Saturday, 6 June 2020

ನೋಡುವುದೆ ಕಣ್ಣು, ಕೇಳುವುದೆ ಕಿವಿ noduvade kannu


ನೋಡುವುದೆ ಕಣ್ಣು, ಕೇಳುವುದೆ ಕಿವಿ |
ಪಾಡುವುದೇ ವದನ ಪ
ಗಾಡಿಕಾರ ಶ್ರೀ ವೇಣುಗೋಪಾಲನ |
ಕೂಡಿಕೊಂಡಾಡುವ ಸುಖದ ಸೊಬಗನು ಅ.ಪ
ಎಳೆದುಳಸಿಯ ವನಮಾಲೆಯಿಂದೊಪ್ಪುವ |
ಎಳೆಯ ಗೋವಳರೊಡನಾಡುವ |
ತಳಿತ ತರುವಿನ ನೆಳಲಲ್ಲಿ ನಲಿವನ |
ನಳಿನನಾಭನ ಮುದ್ದು ನಗೆಯ ಸೊಬಗನು 1
ಅರಸಂಚೆಯೋಲು ಕುಣಿವ ನವಿಲಂತೆ ನಲಿಯುವ |
ಮರಿಗೋಗಿಲೆಯಂತೆ ಕೂಗುವನ ||
ಎರಳೆಯಂತೆ ಜಿಗಿಜಿಗಿದಾಡುವ ತುಂಬಿ |
ಶಿರವ ತಗ್ಗಿಸುವಂತೆ ಝೇಂಕರಿಸುವನ 2
ಮೊಲ್ಲೆಮಲ್ಲಿಗೆ ಜಾಜಿ ಪೂಮಾಲೆಗಳ ಧರಿಸಿ |
ಚೆಲ್ವೆಯರಿಗೆ ಮುಡಿಸುವನ ||
ಜಲಕೇಳಿ ವನಕೇಳಿ ಮೊದಲಾದಾಟಗಳಿಂದ |
ಚೆಲ್ಲೆಗಂಗಳ ಮುದ್ದು ಘುಲ್ಲನಯನನ 3
ಪೊಂಗೊಳಲೂದುತ ಮೃಗಖಗ ಜಾತಿಯ |
ಸಂಗಡಿಸುತಲಿಪ್ಪನ ||
ಅಂಗವ ಮರೆತು ನೂರಂಗನೆಯರಲಿ ಬೆಳು-|
ದಿಂಗಳೊಳಗೆ ಕುಣಿದಾಡುವ ದೇವನ 4
ಮುದುಕಿ ಕುಬ್ಜೆಯ ಡೊಂಕ ತಿದ್ದಿ ರೂಪಿಯ ಮಾಡಿ |
ಸೆರಗಪಿಡಿಸಿ ಕೊಂಬನ ||
ಕರುಣಾಕರ ಶ್ರೀ ಪುರಂದರವಿಠಲ |
ಶರಣಾಗತ ರಕ್ಷಕ ರಮೆಯರಸನ 5


No comments:

Post a Comment