Sunday, 29 March 2020

ಏನು ಮರುಳಾದೆಯೇ ಎಲೆ ರುಕ್ಮಿಣಿ


ಏನು ಮರುಳಾದೆಯೇ ಎಲೆ ರುಕ್ಮಿಣಿ |
ಹೀನಕುಲ ಗೊಲ್ಲ ಶ್ರೀ ಗೋಪಾಲಗೆ ಪ
ಹಾಸಿಕಿಲ್ಲದೆ ಪೋಗಿ ಹಾವಿನೊಳು ಪವಡಿಸಿದ |
ಹೇಸಿಕಿಲ್ಲದೆ ಕರಡಿಯನು ಕೂಡಿದ ||
ಗ್ರಾಸಕಿಲ್ಲದೆ ಪೋಗಿ ದಾಸನ ಮನೆಯಲುಂಡ |
ದೋಷಕಂಜದೆ ಮಾನವ ಶಿರವ ತರಿದವಗೆ 1
ಕುಂಡಗೋಳಕರ ಮನೆ ಕುಲದೈವವೆನಿಸಿದನು |
ಮಂಡೆಬೋಳಾದವರ ಮನೆದೈವವು ||
ಹಿಂಡು ಗೋವಳರೊಳಗೆ ಹಿರಿಯ ಗೋವಳನೀತ |
ಭಂಡಾಟಗಾರನಿವ ಭುವನದೊಳಗೆಲ್ಲ 2
ಒಬ್ಬರಲಿ ಪುಟ್ಟಿದನು ಒಬ್ಬರಲಿ ಬೆಳೆದನು |
ಒಬ್ಬರಿಗೆ ಮಗನಲ್ಲ ಭುವನದೊಳಗೆ ||
ಅಬ್ಬರದ ದೈವಸಿರಿ ಪುರಂದರವಿಠಲನ |
ಉಬ್ಬುಬ್ಬಿ ಮರುಳಾದೆ ಉತ್ಸಾಹದಿಂದ 3


No comments:

Post a Comment