Tuesday, 22 October 2019

ಇದೀಗ ಭಕುತಿಯು ಮತ್ತಿದೀಗ idiga bhakutiya

ಇದೀಗ ಭಕುತಿಯು ಮತ್ತಿದೀಗ ಮುಕುತಿಯು ಪ.
ಮಧುದ್ವಿಷನ ಪದಕಮಲಕೆ
ಮಧುಪನಂತೆ ಎರಗುತಿಹುದು ಅಪ
ಶ್ರೀಕಾಂತ ಮೂರುತಿ ಬಾಹ್ಯಾಂತರದಿ
ಏಕಾಂತದಿ ನೆನೆದಾನಂದ ತುಳುಕಾಡಿ ||
ಮುಖ ವಿಕಾಸದಿ ತನುವ ಮರೆದು
ವಿಕಳ ಭಾವದಿ ಉಬ್ಬುಬ್ಬಿ ಕುಣಿವುದು 1
ಡಂಭವ ಸಾರುವರತ್ತತ್ತ ಜಡಿದು
ಕುಂಭಕ ರೇಚಕ ಪೂರಕವಿಡಿದು ||
ಅಂಬುಧಿಶಾಯಿ ಪದಾಂಬುಜ ವೀಕ್ಷಿಸಿ
ಬಿಂಬವ ಕಾಂಬುವ ಹಂಬಲವಿಡಿವುದು 2
ಕಂಡವರ ಕಾಲಿಗೆ ಕುಮನುಜರಿಗೆ
ಮಂಡೆಯ ಬಾಗದೆ ಪರೇಶ ಕೊಟ್ಟಷ್ಟು ||
ಉಂಡು ಸಜ್ಜನರ ಕಂಡು ಸುಖಿಸಿ ಪಾ
ಷಂಡ ಸಂಭಾಷಣೆ ಸೋಕದೆ ಬಾಳ್ವುದು 3
ತಪುತಾರ - ಕಂಬುಲಾಂಛನ ಪಿಡಿದು
ಗುಪಿತ ಮಂತ್ರಗಳೊರೆವ ಗುರುಗ -
ಳುಪದೇಶ ಕ್ರಮವ ಮೀರದೆ ಇತರ
ಕಪಟ ಬಿಟ್ಟು ನಲಿದು ಸುಖಿಪುದು 4
ಸದ್ಭಕ್ತಿ ಸದ್ಧರ್ಮ ಮಾಡುತ ನೋಡುತ
ಸದ್ವಿಷ್ಣು ಸಚ್ಛಾಸ್ತ್ರ ಹೇಳುತ ಕೇಳುತ ||
ದುಗ್ಧ ಸಮುದ್ರೇಶ ಪುರಂದರವಿಠಲಗೆ
ಇದ್ದ ಸಂಪದವ ತಪ್ಪದೆ ಒಪ್ಪಿಸುವುದು 5

No comments:

Post a Comment