Tuesday, 17 December 2019

ಯಾರಲಿ ದೂರುವೆನೋ ಗಿರಿಯ yaaralli duruveno giriraya

ಯಾರಲಿ ದೂರುವೆನೋ ಗಿರಿಯ ರಾಯಾ
ಯಾರೆನ್ನ ಸಲಹುವರೋ ಪ
ಸಾರಿದ ಭಕ್ತ ಸಂಸಾರಿ ನಿನ್ನಯ ಪದ
ವಾರಿಜವನು ತೋರೋ ಕಾರುಣ್ಯ ನಿಧಿ ಬೇಗ ಅ.ಪ
ಕಷ್ಟಜನ್ಮಕೆ ಬಂದೆನೋ-ಧಾರಿಣಿಯೊಳು
ದುಷ್ಟರಿಂದಲಿ ನೊಂದೆನೋ ||
ನಿಷ್ಠುರ ಬೇಡವೊ ನಿನ್ನ ನಂಬಿದ ಮೇಲೆ
ಸೃಷ್ಟಿಗೊಡೆಯ ಎನ್ನ ಬಿಟ್ಟು ಕಳೆಯಬೇಡ 1
ಹಿಂದೆ ಮಾಡಿದ ಕರ್ಮವು ಈ ಭವದೊಳು
ಮುಂದಾಗಿ ತೋರುತಿದೆ ||
ಇಂದೇನು ಗತಿ ಅದರಿಂದ ನೊಂದೆನು ನಾನು
ಮಂದರಧರ ಗೋವಿಂದ ನೀನಲ್ಲದೆ 2
ಹಗಲು ಕತ್ತಲೆ ಸುತ್ತಿದೆ ಕಂಗೆಡಿಸುತ
ಹಗೆಗಳ ನಗಿಸುತಿದೆ ||
ಉಗುರಲಿ ಸೀಗೆ ಮುಳ್ಳುಗಳೀಗ ನೆಡುತಿವೆ
ಸೊಗವ ಹಾರಿಸಿ ಎದೆ ದಿಗಿಲುಗೊಳಿಸುತಿದೆ 3
ಬಾಡಿದರಳಿಸಸಿಯ ಕಲ್ಲಿನ ಮೇಲೆ
ಈಡಾಗಿ ನಾಟಿದರೆ ||
ಬೇಡಿಕೊಂಡರೆ ತಳಿರು ಮೂಡಿ ಬರುವುದುಂಟೆ
ರೂಢಿಗೊಡೆಯ ನೀನು ನೋಡದಿದ್ದ ಮೇಲೆ 4
ಹಲವು ಪರಿಯ ಕಷ್ಟವ ನಿನ್ನಯ ಪಾದ
ಜಲಜದ ಕರುಣದಲಿ ||
ಸುಲಿಗೆಗೊಟ್ಟೆನು ನಾನು ಸೂರೆಗಾರರಿಗೆಲ್ಲ
ಒಲವಾಗು ಎನ್ನೊಳು ಪುರಂದರವಿಠಲ 5

No comments:

Post a Comment