Saturday, 19 October 2019

ಅಂತಕನ ದೂತರಿಗೆ antakana dutarige

ಅಂತಕನ ದೂತರಿಗೆ ಕೃಪೆಯಿಲ್ಲವದರಿಂದ |
ಚಿಂತೆಯನು ಬಿಟ್ಟು ಶ್ರೀ ಹರಿಯೆ ನೆನೆ ಮನವೆ ಪ.
ದಿವರಾತ್ರಿಯೆನ್ನದೇ ತಿರುಗಿ ಲಂಪಟನಾಗಿ |
ಸವಿಗಂಡ ಊಟಗಳ ಉಣಲರಿಯದೆ |
ಅವನ ಕೊಂದು ಇವನ ಕೊಂದು ಅರ್ಥವನು ಗಳಿಸಿಕೊಂಡು |
ಜವನ ದೂತರು ಬಂದು ಎಳೆವ ಹೊತ್ತರಿಯೆ 1
ಮೊನ್ನೆ ಮದುವೆಯಾದೆ ಕರೆವುವು ಒಂದೆರಡಮ್ಮೆ |
ನಿನ್ನೆ ಕೊಂಡೆನು ಕ್ಷೇತ್ರ ಫಲಬಾಹೊದು ||
ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲಾ |
ತನ್ನ ದೂತರು ಬಂದು ಎಳೆವ ಹೊತ್ತರಿಯೆ 2
ಹೊಸ ಮನೆಯ ಕಟ್ಟಿದೆನು ಗೃಹಶಾಂತಿ ಮನೆಯೊಳಗೆ |
ಬಸಿರೆ ಹೆಂಡತಿ ಮಗನ ಮದುವೆಯು ನಾಳೆ ||
ಹಸನವಾಗಿದೆ ಬದುಕು ಸಾಯಲಾರೆನು ಎನಲು |
ವಿಷಮ ದೂತರು ಬಂದು ಎಳೆವ ಹೊತ್ತರಿಯೆ 3
ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ
ಮತ್ತೊಬ್ಬ ಮಗನ ಉಪನಯನ ನಾಳೆ ||
ಅರ್ಥಿಯಾಗದೆ ಬದುಕು ಸಾಯಲಾರೆನು ಎನಲು |
ಮೃತ್ಯು ಹೆಡತಲೆಯಲಿ ನಗುತಿಹುದರಿಯೆ 4
ಅಟ್ಟಡಿಗೆ ಉಣಲಿಲ್ಲ ಇಟ್ಟ ನೀರ್ಮೀಯಲಿಲ್ಲ |
ಕೊಟ್ಟ ಸಾಲವ ಕೇಳ್ವ ಹೊತ್ತ ಕಾಣೆ ||
ಕಟ್ಟಕಡೆಯ ದಿವಸ ತಂಬಿದ ಬಳಿಕಿರಲಿಲ್ಲ | ಇಷ್ಟರೊಳು ಪುರಂದರವಿಠಲನ ನೆನೆಮನೆವೆ 5

No comments:

Post a Comment