Monday, 30 March 2020

ಕಲಿಯುಗದ ಮಹಿಮೆಯನು


ಕಲಿಯುಗದ ಮಹಿಮೆಯನು ಕಾಣಬೇಕಿಂತು ಪ.
ಹರಿಸ್ಮರಣೆಯನು ಬಿಟ್ಟು ಹೀನರನೆ ಸ್ತುತಿಸುವರು |
ಗುರುಹಿರಿಯರೊಳು ದೋಷವೆಣಿಸುತಿಹರು |
ಪೊರೆದ ತಾಯ್ತಂದೆಗಳ ಮಾತ ಕೇಳದೆ ತಮ್ಮ |
ತರುಣಿಯರ ನುಡಿಗಳನು ಲಾಲಿಸುತ್ತಿಹರು 1
ಕಂಡುದನೆ ಹೇಳರು ಕಾಣದನೆ ಹೇಳುವರು |
ಉಂಡ ಮನೆಗೆರಡನ್ನೆ ಎಣಿಸುತಿಹರು ||
ಕೊಂಡಾಡಿ ಬೇಡಿದರೆ ಕೊಡರೊಂದು ರುವಿಯನ್ನು |
ದಂಡಿಸುವರಿಂಗೆ ಧನಗಳನು ಕೊಡುತಿಹರು 2
ಕಳ್ಳರೊಳು ಕಡುಸ್ನೇಹ ಸುಳ್ಳರೊಳು ಸೋಲುವರು |
ಒಳ್ಳೆಯವರೊಡನೆ ವಂಚನೆ ಮಾಳ್ಪರು ||
ಇಲ್ಲದ ಅನಾಥರಿಗೆ ಇದ್ದಷ್ಟು ತಾವ್ ಕೊಡರು |
ಬಲ್ಲಿದವರಿಗೆ ಬಾಯ ಸವಿಯನುಣಿಸುವರು 3
ಪಟ್ಟದರಸಿಯನಗಲಿ ಮೋಸದಲಿ ತಪ್ಪುವರು |
ಕೊಟ್ಟ ಸಾಲವ ನುಂಗಿ ಕೊಡದಿಪ್ಪರು ||
ಮುಟ್ಟಿ ಪರಹೆಣ್ಣಿಂಗೆ ಮೋಸದಲಿ ಕೂಡುವರು |
ಬಿಟ್ಟು ಕುಲಸ್ವಾಮಿಯನು ಬಡದೈವಕೆರಗುವರು 4
ಮಾಡಿದುಪಕಾರವನು ಮರೆತುಕಳೆವರು ಮತ್ತೆ |
ಕೂಡಾಡಿ ಬೇಡುವರು ಕುಟಿಲತ್ವದಿಂದ ||
ರೂಢಿಗೊಡೆಯನು ನಮ್ಮ ಪುರಂದರವಿಠಲನ |
ಪಾಡಿ ಪೊಗಳುವರಿಂಗೆ ಭವಭಯಗಳಿಲ್ಲ 5


No comments:

Post a Comment