Tuesday, 31 March 2020

ಕೊಡಬಹುದೇ ಮಗಳ - ಸಮುದ್ರರಾಜ


ಕೊಡಬಹುದೇ ಮಗಳ - ಸಮುದ್ರರಾಜ
ಕೊಡಬಹುದೇ ಮಗಳ ಪ
ನಡೆದರೆ ಬಡವಹಳೆಂಬ ಕುಮಾರಿಯ |
ಹಿಡಿಬಿಟ್ಟಿ ಮಾಡಿ ಹರಿಗೆ ಸಿಂಧುರಾಜನು ಅ.ಪ
ಕುರುಹಬಲ್ಲವರಾರು, ಕುಲಗೋತ್ರವಾವುದೊ |
ಅರಿತ ರಾಯರೊಳಗೆ ಆರ ಮಗನೊ ಇವ |
ವರುಶಭಾಂಗಿಗೆ ತಕ್ಕ ವರನಹುದೆ ಇವ |
ಹಿರಿಯರೆಂಬುದ ನೆರೆಹೊರೆಯೂ ಕಾಣದನಿವ |
ಪರಿಪಂಥಿಜನಕೆಲ್ಲ ಪ್ರಾಣಘಾತಕನಿವ |
ನಿರುತ ಮೇಘವ ಪೋಲ್ವ ನೀಲಮೆಯ್ಯವನಿವ,
ಹಿರಿದಾದ ನಾಲ್ಕು ಹಸ್ತಗಳುಳ್ಳವನಿವ |
ಅರುಣಚ್ಛಾಯೆಯ ರೇಖೆ ಅರಳಿಸಿ ಹಾರುವ ||
ಗರುಡಹಕ್ಕಿಯ ನೆಚ್ಚಿದ - ಎದೆಯ ಮೇಲೆ |
ಭರದಿ ಒದೆಯ ಮೆಚ್ಚಿದ - ಘೋರರೂಪ |
ಧರಿಸಿ ಕೋಪದಿ ಹೆಚ್ಚಿದ - ಕರೆವ ಗೋವ |
ಕರುಗಳ ಕೊರಳುಚ್ಚಿದ - ಸಂಸಾರದೊಳ್ |
ಇರುತಿಹ ನಾರಿಯರ ಮನವೆಲ್ಲ ಬಿಚ್ಚಿದ 1
ಅಡಿಗಡಿಗೆ ಹತ್ತು ಅವತಾರವ ಮಾಡಿದ |
ಕಡುಕಪತಿಯಲ್ಲದೆ ಭಾರಿ ಗುಣದವನಲ್ಲ |
ಗಿಡದ ಮರೆಯಲಿದ್ದು ಕಪಿಯ ಕೊಂದನು ಹೊಲ್ಲ |
ನಡತೆಯಲಿ ಸಲೆ ಜನಲಜ್ಜೆ ಇವನಿಗಿಲ್ಲ |
ಹಿಡಿದು ಪೂತನಿ ಮೊಲೆಯುಂಡ ಚೌಪಟಮಲ್ಲ |
ಮಡುಹಿದ ಮಾವನ ಮಧುರೆಯೊಳಗೆ ಖುಲ್ಲ |
ಕೊಡೆಮಾಡಿ ಬೆಟ್ಟವ ಗೋಕುಲದೊಳಗೆಲ್ಲ |
ಮಡದಿಯರುಡುಗೆಯ ಕದ್ದದ್ದು ಹುಸಿಯಲ್ಲ ||
ಕಡಹದ ಮರವೇರಿದ - ಅವರ ಮಾನ - |
ಕೆಡಿಸಿ ಭಂಡರ ಮಾಡಿದ - ದಧಿಕ್ಷೀರ - |
ಗಡಿಗೆ ಸೂರೆಯ ಮಾಡಿದ - ಕಾಳಿಂಗನ - |
ಮಡುವ ಕಲಕಿ ನೋಡಿದ - ಸ್ಯಂದನವನು |
ನಡೆಸುವ ಕಾರಣ ನರಗೆ ಸಾರಥಿಯಾದ 2
ಊದುತ ಕೊಳಲನರಣ್ಯದೊಳ್ ಗೋಗಳ |
ಕಾದು ಕುಂಚಿಗೆ ಮಾಡಿ ಕಂಬಳಿ ಪೊದೆವನು |
ಓದನವನು ಬೇಡಿ ಹೊಟ್ಟೆಯ ಹೊರೆದನು |
ಯಾದವರೊಳಗಾಡಿ ಎಂಜಲನುಂಡನು |
ಕ್ರೋಧದಿಂದ ಸುರರ ಕೊಂದು - ಕೊಂದಿಡುವನು |
ಪಾದರಿ ಪೆಣ್ಣುಗಳೊಳಗಿರುತಿಪ್ಪನು
ಆದಿಯೆ ಇವಗಿಲ್ಲ ಎಂದೆಂದಿಗಿಪ್ಪನು |
ಭೂದಿವಿಜರ ಕೂಡ ಬಿಕ್ಷಕೆ ಪೋಪನು ||
ಮೇದಿನಿಯೊಳಗಿರುವ - ಮಸ್ತಕವು ಬೋ - |
ಳಾದವರೊಳಗಿರುವ - ನೋಡಲು ಭೇದಾ - |
ಭೇದದಂದದಿ ತೋರುವ - ಸಭೆಯೊಳಗೆ |
ಬೈದರೆ ಮೈದೋರುವ ಶೇಷಶಾಯಿ - |
ಯಾದಂಥ ಪುರಂದರ ವಿಠಲನೆಂದರಿಯದೆ 3


No comments:

Post a Comment