Tuesday, 17 December 2019

ಯಾರೂ ಸಂಗಡ ಬಾಹೋರಿಲ್ಲ yaaro sangada baahorilla

ಯಾರೂ ಸಂಗಡ ಬಾಹೋರಿಲ್ಲ
ನಾರಾಯಣ ನಿಮ್ಮ ನಾಮವೊಂದಲ್ಲದೆ ಪ.
ಹೊತ್ತು ನವಮಾಸ ಪರಿಯಂತರವು ಗರ್ಭದಲಿ
ಹೆತ್ತು ಬಲು ನೋವು ಬೇನೆಗಳಿಂದಲಿ
ತುತ್ತು ಬುತ್ತಿಯ ಕೊಟ್ಟು ಸಲಹಿದಂಥ ತಾಯಿ
ಅತ್ತು ಕಳುಹುವಳಲ್ಲದೆ ನೆರೆಬಾಹಳೆ 1
ದೇವವಿಪ್ರರು ಅಗ್ನಿಸಾಕ್ಷಿಯಿಂದಲಿ ತನ್ನ
ಭಾವಶುದ್ಧಿಯಲಿ ಧಾರೆಯೆರಿಸಿಕೊಂಡ
ದೇವಿ ತನ್ನ ತಲೆಗೆ ಕೈಯಿಟ್ಟುಕೊಂಡು ಇ
ನ್ನಾವ ಗತಿಯೆಂದೆನುತ ಗೋಳಿಡುವಳಲ್ಲದೆ 2
ಮತ್ತೆ ಪ್ರಾಣನು ತನುವ ಬಿಟ್ಟು ಹೋಗುವಾಗ
ಎತ್ತಿವನ ಹೊರಗೊಯ್ಧ ಹಾಕೆಂಬರು
ಎತ್ತಿದ ಕಸಕಿಂತ ಕಡೆಯಾಯಿತೀ ದೇಹ
ವಿತ್ತವೆಷ್ಟಿದ್ದರೂ ಫಲವಿಲ್ಲ ಹರಿಯೆ 3
ಪುತ್ರಮಿತ್ರರು ಸಕಲ ಬಂಧು ಬಳಗಗಳೆಲ್ಲ
ಹತ್ತಿರ ನಿಂತು ನೋಡುವರಲ್ಲದೆ
ಮೃತ್ಯುದೇವಿಯ ಬಂದು ಅಸುಗಳನು ಸೆಳೆವಾಗ
ಮತ್ತೆ ತನ್ನವರಿದ್ದು ಏನು ಮಾಡುವರು 4
ಯಮನ ದೂತರು ಬಂದು ಪಾಶಂಗಳನೆ ಎಸೆದು
ಮಮತೆಯಿಲ್ಲದೆ ಪ್ರಾಣ ಎಳೆಯುತಿರಲು
ವಿಮುಖನಾಗಿ ತಾನು ವ್ಯಥೆಯಿಂದ ಪೋಪಾಗ
ಕಮಲಾಕ್ಷ ಪುರಂದರವಿಠಲ ನೀನಲ್ಲದೆ * 5

No comments:

Post a Comment