Saturday, 6 June 2020

ನಿನ್ನ ದಿವ್ಯ ಮೂರುತಿಯ ninna divya muratiya


ನಿನ್ನ ದಿವ್ಯ ಮೂರುತಿಯ ಕಣ್ಣದಣಿಯಲು ನೋಡಿ
ಧನ್ಯನಾದೆನು ಧರೆಯೊಳು ||
ಇನ್ನು ಈ ಭವ ಭಯಕೆ ಅಂಜಲೇತಕೆ ದೇವ
ಚೆನ್ನ ಶ್ರೀ ವೆಂಕಟೇಶಾ ಈಶಾ ಪ
ಏಸು ಜನುಮದ ಸುಕೃತ ಫಲವು ಬಂದೊದಗಿತೋ
ಈ ಸ್ವಾಮಿ ಪುಷ್ಕರಣಿಯೊಳ್
ನಾ ಸ್ನಾನವನು ಮಾಡಿ ವರಾಹ ದೇವರ ನೋಡಿ
ಶ್ರೀ ಸ್ವಾಮಿ ಮಹಾದ್ವಾರಕೆ
ಈ ಶರೀರವನು ಈಡಾಡಿ ಪ್ರದಕ್ಷಿಣೆ ಮಾಡಿ
ಲೇಸಿನಿಂದಲಿ ಪೊಗಳುತ
ಆ ಸುವರ್ಣದ ಗರುಡ ಗಂಬವನು ಸುತ್ತಿ ಸಂ
ತೋಷದಿಂ ಕೊಂಡಾಡಿದೆ ಬಿಡದೆ 1
ನೆಟ್ಟನೆಯೆ ದ್ವಾರವ ದಾಟಿ ಪೋಗುತಲಿರಲು
ದಟ್ಟಣೆಯ ಮಹಾಜನದೊಳು
ಕೃಷ್ಣಾಜಿನದವರ ಕೈ ಪೆಟ್ಟು ಕಾಣುತ್ತ ಕಂ
ಗೆಟ್ಟು ಹರಿಹರಿಯೆನುತಲಿ
ಗಟ್ಟಿ ಮನಸಿನಲಿ ತಲೆಚಿಟ್ಟಿಟ್ಟು ಶೀಘ್ರದಲಿ
ಕಟ್ಟಂಜನಕೆ ಪೋಗುತ
ಬೆಟ್ಟದಧಿಪತಿ ನಿನ್ನ ದೃಷ್ಟಿಯಿಂದಲಿ ನೋಡೆ
ಸುಟ್ಟೆ ಎನ್ನಯ ದುರಿತವಾ-ದೇವಾ 2
ಶಿರದಲಿ ರವಿಕೋಟಿ ತೇಜದಿಂದೆಸೆಯುವ
ಕಿರೀಟ ವರ ಕುಂಡಲಗಳ
ಕೊರಳಲ್ಲಿ ಸರ ವೈಜಯಂತಿ ವನಮಾಲೆಯನು
ಪರಿಪರಿಯ ಹಾರಗಳನು
ಉರದಿ ಶ್ರೀವತ್ಸವನು ಕರದಿ ಶಂಖ-ಚಕ್ರಗಳ
ವರನಾಭಿಮಾಣಿಕವನು
ನಿರುಪ ಮಣಿಖಚಿತ ಕಟಿಸೂತ್ರ ಪೀತಾಂಬರವ
ಚರಣಯುಗದಂದುಗೆಯನು - ಇನ್ನು 3
ಇಕ್ಷುಚಾಪನ ಪಿತನೆ ಪಕ್ಷೀಂದ್ರವಾಹನನೆ
ಲಕ್ಷ್ಮೀಪತಿ ಕಮಲಾಕ್ಷನೆ
ಅಕ್ಷತ್ರಯ ಅಜ ಸುರೇಂದ್ರಾದಿವಂದಿತನೆ
ಸಾಕ್ಷಾಜ್ಜಗನ್ನಾಥನೇ
ರಾಕ್ಷಸಾಂತಕ ಭಕ್ತ ವತ್ಸಲ ಕೃಪಾಳು ನಿರ
ಪೇಕ್ಷ ನಿತ್ಯತೃಪ್ತನೇ
ಕುಕ್ಷಿಯೊಳಗಿರೇಳು ಭುವನವನು ಪಾಲಿಪನೆ
ರಕ್ಷಿಸುವುದೊಳಿತು ದಯದಿ -ಮುದದಿ 4
ಉರಗಗಿರಿಯರಸ ನಿನ್ನ ಚರಣ ನೋಡಿದ ಮೇಲೆ
ಉರಗ ಕರಿ ವ್ಯಾಘ್ರ ಸಿಂಹ
ಅರಸು ಚೋರಾಗ್ನಿ ವೃಶ್ಚಿಕ ಕರಡಿ ಮೊದಲಾದ
ಪರಿಪರಿಯ ಭಯಗಳುಂಟೇ
ಪರಮ ವಿಷಯಗಳ ಲಂಪಟದೊಳಗೆ ಸಿಲುಕಿಸದೆ
ಕರುಣಿಸುವುದೊಳಿತು ದಯವಾ
ಸ್ಮರಗಧಿಕ ಲಾವಣ್ಯ ಪುರಂದರ ವಿಠಲನೇ
ಶರಣಜನ ಕರುಣಾರ್ಣವಾ ದೇವಾ 5


No comments:

Post a Comment