ಇದನು ಬಿಟ್ಟು ಇನ್ನಿಲ್ಲೆಂಬ ಮಹಾಬಾಧೆ ಬರಲಿ - ಮತ್ತೆ |
ಇದನು ಬಿಟ್ಟು ಇನ್ನಿಲ್ಲೆಂಬ ಮಹಾಭೀತಿ ಬರಲಿ - ಮತ್ತೆ |
ಇದನು ಬಿಟ್ಟು ಇನ್ನಿಲ್ಲೆಂಬ ಮಹಾ ಅಪಾಯ ಬರಲಿ - ಮತ್ತೆ |
ಅದಕ್ಕೊಂದು ಇದಕ್ಕೊಂದು ಯೋಚಿಸಬೇಡಿ ಕಾಣಿರೊ |
ಪುರಂದರವಿಠಲ ತನ್ನ ನಂಬಿದವರ ಹಿಂದಿಕ್ಕಿಕೊಂಬ ಕಾಣಿರೊ 1
ಮಟ್ಟತಾಳ
ಅಪಾಯ ಕೋಟಿ ಕೋಟಿಗಳಿಗೆ ಉಪಾಯ ಒಂದೆ |
ಹರಿದಾಸರು ತೋರಿಸಿಕೊಟ್ಟ ಉಪಾಯ ಒಂದೆ |
ಅಪಾಯ ಕೋಟಿ-ಕೋಟಿಗಳಿಗೆ ಉಪಾಯ ಒಂದೆ |
ಪುರಂದರವಿಠಲನೆಂದು ಬಾಯ್ಬಿಟ್ಟು ಕರೆವ
ಉಪಾಯ ಒಂದೆ ಕಾಣಿರೊ 2
ತ್ರಿವಿಡೆ ತಾಳ
ಅಜಾಮಿಳನ ಯಮದೂತರು ಎಳೆಯಲು |
ಆಗಲಲ್ಲಿಗೆ ಬಂದರಚ್ಯುತನ ದೂತರು |
ಯಮದಂಡವ ಖಂಡಿಸಿ ತುಂಡಿಸಲಾಕ್ಷಣ |
ಆಗಲ್ಲಲ್ಲಿಗೆ ಬಂದರಚ್ಯುತನ ದೂತರು |
ನಾರಾಯಣ ಎಂದು ಚೀರುವ ಧ್ವನಿ ಕೇಳಿ |
ಆಗಲ್ಲಲ್ಲಿಗೆ ಬಂದರಚ್ಯುತನ ದೂತರು |
ಪುರಂದರವಿಠಲ ಕರುಣಿಪನಾಗಿ | 3
ಅಟ್ಟತಾಳ
ಹಾ ಕೃಷ್ಣ ದ್ವಾರಕಾವಾಸಿ ಎಂಬುದ ಕೇಳಿ |
ದ್ರೌಪದಿಯ ಮಾನವ ಕಾಯ್ದ ಬೇಕೆನುತಲಿ |
ಶ್ರೀಪತಿ ಅಕ್ಷಯವಸ್ತ್ರವರವನಿತ್ತು |
ದ್ರೌಪದಿಯ ಮಾನವ ಕಾಯ್ದ ಬೇಕೆನುತಲಿ |
ಆಪತ್ತಿಗೆ ನಂಟ ಪುರಂದರವಿಠಲ |
ದ್ರೌಪದಿಯಭಿಮಾನ ಕಾಯ್ದನಾತ | 4
ಆದಿ ತಾಳ
ಹರಿಹರಿ ಎಂದು ಕರೆವುದೆ ತಡ |
ಕರೆದಲ್ಲಿಗೆ ಬಾಹ-ಕರೆವಲ್ಲಿಗೆ ಬಾಹ |
ಸುರ-ನರ-ಉರಗ ಲೋಕದಲ್ಲಿದ್ದರೂ ಸರಿ - ನೀ |
ಕರೆದಲ್ಲಿಗೆ ಬಾಹ-ಕರೆವಲ್ಲಿಗೆ ಬಾಹ |
ಪುರಂದರವಿಠಲನೆಂದೊಮ್ಮೆ ಕರೆಯಲು |
ಕರೆದಲ್ಲಿಗ ಬಾಹ 5
ಜತೆ
ತನ್ನ ಡಿಂಗರಿಗರ ತಾನೆತ್ತಿಕೊಂಬಲ್ಲಿ |
ಸನ್ನದ್ಧ ಸರ್ವದಾ ಪುರಂದರವಿಠಲ ||
No comments:
Post a Comment