ಅಂದಿಂದ ನಾ ನಿನ್ನ ನೆರೆ ನಂಬಿದೆನೊ ಕೃಷ್ಣ
ತಂದೆ ಗೋವಿಂದ ಮುಕುಂದ ನಂದನ ಕಂದ ಪ
ಬಲವಂತ ಉತ್ತಾನಪಾದರಾಯನ ಕಂದ
ಮಲತಾಯಿ ನೂಕಲು ಅಡವಿಯೊಳು ||
ಜಲಜಾಕ್ಷ ನಿನ್ನ ಧ್ಯಾನದಿ ತಪವಿರಲಾಗಿ
ಒಲಿದು ಧ್ರುವಗೆ ಪಟ್ಟಕಟ್ಟಿದ್ದ ಕೇಳಿ 1
ನಕ್ರರಿಗೆ ಗಜರಾಜ ಸಿಕ್ಕಿ ಸರಸಿಯೊಳು
ದುಕ್ಖದಿ ಶ್ರೀಹರಿ ಸಲಹೆನ್ನಲು ||
ಚಕ್ರದಿ ನೆಗಳ ಕಂಠವ ತರಿದು ಭಕ್ತನ
ಅಕ್ಕಸ ಪರಿದಾದಿಮೂಲನೆಂಬುದ ಕೇಳಿ 2
ದ್ರುಪದನ ಸುತೆಯ ದುಃಶ್ಯಾಸನ ಸಭೆಯೊಳು
ಕಪಟದಿ ಸೀರೆಯ ಸೆಳೆಯುತಿರೆ ||
ಸುಪರ್ಣವಾಹನ ಕೃಷ್ಣ ಸಲಹೆಂಬಬಲೆಯನು
ಅಪಮಾನದಿಂದ ಕಾಯ್ದ ಹರಿಯೆಂಬುದನು ಕೇಳಿ 3
ಹರಿನಾರಾಯಣನೆಂದು ಪ್ರಹ್ಲಾದ ಬರೆಯಲು
ದುರುಳ ದಾನವ ಅವನಿಗೆ ಮುನಿದು ||
ಕರೆ ನಿನ್ನ ಒಡೆಯನ ಎಂದು ಗರ್ಜಿಸೆ ನರ
ಹರಿ ಬಂದು ಒಡನೆಯೆ ಕಾಯ್ದನೆಂಬುದ ಕೇಳಿ 4
ಅಂಬರೀಷಗೆ ದೂರ್ವಾಸ ಶಾಪವ ಕೊಡೆ
ಅಂಬುಜಲೋಚನ ಚಕ್ರದಿಂದ ||
ಬೆಂಬತ್ತಿ ಮುನಿಯ ಶಾಪವ ಪರಿಹರಿಸಿದ
ಕಂಬು ಚಕ್ರಧರ ಹರಿಯೆಂಬುದ ಕೇಳಿ 5
ಛಲಬೇಡ ರಾಮನ ಲಲನೆಯ ಬಿಡು ಎಂದು
ತಲೆಹತ್ತರವಗೆ ಪೇಳಲು ತಮ್ಮನ ||
ಬಳಲಿಸಿ ಹೊರಡಿಸೆ ಅವ ನಿನ್ನ ಮೊರೆಹೊಗಲು
ಸಲೆ ವಿಭೀಷಣಗೆ ಲಂಕೆಯನಿತ್ತುದನು ಕೇಳಿ 6
ಸುರ-ನರ-ನಾಗಲೋಕದ ಭಕ್ತ ಜನರನು
ಪೊರೆಯಲೋಸುಗ ವೈಕುಂಠದಿಂದ ||
ಸಿರಿಸಹಿತದಿ ಬಂದು ಶೇಷಾಚಲದಿ ನಿಂತ
ಪುರಂದರವಿಠಲ ನಿನ್ನಯ ಚರಣವ ಕಂಡು 7
No comments:
Post a Comment