Friday, 5 June 2020

ನಾಲಗೆ ನಾಲಗೆ ನಾಲಗೆ naalage naalage naalage


ನಾಲಗೆ ನಾಲಗೆ ನಾಲಗೆ - ಸಿರಿ - |
ಲೋಲನ ನೆನೆ ಕಾಣೊ ನಾಲಗೆ ಪ.
ವಾಸುದೇವನ ನಾಮ ನಾಲಗೆ - ನೀ
ಲೇಸಾಗಿ ನೆನೆ ಕಾಣೊ ನಾಲಗೆ ||
ಆಸೆಯೊಳಗೆ ಬಿದ್ದು ಮೋಸ ಹೋಗಲು ಬೇಡ |
ಕೇಶವನ ನಾಮವ ನೆನೆ ಕಾಣೊ ಮರುಳೆ 1
ಮಾತನಾಡುವಲ್ಲಿ ನಾಲಗೆ - ನೀ ಅ - |
ನೀತಿ ನುಡಿಯದಿರು ನಾಲಗೆ ||
ಆತನ ನಾಮವ ಗೀತದಿ ಪಾಡುತ |
ಸೀತಾಪತಿ ರಘುನಾಥನ ನೆನೆ ಕಾಣೊ 2
ಅಚ್ಯುತನಾಮವ ನಾಲಗೆ ನೀ - |
ಬಿಚ್ಚಿಟ್ಟ ನೆನೆ ಕಾಣೊ ನಾಲಗೆ ||
ನೆಚ್ಚಿ ಕೆಡಲಿ ಬೇಡ ನಿಚ್ಚ ಶರೀರವ |
ಅಚ್ಯುತನಾಮವ ನೆನೆ ಕಾಣೊ ಮರುಳೆ 3
ನನ್ನದು ತನ್ನದು ನಾಲಗೆ - ನೀ- |
ನೆನ್ನದಲಿರು ಕಾಣೊ ನಾಲಗೆ |
ಇನ್ನು ಮೂರು ದಿನದೀ ಸಂಸಾರದಿ |
ಪನ್ನಗಶಯನನ ನೆನೆ ಕಾಣೊ ಮರುಳೆ 4
ಅನುದಿನ ಹರಿನಾಮ ನಾಲಗೆ - ನೀ |
ನೆನೆಯುತಿರು ಕಾಣೊ ನಾಲಗೆ ||
ಘನಮಹಿಮ ನಮ್ಮ ಪುರಂದರವಿಠಲನ |
ಕ್ಷಣ ಕ್ಷಣಕೊಮ್ಮೆ ನೆನೆ ಕಾಣೊ ಮರುಳೆ 5


No comments:

Post a Comment