Tuesday, 22 October 2019

ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ intha hennanu nanelli kaneno

ಇಂಥ ಹೆಣ್ಣನು ನಾನೆಲ್ಲಿ ಕಾಣೆನೊ |
ಹೊಂಚತಾರಿ ಕಾಣಿರೊ ಪ
ಸಂತತ ಸುರರಿಗೆ ಅಮೃತವನುಣಿಸಿದ
ಪಂತಿಯೊಳಗೆ ಪರಪಂತಿಯ ಮಾಡಿದ ಅ.ಪ
ಮಂದರಗಿರಿ ತಂದು ಸಿಂಧುವಿನೊಳಗಿಟ್ಟು
ಚೆಂದದಿಂದಲಿ ಕಡೆದಮೃತವ ತೆಗೆದು ||
ಇಂದುಮುಖಿಯೆ ನೀ ಬಡಿಸೆಂದು ಕೊಟ್ಟರೆ |
ದಂಧನೆಯನು ಮಾಡಿ ದೈತ್ಯರ ವಂಚಿಸಿದ 1
ವಿಸುವಾಸದಿಂದಲಿ ಅಸುರಗೆ ವರವಿತ್ತು |
ತ್ರಿಶುಲಧರನು ಓಡಿ ಬರುತಿರಲು ||
ನಸುನಗುತಲಿ ಬಂದು ಭಸುಮಾಸುರನಿಗೆ |
ವಿಷಯದಾಸೆಯ ತೋರಿ ಭಸುಮವ ಮಾಡಿದ 2
ವಸುಧೆಯೊಳಗೆ ಹೆಣ್ಣು ಒಸಗೆಯಾಗದ ಮುನ್ನ |
ಬಸುರಿಲ್ಲದೆ ಬೊಮ್ಮನ ಪಡೆದಿಹಳು ||
ಕುಸುಮನಾಭ ನಮ್ಮ ಪುರಂದರವಿಠಲನ |
ಪೆಸರ ಪೊತ್ತವಳು ಈ ಹೊಸ ಕನ್ನಿಕೆಯು 3

No comments:

Post a Comment