Monday, 30 March 2020

ಕರುಣಿಸೋ ರಂಗಾ ಕರುಣಿಸೋ


ಕರುಣಿಸೋ ರಂಗಾ ಕರುಣಿಸೋ ಪ
ಇರುಳು ಹಗಲು ನಿನ್ನ ಸ್ಮರಣೆ ಮರೆಯದಂತೆ ಅ.ಪ
ರುಕುಮಾಂಗದನಂತೆ ವ್ರತವನಾನರಿಯೆನು
ಶುಕಮುನಿಯಂತೆ ಸ್ತುತಿಸಲರಿಯೆ ||
ಬಕವೈರಿಯಂತೆ ಧ್ಯಾನವ ಮಾಡಲರಿಯೆ ದೇ
ವಕಿಯಂತೆ ಮುದ್ದಿಸಲರಿಯೆನು ರಂಗಾ 1

ಗರುಡನಂತೆ ಪೊತ್ತು ತಿರುಗಲರಿಯೆ ನಾನು
ಕರಿರಾಜನಂತೆ ಕರೆಯಲರಿಯೆ ||
ಮರಕಪಿಯಂತೆ ಸೇವೆಯ ಮಾಡಲರಿಯೆನು
ಸಿರಿಯಂತೆ ನಿನ್ನ ಮೆಚ್ಚಿಸಲರಿಯೆ ರಂಗಾ 2
ಬಲಿಯಂತೆ ದಾನವ ಕೊಡಲರಿಯೆನು ಭಕ್ತಿ
ಛಲವನರಿಯೆ ಪ್ರಹ್ಲಾದನಂತೆ ||
ಒಲಿಸಲರಿಯೆ ಅರ್ಜುನನಂತೆ ಸಖನಾಗಿ
ಸಲಹೋ ದೇವರದೇವ ಪುರಂದರ ವಿಠಲ 3


No comments:

Post a Comment