Tuesday, 24 December 2019

ಹರಿಕಥಾಮೃತ ಸವಿಯ harikathamruta saviya

ಹರಿಕಥಾಮೃತ ಸವಿಯ ಹರಿದಾಸರಲ್ಲದೆ
ದುರುಳ ಮಾನವರದರ ಪರಿ ಬಲ್ಲಿರೇನಯ್ಯ ಪ.
ಸ್ತನ ಪಾನದ ರುಚಿಯ ಚಿಣ್ಣರು ಬಲ್ಲರಲ್ಲದೆ
ಮೊಣ್ಣ ಬೊಂಬೆಗಳದರ ಬಗೆ ಬಲ್ಲುವೆ ||
ಅನ್ನಪಾನದ ರುಚಿಯ ಕೊನೆ ನಾಲಿಗೆಯಲ್ಲದೆ
ಅಣಿ ಮಾಡಿಕೊಡುವ ಆ ಕರ ಬಲ್ಲುದೇನಯ್ಯ 1
ನವನೀರದಾರ್ಭಟಕೆ ನವಿಲುಗಳು ನಲಿವಂತೆ
ಕಾವು ಕಾವೆಂಬ ಕಾಕವು ಬಲ್ಲುದೆ ? ||
ದಿವಸಕರನುದಯಿಸಲು ಅರಳುವಬ್ಜಗಳಂತೆ
ದಿವಸಾಂಧ ಪಕ್ಷಿಗಳು ಬಗೆಬಲ್ಲುವೇನಯ್ಯ 2
ಮೊಲ್ಲೆ - ಮಲ್ಲಿಗೆ ಮುಡಿಯಬಲ್ಲ ಮಾನವರಂತೆ
ಭಲ್ಲೂಕಗಳು ಅದರ ಬಗೆ ಬಲ್ಲುವೆ ?
ಫುಲ್ಲಾಕ್ಷ ಶ್ರೀ ಪುರಂದರವಿಠಲರಾಯನನು
ಬಲ್ಲ ಮಾನವರಲ್ಲದೆಲ್ಲರೂ ಬಲ್ಲರೆ ? 3

No comments:

Post a Comment