Monday, 30 March 2020

ಕರುಣಿಸಿ ಕೇಳು ಕಂದನ ಮಾತನು


ಕರುಣಿಸಿ ಕೇಳು ಕಂದನ ಮಾತನು
ಗರುಡ ವಾಹನ ಗಂಗಾಜನಕ ಶ್ರೀಹರಿಯೇ ಪ
ಇತ್ತ ಬಾ ಎಂಬರಿಲ್ಲ ಇರವ ಕೇಳುವರಿಲ್ಲ
ಹತ್ತಿರ ಕುಳ್ಳಿರಿಸಿ ಆದರಿಪರಿಲ್ಲ ||
ತತ್ತರ ಪಡುತಿಹೆ ತಾವರೆಲೆಯ ನೀರಂತೆ
ಹತ್ತು ನೂರು ನಾಮವ ಪೊತ್ತ ಶ್ರೀ ಹರಿಯೇ 1
ಇಂದಿಗಶನವಿಲ್ಲ ನಿಂದಿರೆ ನೆರಳಿಲ್ಲ
ಒಂದೆ ಸುತ್ತಿಗೆ ತುಂಡು ಅರಿವೆಯಿಲ್ಲ ||
ಬೆಂದೊಡಲಿಗೆ ಒಬ್ಬರಯ್ಯೋ ಎಂಬುವರಿಲ್ಲ
ಬಿಂದು ಮಾತ್ರದ ಸುಖ ಕಾಣಿ ನಾ ಹರಿಯೇ2
ಎಲ್ಲಿದ್ದರೆನಗೊಂದು ನೆಲೆಯಿಲ್ಲ ಶ್ರೀ ಹರಿ
ಅಲ್ಲ ತಿಂದಿಲಿಯಂತೆ ಬಳಲುವೆನೊ ||
ಘುಲ್ಲಲೋಚನ ಪೂರ್ಣ ದಯದಿ ಸಲಹೊ ಎನ್ನ
ಸಲ್ಲದ ನಾಣ್ಯವ ಮಾಡುವರೆ ಹರಿಯೇ 3
ನಖ ಶಿಖ ಪರ್ಯಂತ ನಾನಾ ಹಿಂಸೆಯ ಪಟ್ಟೆ
ಸುಖವೆಂಬುದನು ಕಾಣೆ ಸ್ವಪ್ನದಲು
ಮುಖವರಿಯದ ರಾಜ್ಯಕ್ಕೆನ್ನನು ಎಳತಂದು
ಕಕಮಕ ಮಾಡುವುದುಚಿತವೆ ಹರಿಯೇ 4
ಇಷ್ಟುದಿವಸ ನಿನ್ನನೆನೆಯದ ಕಾರಣ
ಕಷ್ಟ ಪಟ್ಟೆನು ಸ್ವಾಮಿ ಕಾಯೊ ಎನ್ನ ||
ಮುಟ್ಟಿ ಭಜಿಸಲಿಲ್ಲ ಮುರವೈರಿ ನೀ ದಯ
ವಿಟ್ಟು ಸಲಹೊ ಶ್ರೀ ಪುರಂದರ ವಿಠಲ 5


No comments:

Post a Comment