? 2
ಕಾಡುದೈವಗಳನ್ನು ಚಿನ್ನ - ಬೆಳ್ಳಿಗಳಿಂದೆ |
ಮಾಡಿಕೊಂಡವರ ಪೂಜೆಯನೆ ಮಾಡಿ |
ಕಾಡುಕಳ್ಳರು ಬಂದು ಅವುಗಳನು ಕೊಂಡೊಯ್ಯೆ |
ಮಾಡಿಕೊಂಡಿರ್ದುದಕೆ ಬಾಯಬಡಕೊಳ್ಳುವೆ 3
ಮಗನ ಮದುವೆಯು ಎಂದು ಸಾಲವನು ಮಾಡಿ ನೀ |
ಸುಗುಣಿಯೆನ್ನಿಸಿಕೊಳಲು ವ್ಯಯ ಮಾಡಿದೆ ||
ಹಗರಣವ ಪಡಿಸಿದರೆ ಸಾಲಗಾರರು ಬಂದು |
ಬಗೆಬಗೆಯೊಳವರ ಕಾಲ್ಗೆರಗಿ ಬಿದ್ದಿರುವೆ 4
ಕೆಟ್ಟುವೀ ಕೆಲಸಗಳ ಮಾಡಿದರೆ ಫಲವೇನು ? |
ತಟ್ಟನೇ ಶ್ರೀಹರಿಯ ಪದವ ನಂಬಿ ||
ದಿಟ್ಟ ಪುರಂದರವಿಠಲನೆ ಎಂದರೆ |
ಸುಟ್ಟು ಹೋಗುವುವಯ್ಯ ನಿನ್ನ ಕಷ್ಟಗಳು 5

No comments:

Post a Comment